ಸ್ವಾಗತ-ಸನ್ಮಾನ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ ನವದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ಕಾಲೇಜ್‌ನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜ್ಯೂನಿಯರ್ ಅಂಡರ್ ಆಫೀಸರ್ ಜೊವಿನ್ ಜೋಸೆಫ್‌ರವರು ಪೆರೇಡ್ ಮುಕ್ತಾಯಗೊಳಿಸಿ, ಹಿಂತಿರುಗಿ ಕಾಲೇಜ್‌ಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸುವ ಹಾಗೂ ಸನ್ಮಾನಿಸುವ ಕಾರ್ಯಕ್ರಮನ್ನು ಕಾಲೇಜು ವತಿಯಿಂದ ಫೆ.26 ರಂದು ಹಮ್ಮಿಕೊಳ್ಳಲಾಗಿತ್ತು.

ದ್ವಿತೀಯ ಬಾರಿ ಭಾಗವಹಿಸುವಿಕೆ:
ಭಾರತದಲ್ಲಿ ಒಟ್ಟು 17 ಡೈರೆಕ್ಟರೇಟ್ ಎನ್.ಸಿ.ಸಿ ಘಟಕಗಳಿದ್ದು ಅದರಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಒಂದು. ವಿವಿಧ ಭಾಗಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹತ್ತು ಮಂದಿಯಲ್ಲಿ ಮಂಗಳೂರು ಗ್ರೂಪಿನ ‘19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ’ಯಲ್ಲಿ ಜೊವಿನ್ ಜೋಸೆಫ್ ಓರ್ವರಾಗಿದ್ದರು. 2015ರಲ್ಲಿ ಜ್ಯೂನಿಯರ್ ಅಂಡರ್ ಆಫೀಸರ್ ಆಗಿದ್ದ ಸಂದರ್ಭದಲ್ಲಿ ದೆಹಲಿಯ ರಾಜಪಥದಲ್ಲಿ ನಡೆಯುವ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶವನ್ನೂ ಕೂಡ ಜೊವಿನ್‌ರವರು ಪಡೆದಿದ್ದರು. ಪ್ರಸ್ತುತ ಸೀನಿಯರ್ ಅಂಡರ್ ಆಫೀಸರ್ ಆಗಿ ಭಾಗವಹಿಸಿದ್ದು ಎರಡು ಬಾರಿ ಪಥಸಂಚಲನದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಜೊವಿನ್ ಜೋಸೆಫ್‌ರವರದ್ದಾಗಿದೆ. ಕಾಲೇಜ್‌ನಲ್ಲಿ 2017-18 ರ ಶೈಕ್ಷಣಿಕ ವರ್ಷದಲ್ಲಿ ಬೆಸ್ಟ್ ಎನ್.ಸಿ.ಸಿ ಅಲ್‌ರೌಂಡರ್ ಪ್ರಶಸ್ತಿ,2017-18 ರಲ್ಲಿ ಜ್ಯೂನಿಯರ್ ಅಂಡರ್ ಆಫೀಸರ್ ಮತ್ತು ಎನ್.ಸಿ.ಸಿ ಪದಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೊವಿನ್ ಜೋಸೆಫ್‌ರವರು ರಾಜಪಥದಲ್ಲಿ ನಡೆಯುವ ಪೆರೇಡ್‌ನಲ್ಲಿ ಪಥಸಂಚಲನ ಲೈನ್ ಹೆಡ್(ರೈಟ್ ಮಾರ್ಕರ್) ಆಗಿ ಕರ್ತವ್ಯ ನಿರ್ವಹಿಸಿದ್ದರು.

