ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು – ಅನಾವರಣಗೊಂಡ ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜುಅನಾವರಣಗೊಂಡ ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ

ಪುತ್ತೂರು :  ಶಿಕ್ಷಣವು ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದೆ” ಶಿಕ್ಷಣವು ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಅವನನ್ನು ಜ್ಞಾನವುಳ್ಳ ನಾಗರಿಕನನ್ನಾಗಿ ಮಾಡುತ್ತದೆ. ಶಿಕ್ಷಣವು ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಸಾಮಾಜಿಕ ಅನಿಷ್ಟಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಮತ್ತು ಇಡೀ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಗಳಾದ ಅರುಣ್ ಫುಟ್ರಾಡೋ ಅವರು ಹೇಳಿದರು.

ಸಂತ ಫಿಲೋಮಿನಾ  ಪದವಿ ಪೂರ್ವ ಕಾಲೇಜಿನಲ್ಲಿ  ಡಿಸೆಂಬರ್ 22 ಹಾಗೂ 23 ರಂದು ಕಾಲೇಜು ಪ್ರಾಂಗಣದಲ್ಲಿ ನಡೆದ  ‘ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ’ದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.  ಶಿಕ್ಷಣ ಎಲ್ಲರನ್ನೂ ಸಬಲಗೊಳಿಸುತ್ತದೆ. ಇದು ಆಧುನಿಕ ಮತ್ತು ಕೈಗಾರಿಕೀಕರಣಗೊಂಡ ಜಗತ್ತನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಗತಿಯನ್ನು ನಿಭಾಯಿಸಲು ಜನರಿಗೆ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.

ಗೌರವ ಅತಿಥಿಗಳಾಗಿ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ರೆ.ಫಾ.ಸ್ಟ್ಯಾನಿ ಪಿಂಟೋ, ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ.ಡಾI ಆಂಟೋನಿ ಪ್ರಕಾಶ್ ಮೊಂತೇರೋ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿ’  ಕೋಸ್ಟಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್  ಶಿಕ್ಷಣ ಸಂಸ್ಥೆಯ ಸಂಚಾಲಕರಾದ  ವಂ.ರೆ.ಫಾ.ಲಾರೆನ್ಸ್ ಮಸ್ಕರೇನಸ್  ಮಾತನಾಡಿ,ಕಾಲೇಜು ಜೀವನವು ಒಬ್ಬರ ಜೀವನದ ಅತ್ಯಂತ ಸ್ಮರಣೀಯ ವರ್ಷಗಳಲ್ಲಿ ಒಂದಾಗಿದೆ. ಇದು ಶಾಲಾ ಜೀವನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕಾಲೇಜು ಜೀವನವು ನಮಗೆ ಮೊದಲು ಪರಿಚಯವಿಲ್ಲದ ಹೊಸ ಅನುಭವಗಳು ಮತ್ತು ವಿಷಯಗಳಿಗೆ ನಮ್ಮನ್ನು ಒಡ್ಡುತ್ತದೆ. ಕೆಲವರಿಗೆ ಕಾಲೇಜ್ ಲೈಫ್ ಎಂದರೆ ಲೈಫ್ ಫುಲ್ ಎಂಜಾಯ್ ಮಾಡೋದು, ಪಾರ್ಟಿ ಮಾಡೋದು. ಇತರರಿಗೆ, ತಮ್ಮ ವೃತ್ತಿಜೀವನದ ಬಗ್ಗೆ ಗಂಭೀರವಾಗಿರಲು ಮತ್ತು ಉಜ್ವಲ ಭವಿಷ್ಯಕ್ಕಾಗಿ ಸಂಪೂರ್ಣವಾಗಿ ಅಧ್ಯಯನ ಮಾಡುವ ಸಮಯ ಎಂದು ಹೇಳಿದರು.

 ಸಾಹಿತ್ಯಕ, ಸಾಂಸ್ಕೃತಿಕ,  ಕ್ರೀಡೆ, ಎನ್.ಸಿ.ಸಿ ಮತ್ತು ರೋವರ್ಸ್ ರೇಂಜರ್ಸ್ ನ  ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗಮನಾರ್ಹ  ಸಾಧನೆಗೈದ ವಿದ್ಯಾರ್ಥಿಗಳು ಹಾಗೂ  ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 

2022- 23 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 10ನೇ ರಾಂಕ್ ಪಡೆದ  ಸಮೃದ್ಧಿ ರೈ, ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಪ್ರತಿ ವಿಷಯದಲ್ಲಿ  ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು   ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನವನ್ನು ನೀಡಿ  ಗೌರವಿಸಲಾಯಿತು. ಪ್ರಸಕ್ತ ವರ್ಷದ ‘ಬಹುಮುಖ ಪ್ರತಿಭಾ’ ಪ್ರಶಸ್ತಿಯನ್ನು ದ್ವಿತೀಯ  ವಿಜ್ಞಾನ ವಿಭಾಗದವಿಂಧ್ಯಾ ಶ್ರೀ ರೈ ರವರಿಗೆ ನೀಡಿ ಸನ್ಮಾನಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಂತ್ ನಡುಬೈಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎ.ಜೆ.ರೈ, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಪ್ರಶಾಂತ್ ಭಟ್ ಪಿ ಹಾಗೂ ಫಿಲೋಮಿನಾ ಮೊಂತೇರೋ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು.   ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವನ್ ಪೊನ್ನಪ್ಪ ಎಮ್. ಎನ್ ಸ್ವಾಗತಿಸಿ, ಕಾರ್ಯದರ್ಶಿ ತನ್ವಿ.ಕೆ ಅತಿಥಿಗಳನ್ನು ಪರಿಚಯಿಸಿ, ಜತೆ ಕಾರ್ಯದರ್ಶಿ  ಪೃಥ್ವಿ.ಕೆ ವಂದಿಸಿದರು. ಉಪನ್ಯಾಸಕರಾದ ಸಂತೋಷ್ ಕ್ಲಾರೆನ್ಸ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.