` ಹೂ ಆ್ಯಮ್ ಐ’ ಕಾರ್ಯಕ್ರಮ

`ನಾವ್ಯಾರು’ ಎಂಬ ಪ್ರಶ್ನೆಯನ್ನು ಮಹಿಳೆ/ಹುಡುಗಿಯರು ತಮ್ಮ ಅಂತರಾಳದಲ್ಲಿ ಕೇಳಿಕೊಂಡಾಗ ಮುಂದೆ ಭವಿಷ್ಯದಲ್ಲಿ ನಾವು ಏನಾಗಲು ಬಯಸುತ್ತೇವೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಮಹಿಳೆಗೆ ಸೂಕ್ತ ಸ್ಥಾನಮಾನ ಸಿಗಬೇಕಾದರೆ ಉತ್ತಮ ಗುಣ ಹಾಗೂ ಕೌಶಲ್ಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯವಾಗುವುದು ಎಂದು ಮಂಗಳೂರಿನ ಶಾಂತಿ ಸಂದೇಶ ಟ್ರಸ್ಟ್‍ನ ತರಬೇತುದಾರಿಣಿ ಹಾಗೂ ಸಲಹೆಗಾರರು ಆಗಿರುವ ಸಿಸ್ಟರ್ ಲಿಲ್ಲಿ ಪುಷ್ಪಾರವರು ಹೇಳಿದರು.

ಅವರು ಜೂ.12 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಮಹಿಳಾ ಸಂಘದ ವತಿಯಿಂದ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ `ಹೂ ಆ್ಯಮ್ ಐ’ ವಿಷಯದ ಬಗೆಗಿನ ಕಾರ್ಯಾಗಾರದಲ್ಲಿ ಮಾತನಾಡಿದರು. ಮಹಿಳೆಗೆ ವಯಸ್ಸು ಮುಖ್ಯವಲ್ಲ. ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಹೊಂದುತ್ತೇವೆಯಾ ಎಂಬುದರ ಅರಿವು ಮಹಿಳೆಗೆ ಬೇಕಾಗುತ್ತದೆ. ಪ್ರಸಕ್ತ ವಿದ್ಯಾಮಾನದಲ್ಲಿ ವಿದ್ಯಾರ್ಥಿನಿಯರು ಸರಿಯಾದ ಧಿಕ್ಕಿನಲ್ಲಿ ಸಾಗುತ್ತಾರೆಯೋ, ಭವಿಷ್ಯ ಉಜ್ವಲವಾಗಬೇಕಾದರೆ ಯಾವ ತೆರನಾದ ಕೋರ್ಸ್ ಅಗತ್ಯವಿದೆ ಎಂಬುದರ ಸ್ಪಷ್ಟ ಅರಿವು ಮಹಿಳೆ ಹೊಂದಿರಬೇಕು. ಹುಡುಗಿಯರು ತನ್ನೊಳಗಿನ ಕೀಳಿರಿಮೆ ತೆಗೆದುಹಾಕಬೇಕು ಮಾತ್ರವಲ್ಲದೆ ಏನಾದರೂ ಸಮಸ್ಯೆ ಬಂದಲ್ಲಿ ಚೈಲ್ಡ್ ಹೆಲ್ಪ್‍ಲೈನ್ ವಿಭಾಗಕ್ಕೆ ಫೋನಾಯಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಹುಡುಗ-ಹುಡುಗಿಯರನ್ನೊಳಗೊಂಡ ಸಹ-ಶಿಕ್ಷಣವು ವಿದ್ಯಾರ್ಥಿಗಳಿಗೆ ಆರೋಗ್ಯಕರವಾದ ಉತ್ತಮ ವ್ಯಕ್ತಿತ್ವವನ್ನು ಬೆಳೆಸಲು ಸಹಕಾರಿ ಎನಿಸುತ್ತದೆ. ಕಾಲೇಜು ಹಂತದಲ್ಲಿ ವಿದ್ಯಾರ್ಥಿನಿಯರು ಮನೆ ಅಡುಗೆಯತ್ತ ಒಲವು ತೋರಿಸುತ್ತಾ ಹೆಚ್ಚಿನ ಅಪಾಯವನ್ನು ತಪ್ಪಿಸಬಹುದಾಗಿದೆ. ಟೀನೇಜ್ ಹರೆಯದಲ್ಲಿ ವಿದ್ಯಾರ್ಥಿನಿಯರು ಯಾವುದೇ ಸಮಸ್ಯೆಯನ್ನು ತಂದೊಡ್ಡದೆ ಹೇಗೆ ಬ್ಯಾಲೆನ್ಸ್ ಮಾಡುವುದು ಎಂಬಂತೆ ಎಚ್ಚರದಿಂದ ಇರಬೇಕಾಗುತ್ತದೆ. ಗುರುತು-ಪರಿಚಯವಿಲ್ಲದವರೊಡನೆ ಮಾತನಾಡದಿರುವಿಕೆ, ಜಂಕ್ ಫುಡ್‍ಗೆ ಆಸಕ್ತರಾಗದೆ ವಿದ್ಯಾರ್ಥಿನಿಯರು ಕೇವಲ ಕಲಿಕೆಯಲ್ಲಿ ಮಗ್ನರಾಗಿ ಒಳ್ಳೆಯ ಭವಿಷ್ಯವನ್ನು ಕಂಡುಕೊಳ್ಳುವುದು ಅತೀ ಮುಖ್ಯವಾಗಿದೆ ಎಂದರು.