೧೦೬ ಕೆಡೆಟ್‌ಗಳ ಪೈಕಿ ಓರ್ವರು:
ಭಾರತದಲ್ಲಿ ಸುಮಾರು 13 ಲಕ್ಷಕ್ಕೂ ಅಧಿಕ ಕೆಡೆಟ್‌ಗಳಿದ್ದು ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು ೨೩೦೦ಕ್ಕೂ ಮಿಕ್ಕಿ ಕೆಡೆಟ್‌ಗಳು ಮಾತ್ರ ಪೆರೇಡ್‌ನಲ್ಲಿ ಭಾಗವಹಿಸಲು ಅವಕಾಶ ಪಡೆಯಲು ಅರ್ಹರಾಗಿದ್ದರು. ಮಂಗಳೂರು, ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಬೆಳಗಾಂ ಮುಂತಾದೆಡೆ ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಆರ್‌ಡಿ ಪೆರೇಡ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯಬೇಕಾಗಿತ್ತು. ಕರ್ನಾಟಕ ಹಾಗೂ ಗೋವಾ ಎನ್.ಸಿ.ಸಿ ಡೈರೆಕ್ಟರೇಟ್‌ನ್ನು ಪ್ರತಿನಿಧಿಸುತ್ತಿರುವ ಒಟ್ಟು 106 ಕೆಡೆಟ್‌ಗಳ ಪೈಕಿ ಜೊವಿನ್ ಜೋಸೆಫ್‌ರವರು ಓರ್ವರು ಎಂಬುದು ಉಲ್ಲೇಖನೀಯವಾಗಿದೆ.

ಜೊವಿನ್‌ರವರಿಗೆ ಸನ್ಮಾನ:
ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿ ಹಿಂತಿರುಗಿದ ಜೊವಿನ್ ಜೋಸೆಫ್‌ರವನ್ನು ಈ ಸಂದರ್ಭದಲ್ಲಿ ಅತಿಥಿ ಗಣ್ಯರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಜೊವಿನ್‌ರವರು ಆರ್.ಡಿ ಪೆರೇಡ್‌ಗೆ ಆಯ್ಕೆಯಾಗಿದ್ದಾರೆ ಎಂಬ ಸವಿಸ್ತಾರ ವರದಿಯನ್ನು ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ಓದಿ ತಿಳಿದಿದ್ದು, ಅಲ್ಲದೆ ತಾನೂ ಓರ್ವ ಎನ್‌ಸಿಸಿ ಆಫೀಸರ್ ಆಗಿದ್ದು, ಇಲ್ಲಿನ ವಿವೇಕಾನಂದ ಕಾಲೇಜ್‌ನ ವಿಶ್ರಾಂತ ಪ್ರಾಧ್ಯಾಪಕರಾಗಿರುವ ಮೇಜರ್ ಎಂ.ಎನ್ ಚೆಟ್ಟಿಯಾರ್‌ರವರು ಇದೇ ಸಂದರ್ಭದಲ್ಲಿ ವಿಶೇಷ ನಗದನ್ನು ನೀಡಿ ಜೊವಿನ್‌ರವರನ್ನು ಪುರಸ್ಕರಿಸಿದರು. ಜೊವಿನ್‌ರವರ ಸಾಧನೆಯ ಪರಿಚಯವನ್ನು ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರು ನೀಡಿದರು.

ಬ್ರ್ಯಾಂಡನ್, ರಚನಾ, ಲೆ|ಜೋನ್ಸನ್‌ರವರಿಗೆ ಅಭಿನಂದನೆ:
