ಶಿಕ್ಷಕರ ದಿನಾಚರಣೆ

ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ನಿಜವಾಗಿಯೂ ದೇಶದ ರಕ್ಷಕರಾಗಿದ್ದಾರೆ ಎಂದು ಸಂತ ಫಿಲೋಮಿನಾ ಕಾಲೇಜ್‍ನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರರವರು ಹೇಳಿದರು.

ಶಿಕ್ಷಕರು ಶಿಕ್ಷಕ ವೃತ್ತಿಯನ್ನು ನಿರ್ವಹಿಸುವ ಶಿಕ್ಷಕರು
ಡಾ|ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನೋತ್ಸವದ ಅಂಗವಾಗಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ಕಾಲೇಜ್‍ನ ವಿದ್ಯಾರ್ಥಿ ಸಂಘದ ವತಿಯಿಂದ ಸೆ.5 ರಂದು ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಕ ವೃತ್ತಿ ಎಂಬುದು ಸಮಾಜ ಗೌರವಿಸುವ ವೃತ್ತಿಯಾಗಿದೆ. ಯಾಕೆಂದರೆ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ತಪ್ಪನ್ನು ಮಾಡಿದಾಗ ಆ ತಪ್ಪನ್ನು ತಿದ್ದಿ ತೀಡುವ ಮೂಲಕ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವಂತಹ ಅಪೂರ್ವವಾದ ಕೈಂಕರ್ಯವನ್ನು ಶಿಕ್ಷಕರು ನಿರ್ವಹಿಸುತ್ತಾರೆ. ಆದ್ದರಿಂದ ಶಿಕ್ಷಕರನ್ನು ನಾವು ಗೌರವದಿಂದ ಕಾಣುವುದು ಪ್ರತಿಯೊಬ್ಬ ಪ್ರಜ್ಞಾವಂತ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಶಿಕ್ಷಕರಲ್ಲಿ ಬದ್ಧತೆ ಇರಬೇಕಾಗಿರುವುದು ಅತ್ಯಗತ್ಯ. ಶಿಕ್ಷಕರು ಯಾವಾಗಲೂ ಶಿಕ್ಷಕರೇ. ಶಿಕ್ಷಕರು ವೃತ್ತಿಯಿಂದ ನಿವೃತ್ತರಾದರೂ ಅವರನ್ನು ಗುರುತಿಸುವುದು ಶಿಕ್ಷಕ ಎಂಬ ನೆಲೆಯಲ್ಲಿ. ಶಿಕ್ಷಕ ಎನಿಸಿಕೊಂಡವರು ಎಂದಿಗೂ ಮಾಜಿ ಶಿಕ್ಷಕರಾಗುವುದಿಲ್ಲ. ಸಮಾಜದಲ್ಲಿ ಶಿಕ್ಷಕನಾದವನಿಗೆ ಬಹಳ ಗೌರವವಿದೆ ಮತ್ತು ಆತ್ಮತೃಪ್ತಿಯೂ ಇದೆ. ಶಿಕ್ಷಕರು ತಮ್ಮ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಬೇಕಾದುದು ಮತ್ತು ಜ್ಞಾನಶಕ್ತಿಯನ್ನು ವೃದ್ಧಿಸಿಕೊಂಡಾಗ ಶಿಕ್ಷಕನ ವ್ಯಕ್ತಿತ್ವ ಹಾಗೂ ಸಾಮಥ್ರ್ಯ ಬೆಳಕಿಗೆ ಬರುತ್ತದೆ ಎಂದು ಹೇಳಿದರು.

ಉಪನ್ಯಾಸಕರಿಂದ ಮಧುರ ಗೀತೆ:
ಕನ್ನಡ ವಿಭಾಗದ ಉಪನ್ಯಾಸಕಿ ಸುಮನಾ ಪ್ರಶಾಂತ್‍ರವರು ಶಾಸ್ತ್ರೀಯ ಸಂಗೀತ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕ ಭರತ್ ಪೈರವರು ಕನ್ನಡ ಸಿನೆಮಾದ ಗೀತೆಯೊಂದನ್ನು ಹಾಡಿ ಮನರಂಜಿಸಿದರು. ಉಪನ್ಯಾಸಕರಾದ ವಿಜ್ಞಾನ ವಿಭಾಗದ ಪ್ರಶಾಂತ್ ಭಟ್, ವಾಣಿಜ್ಯ ವಿಭಾಗದ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜರವರು ಕಾರ್ಯಕ್ರಮದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಡೀನ್‍ಗಳಾದ ವಿಜ್ಞಾನ ವಿಭಾಗದ ಯಶ್ವಂತ್ ಎಂ.ಡಿ., ಗಣಕ ವಿಜ್ಞಾನ ವಿಭಾಗದ ಗೋವಿಂದ ಪ್ರಕಾಶ್, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಉಷಾ ಯಶ್ವಂತ್, ಲವೀನಾ ಸಾಂತ್‍ಮಾಯೆರ್‍ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೋನ್ಸನ್ ಮಸ್ಕರೇನ್ಹಸ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಡೆಲ್ಮಾ ಲೋರಾ ಕುಟಿನ್ಹಾ ವಂದಿಸಿದರು. ಕಾಲೇಜ್‍ನ ಎಲ್ಲಾ ಉಪನ್ಯಾಸಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೆ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹೂ ನೀಡಿ ಶುಭಾಶಯ ಕೋರಿದರು. ಶರಲ್ ಸೆಲ್ಮಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.