ಮಹಿಳಾ ಸಂಘದ ನಿರ್ದೇಶಕಿಯರಾದ ಲವೀನಾ ಸಾಂತ್‍ಮಾಯೆರ್, ಸುಮಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನುಪಮಾ ಮತ್ತು ಚೈತ್ರಾ ಪ್ರಾರ್ಥಿಸಿದರು. ಮಹಿಳಾ ಸಂಘದ ಅಧ್ಯಕ್ಷೆ ಸ್ವಸ್ತಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ವಂದಿಸಿದರು.

ಬಾಕ್ಸ್
ಪ್ರಸಕ್ತ ಸನ್ನಿವೇಶದಲ್ಲಿ ಸಾಕಷ್ಟು ಮಕ್ಕಳು ಕೌಟುಂಭಿಕ ಸಮಸ್ಯೆಯಿಂದ ಬಳಲುತ್ತಿರುವುದು, ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗುತ್ತಿರುವುದು, ಮಾದಕ ವಸ್ತುಗಳಿಗೆ ಮಾರು ಹೋಗುತ್ತಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ವಿದ್ಯಾರ್ಥಿಗಳು ಪುಸ್ತಕದ ಬದನೆಕಾಯಿ ಎಂಬಂತೆ ಆಗದೆ ಕೌಶಲ್ಯಯುಕ್ತ ಪ್ರಾಪಂಚಿಕ ಜ್ಞಾನ ಸಂಪಾದಿಸುವತ್ತ ಸಮಗ್ರ ಹೆಜ್ಜೆ ಇಡಬೇಕಾಗಿದೆ. ಶಿಸ್ತು, ಸಮರ್ಪಣೆ, ಸರಿಯಾದ ಮಾರ್ಗದರ್ಶನದೊಂದಿಗೆ ಸರಿಯಾದ ನಿರ್ಣಯ ಕೈಗೊಳ್ಳುವುದು, ಯೋಚನೆ-ಯೋಜನೆಗಳನ್ನು ನಿಗದಿತ ಅವಧಿಯೊಳಗೆಪೂರೈಸುವುದು ವಿದ್ಯಾರ್ಥಿನಿಯರು ಮೈಗೂಡಿಸಿಕೊಳ್ಳಬೇಕಾಗುತ್ತದೆ ಜೊತೆಗೆ ಇಂಪಾಸಿಬಲ್ ಎನ್ನುವ ಪದವನ್ನು ತನ್ನ ಡಿಕ್ಷನರಿಯಿಂದ ತೆಗೆದು ಹಾಕಬೇಕಾಗುತ್ತದೆ.

ಸಿಸ್ಟರ್ ಲಿಲ್ಲಿ ಪುಷ್ಪಾ, ತರಬೇತುದಾರಿಣಿ ಹಾಗೂ ಸಲಹೆಗಾರರು, ಶಾಂತಿ ಸಂದೇಶ ಟ್ರಸ್ಟ್, ಮಂಗಳೂರು