ಕಳೆದ ವರ್ಷ ದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ್ದ ಫಿಲೋಮಿನಾ ಪದವಿ ಕಾಲೇಜ್‌ನ ಬಿಸಿಎ ವಿದ್ಯಾರ್ಥಿ, ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಬ್ರ್ಯಾಂಡನ್ ಆಂಟನಿ ರೋಚ್ ಹಾಗೂ ಪ್ರಸ್ತುತ ಫಿಲೋಮಿನಾ ಪದವಿ ಕಾಲೇಜ್‌ನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ(ಕಳೆದ ವರ್ಷ ಪಿಯುಸಿ ವಿದ್ಯಾರ್ಥಿನಿಯಾಗಿದ್ದರು), ಎನ್‌ಸಿಸಿ ಜ್ಯೂನಿಯರ್ ಅಂಡರ್ ಆಫೀಸರ್ ರಚನಾ ಎನ್.ಆರ್‌ರವರಿಗೆ ಹಾಗೂ ರಾಜ್ಯ ಮಟ್ಟದಲ್ಲಿ ಎನ್‌ಸಿಸಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ಡಿಡಿಜಿ ಪ್ರಶಸ್ತಿಯನ್ನು ಪಡೆದ ಫಿಲೋಮಿನಾ ಕಾಲೇಜ್‌ನ ಎನ್‌ಸಿಸಿ ಅಧಿಕಾರಿ, ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರಿಗೆ ಹೂಗುಚ್ಚ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬ್ರ್ಯಾಂಡನ್, ರಚನಾರವರ ಸಾಧನೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ-ಪ್ರೊ| ಲಿಯೋ:
ಸಂತ ಫಿಲೋಮಿನಾ ಪದವಿ ಕಾಲೇಜ್‌ನ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹರವರು ಮಾತನಾಡಿ, ಬಹಳ ಮಂದಿಗೆ ಆರ್‌ಡಿ ಪೆರೇಡ್ ಎಂದರೇನು ಅಂತಲೇ ಗೊತ್ತಿಲ್ಲ. ಆರ್‌ಡಿ ಪೆರೇಡ್‌ನಲ್ಲಿ ಭಾಗವಹಿಸಲು ಎಷ್ಟು ಕಠಿಣವಾದ ತರಬೇತಿ ಪಡೆಯಬೇಕೆನ್ನುವುದು ಭಾಗವಹಿಸಿದಾಗ ತಿಳಿಯುತ್ತದೆ. ಕಾಲೇಜು ಇತಿಹಾಸದಲ್ಲೇ ಕಳೆದ ಬಾರಿ ನಮ್ಮ ಕಾಲೇಜ್‌ನ ಈರ್ವರು ವಿದ್ಯಾರ್ಥಿಗಳು, ಈ ವರ್ಷ ಜೊವಿನ್‌ರವರು ಆಯ್ಕೆಯಾಗಿ ಆರ್‌ಡಿ ಪೆರೇಡ್‌ನಲ್ಲಿ ಭಾಗವಹಿಸಿರುವುದು ಕಾಲೇಜ್‌ನ ಘನತೆಗೆ ಮತ್ತಷ್ಟು ಹಿರಿಮೆ ತಂದುಕೊಟ್ಟಿದೆ ಎಂದ ಅವರು ಬದ್ಧತೆ ಹಾಗೂ ಕಠಿಣ ಪರಿಶ್ರಮ ಪಟ್ಟರೆ ಫಲ ಖಂಡಿತಾ ಸಿಗುತ್ತದೆ ಎಂಬುದಕ್ಕೆ ಕಾಲೇಜ್‌ನ ಅಂತರ್ರಾಷ್ಟ್ರೀಯ ಈಜುಪಟು ವೈಷ್ಣವ್ ಹೆಗ್ಡೆಯವರಿಗೆ ಕ್ರೀಡಾ ಕೋಟಾದಲ್ಲಿ ನೇವಿ ಆಫಿಸರ್ ಆಗಿ ಆಯ್ಕೆಯಾಗಿರುವುದು ಆಗಿದೆ. ಕೆಲವೊಮ್ಮೆ ಕಾಲೇಜು ವಿದ್ಯಾರ್ಥಿಗಳಿಗೆ ಭಾಗವಹಿಸಲು ಸಾಕಷ್ಟು ಪ್ರೋತ್ಸಾಹ ನೀಡಿದರೂ ಹೆತ್ತವರು ಮಕ್ಕಳನ್ನು ಕಳುಹಿಸಲು ಹಿಂದೆ ಸರಿಯುತ್ತಿರುವ ಈ ಕಾಲದಲ್ಲಿ ಬ್ರ್ಯಾಂಡನ್, ರಚನಾ ಹಾಗೂ ಜೊವಿನ್‌ರವರ ಸಾಧನೆ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ ಮಾತ್ರವಲ್ಲದೆ ದೇಶದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶಗಳಿವೆ ಎಂದು ಅವರು ಹೇಳಿದರು.

