ವಿದ್ಯಾರ್ಥಿ ಸಂಘದ ಉದ್ಘಾಟನೆ

ಸದೃಢ ಹಾಗೂ ಸುಸ್ಥಿರ ಸಮಾಜದತ್ತ ಸಮಾಜವನ್ನು ಮುನ್ನೆಡೆಸಲು ಪ್ರಜ್ಞಾವಂತ ನಾಯಕರ ಅಗತ್ಯವಿದೆ. ಶೈಕ್ಷಣಿಕ ಸಂದರ್ಭದಲ್ಲಿ ಮಾತ್ರವಲ್ಲ, ಶಿಸ್ತು ಹಾಗೂ ಮೌಲ್ಯಗಳನ್ನು ಯಾರು ಜೀವನದುದ್ದಕ್ಕೂ ಮೈಗೂಡಿಸಿಕೊಳ್ಳುತ್ತಾರೋ ಅವರು ಯಶಸ್ವಿ ನಾಯಕನಾಗಬಲ್ಲರು ಮಾತ್ರವಲ್ಲ ಉತ್ತಮ ಭವಿಷ್ಯವನ್ನು ಕೂಡ ಕಂಡುಕೊಳ್ಳಬಲ್ಲರು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್‌ನ ಅಧ್ಯಕ್ಷರೂ ಆಗಿರುವ ಅತೀ|ವಂ|ಡಾ|ಅಲೋಶಿಯಸ್ ಪಾವ್ಲ್ ಡಿ’ಸೋಜರವರು ಹೇಳಿದರು.

ಅವರು ಜೂ.7 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಜೀವನದುದ್ದಕ್ಕೂ ಶಿಸ್ತು ಹಾಗೂ ಉತ್ತಮ ಮೌಲ್ಯಗಳನ್ನು ಯಾರು ಅಳವಡಿಸಿಕೊಳ್ಳುತ್ತಾರೋ ಅವರನ್ನು ಸಮಾಜ ಗೌರವಿಸುತ್ತದೆ ಅಲ್ಲದೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಅದೆಷ್ಟೋ ಸಾವಿರಾರು ವಿದ್ಯಾರ್ಥಿಗಳಿಗೆ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಫಿಲೋಮಿನಾ ವಿದ್ಯಾಸಂಸ್ಥೆಯು ಬ್ರ್ಯಾಂಡ್ ಆಗಿದೆ ಎನ್ನಲಡ್ಡಿಯಿಲ್ಲ ಎಂದ ಅವರು ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರು ತಮ್ಮ ದೂರದೃಷ್ಟಿತ್ವವುಳ್ಳ ಆಲೋಚನೆಯಿಂದ ಸ್ಥಾಪಿಸಲ್ಪಟ್ಟ ಈ ವಿದ್ಯಾದೇಗುಲವು ಇಂದು ವಜ್ರಮಹೋತ್ಸವದ ಸಂಭ್ರಮವನ್ನು ಕಾಣುತ್ತಿದೆ. ಈ ೬೦ ವರ್ಷದ ಹಾದಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆಯನ್ನು ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ ಎಂಬುದಕ್ಕೆ ಹೆಮ್ಮೆಯಿದೆ ಎಂದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಯಣದಲ್ಲಿ ಎದುರಾಗುವ ಧನಾತ್ಮಕತೆಯುಳ್ಳ ಅವಕಾಶಗಳನ್ನು ಕಳೆದುಕೊಳ್ಳದೆ ಅದನ್ನು ಸದುಪಯೋಗಪಡಿಸಿಕೊಳ್ಳುವತ್ತ ಸಾಗಬೇಕಾದರೆ ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಬಿಷಪ್ ಅಲೋಶಿಯಸ್ ಪಾವ್ಲ್‌ರವರು ಕರೆ ನೀಡಿದರು.