ಲೆ| ಜೋನ್ಸನ್ ಸರ್‌ರವರಿಂದ ಸೂಕ್ತ ಮಾರ್ಗದರ್ಶ-ಜೊವಿನ್:
ಫಿಲೋಮಿನಾ ಕಾಲೇಜ್‌ನ ಪದವಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಹಾಗೂ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರ ಸೂಕ್ತ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ಇಂದು ನಾನು ಈ ಸಾಧನೆಗೆ ಅರ್ಹತೆಯನ್ನು ಪಡೆದುಕೊಂಡಿರುವುದು ಸಂತೋಷವಾಗಿದೆ. ಪೂರ್ವ ಸಿದ್ಧತಾ ಶಿಬಿರದಲ್ಲಿ ಆಗಲಿ ಅಥವಾ ಇನ್ನಿತರ ತರಬೇತಿ ಶಿಬಿರಗಳಲ್ಲಿ ಭಾಗವಹಿಸುವುದಾಗಲಿ ಜೋನ್ಸನ್ ಸರ್‌ರವರು ನಮಗೆ ಪ್ರತಿಯೊಂದು ಹಂತದಲ್ಲಿ ನಮ್ಮ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾ, ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಾರೆ. ಅಲ್ಲದೆ ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರ ಪ್ರಶಂಸನೀಯ ಮಾತುಗಳು, ವಿಜ್ಞಾನ ವಿಭಾಗದ ಉಪನ್ಯಾಸಕರಿಂದ ಪ್ರೋತ್ಸಾದಾಯಕ ಹಿತನುಡಿಗಳು ನನ್ನನ್ನು ಸಾಧನೆ ಮಾಡಲು ಪ್ರೇರೇಪಿಸಿದೆ ಜೊತೆಗೆ ಪ್ರೌಢಶಾಲೆಯಿಂದಲೂ ಎನ್‌ಸಿಸಿಯಲ್ಲಿ ಸಾಧನೆ ಮಾಡಲು ಉತ್ತೇಜನ ನೀಡಿದ ತನ್ನ ತಾಯಿ-ತಂದೆಯವರು ತನ್ನ ಬಾಳಿಗೆ ಬೆಳಕಾಗಿದ್ದಾರೆ ಎಂದು ಜೊವಿನ್ ಜೋಸೆಫ್‌ರವರು ತನ್ನ ಸಾಧನೆಯ ಹಿಂದಿರುವವರ ಬಗೆಗಿನ ಅನಿಸಿಕೆಯನ್ನು ‘ಸುದ್ದಿ’ಗೆ ವ್ಯಕ್ತಪಡಿಸಿದ್ದಾರೆ.
ಜೊವಿನ್ ಜೋಸೆಫ್‌ರವರ ತಂದೆ ಜೋಸೆಫ್ ಶಾಂತಾರಾಜು, ಜೊವಿನ್‌ರವರ ತರಗತಿ ಉಪನ್ಯಾಸಕಿ ಅಶ್ವಿನಿ ಹಾಗೂ ಕಾಲೇಜ್‌ನ ಉಪನ್ಯಾಸಕ ವೃಂದ, ಆಡಳಿತ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಸುಮನಾ ಪ್ರಶಾಂತ್ ಪ್ರಾರ್ಥಿಸಿದರು. ಪ್ರಾಂಶುಪಾಲ ವಂ|ವಿಜಯ್ ಲೋಬೋ ಸ್ವಾಗತಿಸಿ, ಆಂಗ್ಲ ಭಾಷಾ ವಿಭಾಗದ ಸುಮಾ ಡಿ.ರವರು ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಜೊವಿನ್ ಓರ್ವ ಚಾಂಪಿಯನ್…
ಕಳೆದ ವರ್ಷ ಬ್ರ್ಯಾಂಡನ್ ಹಾಗೂ ರಚನಾರವರು ಫಿಲೋಮಿನಾ ಕಾಲೇಜ್‌ನ ‘ಶೈನಿಂಗ್ ಸ್ಟಾರ‍್ಸ್’ ಆಗಿದ್ದರು. ಇಂದು ಜೊವಿನ್‌ರವರು ‘ಶೈನಿಂಗ್ ಸ್ಟಾರ್’ ಆಗಿದ್ದಾರೆ. ಕಠಿಣ ಪರಿಶ್ರಮದಿಂದ ಅವರು ಈ ಸಾಧನೆ ಮಾಡಲು ಶಕ್ತರಾಗಿದ್ದಾರೆ. ನಮ್ಮಲ್ಲಿನ ಶ್ರಮ ಹಾಗೂ ಗುರುಹಿರಿಯರ ಆಶೀರ್ವಾದ ಇದ್ದಾಗ ಖಂಡಿತಾ ಸಾಧನೆ ಮಾಡಲು ಸಾಧ್ಯವಾಗುವುದು. ಹುಲ್ಲು ಹಗುರ, ಹುಲ್ಲಿಗಿಂತ ಹತ್ತಿ ಹಗುರ. ಹತ್ತಿಗಿಂತಲೂ ಬೇಡುವವರು ಹಗುರ. ಬೇಡುವವರು ಹತ್ತಿಗಿಂತಲೂ ಹಗುರ ಎಂಬ ಚಾಣಕ್ಯನ ಮಾತನ್ನು ನೆನಪಿಸಿಕೊಳ್ಳುತ್ತಾ ಯಾರು ತಮ್ಮಲ್ಲಿ ಅಡಕವಾಗಿದ್ದ ಶಕ್ತಿ ಸಾಮಾರ್ಥ್ಯವನ್ನು ಓರೆಗೆ ಹಚ್ಚುತ್ತಾರೋ ಅವರು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಜೊವಿನ್‌ರವರ ಸಾಧನೆಯೇ ಅವರನ್ನು ಗುರುತಿಸುವಂತೆ ಮಾಡಿದೆ. ನಿಜಕ್ಕೂ ಜೊವಿನ್ ಓರ್ವ ‘ಚಾಂಪಿಯನ್’. ಸಮಾಜಕ್ಕೆ ಇಂಥ ಸಾಧನೆ ಮಾಡುವ ಸಾಧಕರು ಬೇಕಾಗಿದ್ದಾರೆ. ಜೊವಿನ್‌ರಂತೆ ಛಲವಿದ್ದಲ್ಲಿ ಯಾರಿಗೂ ಚಾಂಪಿಯನ್ ಆಗಬಹುದು.

-ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಕ್ಯಾಂಪಸ್ ನಿರ್ದೇಶಕರು
ಮೇಜರ್ ವೆಂಕಟ್ರಾಮಯ್ಯರವರ ಹೆಸರಿನಲ್ಲಿ ರೋಲಿಂಗ್ ಟ್ರೋಫಿ..
ಎನ್‌ಸಿಸಿಯ ಆರ್.ಡಿ ಪೆರೇಡ್‌ನಲ್ಲಿ ಭಾಗವಹಿಸುವುದೆಂದರೆ ಜೀವನದಲ್ಲಿ ಮರೆಯಲಾಗದ ಅನುಭವ. ಉತ್ತಮ ಬಾಡಿ ಲ್ಯಾಂಗ್ವೇಜ್ ಹೊಂದಿರುವ ಜೊವಿನ್‌ರವರಲ್ಲದೆ ಬ್ರ್ಯಾಂಡನ್ ಹಾಗೂ ರಚನಾರವರಿಗೆ ಉತ್ತಮ ಭವಿಷ್ಯವಿದೆ. ಸಂಸ್ಥೆಯು ವಜ್ರಮಹೋತ್ಸವವನ್ನು ಆಚರಿಸುತ್ತಿದ್ದುದರಿಂದ ಕ್ರೀಡೆಯಲ್ಲಾಗಲಿ ಅಥವಾ ಎನ್‌ಸಿಸಿಯಲ್ಲಾಗಲಿ ಅಂದು ಸಂಸ್ಥೆಗೋಸ್ಕರ ಅವಿರತ ದುಡಿದ ಮೇಜರ್ ವೆಂಕಟ್ರಾಮಯ್ಯರವರ ಹೆಸರಿನಲ್ಲಿ ವೆಂಕಟ್ರಾಮಯ್ಯರವರ ಅಚ್ಚುಮೆಚ್ಚಿನ ಕ್ರೀಡೆಯಾಗಲಿ ಅಥವಾ ಇನ್ನಿತರ ಕ್ರೀಡೆಯಾಗಲಿ ರೋಲಿಂಗ್ ಟ್ರೋಫಿ ಟೂರ್ನಮೆಂಟ್ ನಡೆಸಿದರೆ ಮೇಜರ್ ವೆಂಕಟ್ರಾಮಯ್ಯರವರ ಹೆಸರು ಅಜರಾಮರವಾಗಿ ಉಳಿಯಬಲ್ಲುದು.