ಕ್ರಿಯಾತ್ಮಕತೆ, ಸೃಜನಾತ್ಮಕತೆಯನ್ನು ಜೀವನದಲ್ಲಿ ಅಳವಡಿಸಿ-ವಂ|ಡಾ|ಆಂಟನಿ:
ಮುಖ್ಯ ಅತಿಥಿ, ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಕಾಲೇಜ್‌ನಲ್ಲಿ ವಿದ್ಯಾರ್ಥಿ ಸಂಘದ ಅಗತ್ಯತೆ ಏನು?, ಅದರ ಜವಾಬ್ದಾರಿಗಳೇನು?. ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಇಂದಿನ ಸಮಾಜದಲ್ಲಿ ಸಾಮಾಜಿಕ ಬದ್ಧತೆಯುಳ್ಳ ನಾಯಕರ ಅಗತ್ಯವಿದೆ. ಪ್ರಬಲ, ಕ್ರಿಯಾತ್ಮಕತೆಯುಳ್ಳ ಹಾಗೂ ಸೃಜನಾತ್ಮಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವನೇ ನಿಜವಾದ ನಾಯಕನಾಗಬಲ್ಲ.

ಶಿಸ್ತು ಹಾಗೂ ಸಂಸ್ಕೃತಿಯನ್ನು ಯಾರು ಮೈಗೂಡಿಸಿಕೊಳ್ಳುತ್ತಾರೋ ಅವರಿಂದ ಸಂಸ್ಥೆಯ ಗುಣಮಟ್ಟ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು ತಾನು ಕಲಿತ ಸಂಸ್ಥೆ ಯಾವುದೇ ಇರಲಿ, ತಾನು ಕಲಿತ ಸಂಸ್ಥೆಯ ಬಗ್ಗೆ ಧನಾತ್ಮಕ ನಿಲುವಿನ ಚಿಂತನೆಯನ್ನು ಪ್ರಚುರಪಡಿಸುವಂತಿದ್ದರೆ ಮಾತ್ರ ಆ ಸಂಸ್ಥೆಯು ಶೈನ್ ಆಗಲು ಸಾಧ್ಯವಿದೆ ಮಾತ್ರವಲ್ಲದೆ ಇಂದು ತೆಗೆದುಕೊಂಡಿರುವ ಪ್ರಮಾಣವಚನಕ್ಕೂ ಅರ್ಥ ಬರುತ್ತದೆ. ಸುಮ್ಮನೆ ಕೂರುವ ‘ಕ್ರಿಯಾ’ದ ಬದಲಿಗೆ, ತಾನು ಏನಾದರೂ ಸಾಧಿಸುತ್ತೇನೆ, ತನ್ನಿಂದ ಮತ್ತೊಬ್ಬರಿಗೆ ಒಳ್ಳೆಯದಾಗುತ್ತದೆ ಎಂಬ ‘ಕರ್ಮ’ವೇ ಇಂದಿನ ಅಗತ್ಯತೆಯಾಗಿದೆ ಎಂದು ಅವರು ಹೇಳಿದರು.

ಹಿರಿಯರಿಗೆ, ಶಿಕ್ಷಕರಿಗೆ ಗೌರವ ಕೊಡುವುದನ್ನು ಕಲಿಯಬೇಕು-ವಂ|ಆಲ್ಫ್ರೆಡ್:
ಕಾಲೇಜ್‌ನ ಸಂಚಾಲಕರಾಗಿರುವ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹಿರಿಯರಿಗೆ, ವಿದ್ಯೆಯನ್ನು ಬೋಧಿಸಿದ ಶಿಕ್ಷಕರಿಗೆ ಪರಸ್ಪರ ಗೌರವ ಕೊಡುವ ಗುಣವನ್ನು ಬೆಳೆಸುವುದು ತಮ್ಮ ನಿತ್ಯ ಜೀವನದ ಪಾಠವಾಗಬೇಕು ಅಲ್ಲದೆ ಶೈಕ್ಷಣಿಕ ಸಂದರ್ಭದಲ್ಲಿ ತಮ್ಮ ಸಹಪಾಠಿಗಳನ್ನು ಸಹೋದರ-ಸಹೋದರಿ ಎಂಬ ಭಾವನೆಯಿಂದ ನೋಡುವಂತಾಗಬೇಕು. ಹೇಗೆ ಒಂದು ಕಟ್ಟಡವು ಬಲಿಷ್ಟಗೊಳ್ಳಲು ಅದರ ಅಡಿಪಾಯವು ಅಷ್ಟೇ ಬಲಿಷ್ಟವಿರಬೇಕು. ಇಲ್ಲದಿದ್ದರೆ ಕಟ್ಟಡವು ಕುಸಿದು ಬೀಳುವುದು ಸಹಜ. ಅದರಂತೆ ವ್ಯಕ್ತಿಯ ಜೀವನ ಪರಿಪೂರ್ಣವಾಗಬೇಕಾದರೆ ವಿದ್ಯಾಭ್ಯಾಸವೆಂಬ ಬಲಿಷ್ಟವಾದ ಅಡಿಪಾಯವೂ ಬೇಕಾಗುತ್ತದೆ ಎಂದ ಅವರು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ವ್ಯಾಪ್ತಿಯೊಳಗಡೆ ಫಿಲೋಮಿನಾ ಸಂಸ್ಥೆ ಅಲ್ಲದೆ ನೂರಾರು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವನ್ನು ಬಿಷಪ್ ವಂ|ಅಲೋಶಿಯಸ್ ಪಾವ್ಲ್‌ರವರ ಅಧ್ಯಕ್ಷಗಾದಿಯಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ ಎಂದು ಹೇಳಿ ಕಥೋಲಿಕ್ ಧರ್ಮಪ್ರಾಂತ್ಯದ ವ್ಯಾಪ್ತಿಯಡಿ ಬರುವ ಸಂಸ್ಥೆಗಳ ಸವಿವಿವರ ನೀಡಿದರು.