-ಮೇಜರ್ ಎಂ.ಎನ್ ಚೆಟ್ಟಿಯಾರ್, ನಿವೃತ್ತ ಪ್ರಾಧ್ಯಾಪಕರು, ವಿವೇಕಾನಂದ ಕಾಲೇಜು

ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಕಠಿಣ ಪರಿಶ್ರಮದೊಂದಿಗೆ ನನ್ನ ಮಗ ಗಳಿಸಿದ ಸಾಧನೆ ಬಗ್ಗೆ ಹೆತ್ತವರಾದ ನಮಗೆ ಹೆಮ್ಮೆಯಾಗಿದೆ. ಅಲ್ಲದೆ ಇವರ ಸಾಧನೆ ಹಿಂದೆ ಕಾಲೇಜ್‌ನ ಸಂಚಾಲಕರಾಗಲಿ, ಪ್ರಾಂಶುಪಾಲರಾಗಲಿ, ಕ್ಯಾಂಪಸ್ ನಿರ್ದೇಶಕರಾಗಲಿ, ಉಪನ್ಯಾಸಕರಾಗಲಿ ಹೀಗೆ ಪ್ರತಿಯೊಬ್ಬರ ಪ್ರೋತ್ಸಾಹದ ಜೊತೆಗೆ ಎನ್.ಸಿಸಿ ಅಧಿಕಾರಿ ಲೆಫ್ಟಿನೆಂಟ್ ಜೋನ್ಸನ್‌ರವರ ಮಾರ್ಗದರ್ಶನಕ್ಕೆ ನಾವು ಚಿರಋಣಿಗಳಾಗಿzವೆ. ಶಿಕ್ಷಣದಿಂದ ವ್ಯಕ್ತಿಯ ಸಮಗ್ರ ಅಭಿವೃದ್ಧಿ ಸಾಧ್ಯ. ಆದರೆ ನಾವು ಸಮಾಜಕ್ಕೆ ನೀಡುವ ನಿಸ್ವಾರ್ಥಭರಿತವುಳ್ಳ ಸೇವೆಯ ಮುಖಾಂತರ ಮಾನವೀಯತೆಯ ಮಾನವತಾವಾದಿಗಳಾಗುವುದು ಬಹಳ ಪ್ರಾಮುಖ್ಯವಾಗಿದೆ. ಪ್ರತಿಷ್ಠಿತ ಕಾಲೇಜೊಂದರಲ್ಲಿ ನಮ್ಮ ಮಗ ವ್ಯಾಸಂಗ ಮಾಡುತ್ತಿದ್ದಾನಲ್ಲ ಎಂಬ ಆತ್ಮ ತೃಪ್ತಿಯಿದೆ. ಜೊವಿನ್‌ಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ದೇವರು ಅನುಗ್ರಹವನ್ನು ಕೊಡಲಿ ಎಂಬುದೇ ನಮ್ಮ ಹಾರೈಕೆ.
-ನ್ಯಾನ್ಸಿ ಶೀಲಾ ಜೋಸೆಫ್, ಜೊವಿನ್‌ರವರ ತಾಯಿ

ಜೊವಿನ್ ಓರ್ವ ಪ್ರತಿಭಾನ್ವಿತ ಹುಡುಗ. ವಿಜ್ಞಾನ ವಿಷಯವನ್ನು ಆರಿಸಿಕೊಂಡು, ಜೊತೆಗೆ ಎನ್.ಸಿ.ಸಿ ವಿಭಾಗದಲ್ಲೂ ಕಠಿಣ ಪರಿಶ್ರಮದಿಂದ ನಿರಂತರ ಅಭ್ಯಾಸ ಮಾಡಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸುತ್ತಿರುವ ಮೂಲಕ ಕಾಲೇಜ್‌ಗೆ ಹೆಸರನ್ನು ತಂದಿದ್ದಾನೆ. ಮಾತು ಕಡಿಮೆ, ದುಡಿಮೆ ಜಾಸ್ತಿ, ಸಾಧಿಸುವ ತನಕ ವಿರಮಿಸಲಾರೆ ಎಂಬಂತೆ ಜೊವಿನ್‌ರವರ ಸಾಧನೆಯನ್ನು ಎಲ್ಲರೂ ಮೆಚ್ಚಬೇಕಾದ್ದೇ. ಭವಿಷ್ಯದಲ್ಲಿ ಜೊವಿನ್‌ರವರು ಮತ್ತಷ್ಟು ಸಾಧನೆಯನ್ನು ಮಾಡುವಂತಾಗಲಿ ಎಂಬುದೇ ನಮ್ಮ ಹಾರೈಕೆಯಾಗಿದೆ.
-ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಸಂತ ಫಿಲೋಮಿನಾ ಪ.ಪೂ ಕಾಲೇಜು