ಉಪಕಾರ ಸ್ಮರಣೆ ಜೀವನದಲ್ಲಿ ಅಳವಡಿಸಿ-ಪ್ರೊ|ಲಿಯೋ:
ಸಂತ ಫಿಲೋಮಿನಾ ಪದವಿ ಕಾಲೇಜ್‌ನ ಪ್ರಾಂಶುಪಾಲರಾಗಿರುವ ಪ್ರೊ|ಲಿಯೋ ನೊರೋನ್ಹಾರವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹೆತ್ತವರ ಕಷ್ಟವನ್ನು ಅರಿತು ಮುಂದೆ ಸಾಗಬೇಕು. ಕಲಿತು ಸ್ವಾವಲಂಭಿಯಾಗಿ ಜೀವನ ನಡೆಸುವ ಸಂದರ್ಭದಲ್ಲಿ ಹೆತ್ತವರನ್ನು ಕಡೆಗಣಿಸದೆ ಅವರನ್ನು ಆಧರಿಸುವವರಾಗಬೇಕು. ಪ್ರತಿಯೋರ್ವರಲ್ಲಿ ತನಗೆ ಉಪಕಾರ ಮಾಡಿದವರ ಬಗ್ಗೆ ಉಪಕಾರ ಸ್ಮರಣೆ ಎಂಬ ಮನೋಭಾವನೆಯನ್ನು ಜೀವನದುದ್ದಕ್ಕೂ ತಳೆದಿರಬೇಕು. ಪರಂಪರಾಗತವಾಗಿ ಬಂದಂತಹ ಉತ್ತಮ ಸಂಸ್ಕೃತಿಯನ್ನು ಮರೆಯದೆ ಮುಂದೆ ಸಾಗಬೇಕು ಅಲ್ಲದೆ ತಾನು ಕಲಿತ ಸಂಸ್ಥೆಗೆ ಎಂದಿಗೂ ಚಿರಋಣಿಯಾಗಬೇಕು ಎಂದರು.

ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಬಿಷಪ್ ಅಲೋಶಿಯಸ್‌ರವರು ಹೂಗುಚ್ಛ ನೀಡಿ ಅಭಿನಂದಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೈರಾಜ್ ಭಂಡಾರಿ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀದೇವಿ ಕೆ, ಜೊತೆ ಕಾರ್ಯದರ್ಶಿ ಡೆಲ್ಮಾ ಲೋರಾ ಡಿ’ಕುನ್ಹಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಜೋನ್ಸನ್ ಮಸ್ಕರೇನ್ಹಸ್ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜ್ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಕಾಶ್ ಸಿ.ಭಟ್ ವಂದಿಸಿದರು. ವಿದ್ಯಾರ್ಥಿನಿ ದ್ವಿತೀಯ ವಾಣಿಜ್ಯ ವಿಭಾಗದ ಶರಲ್ ಸೆಲ್ಮಾ ಡಿ’ಸೋಜರವರು ಪ್ರಮಾಣವಚನ ಸ್ವೀಕರಿಸುವ ವಿದ್ಯಾರ್ಥಿಗಳ ಹೆಸರನ್ನು ಓದಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ರಾಹುಲ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ:
ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಸೇವೆಯನ್ನು ನೀಡುತ್ತಿರುವ ಬಿಷಪ್ ಅತೀ|ವಂ|ಡಾ|ಅಲೋಶಿಯಸ್ ಪಾವ್ಲ್ ಡಿ’ಸೋಜರವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಹಾಗೆಯೇ ಕಳೆದ ವರ್ಷ ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರೈಟ್ ಮಾರ್ಕರ್ ಆಗಿ ಭಾಗವಹಿಸಿದ ಜ್ಯೂನಿಯರ್ ಅಂಡರ್ ಆಫೀಸರ್ ಜೊವಿನ್ ಜೋಸೆಫ್‌ರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಜೊವಿನ್‌ರವರ ಸನ್ಮಾನ ಸಂದರ್ಭದಲ್ಲಿ ಜೊವಿನ್‌ರವರ ತಾಯಿ ನ್ಯಾನ್ಸಿ ಶೀಲಾರವರು ಉಪಸ್ಥಿತರಿದ್ದರು. ಬಿಷಪ್‌ರವರ ಪರಿಚಯವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಲವೀನಾ ಹಾಗೂ ಜೊವಿನ್ ಜೋಸೆಫ್‌ರವರ ಪರಿಚಯವನ್ನು ವಿಜ್ಞಾನ ವಿಭಾಗದ ಉಪನ್ಯಾಸಕಿ ಅಶ್ವಿನಿರವರು ನೀಡಿದರು.

ಬಾಕ್ಸ್
ಶಿಲಾನ್ಯಾಸ-ಆಶೀರ್ವಚನ..
ನೆಲ ಅಂತಸ್ತು ಒಳಗೊಂಡ ಒಟ್ಟು ನಾಲ್ಕು ಮಹಡಿಯ ನೂತನ ಸುಸಜ್ಜಿತವಾದ ಪ್ರಯೋಗಾಲಯದ ಕಟ್ಟಡಕ್ಕೆ ಬಿಷಪ್ ಅತೀ|ವಂ|ಡಾ|ಅಲೋಶಿಯಸ್ ಪಾವ್ಲ್ ಡಿ’ಸೋಜರವರು ಶಿಲಾನ್ಯಾಸವನ್ನು ನೆರವೇರಿಸಿ, ಆಶೀರ್ವಚಿಸಿದರು. ಪದವಿ ಕಾಲೇಜು ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಭಾಗದ ಪ್ರಯೋಗಾಲಯಗಳು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಟ್ಟಡ ಉದ್ಘಾಟನೆಗೊಂಡ ಬಳಿಕ ಕಾರ್ಯಾಚರಿಸಲಿದೆ. ಪದವಿ ಪೂರ್ವ ಕಟ್ಟಡದಲ್ಲಿಯೇ ಕಾರ್ಯಾಚರಿಸುತ್ತಿದ್ದ ಪ್ರಾಂಶುಪಾಲರ ಕೊಠಡಿ ಹಾಗೂ ಕಛೇರಿಯು ಕೂಡ ಕಟ್ಟಡವು ಉದ್ಘಾಟನೆಗೊಂಡ ಬಳಿಕ ನೂತನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ.

ರೌಂಡ್ ಬಾಕ್ಸ್
ಪ್ರಮಾಣವಚನ..
ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಕಾಶ್ ಸಿ.ಭಟ್, ಕಾರ್ಯದರ್ಶಿ ಶ್ರೀದೇವಿ ಕೆ, ಜೊತೆ ಕಾರ್ಯದರ್ಶಿ ಡೆಲ್ಮಾ ಡೋರ ಕುಟಿನ್ಹಾ ಸಹಿತ ತರಗತಿವಾರು ಪ್ರತಿನಿಧಿಗಳು, ವಿವಿಧ ಸಂಘಗಳ ಪದಾಧಿಕಾರಿಗಳು ಕಾಲೇಜ್‌ನ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಹೇಳುವ ಮೂಲಕ ಪ್ರಮಾಣವಚನದಲ್ಲಿ ಪಾಲ್ಗೊಂಡರು. ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು.