ಸಿಂಚನ-ಯಕ್ಷ ಗಾಯನ ವೈಭವ

ಯಕ್ಷಗಾನ ಬೆಳೆಯಬೇಕಾದರೆ ಅದು ರೂಪಾಂತರ ಆಗಲೇಬೇಕು ಎನ್ನುವ ನಿಟ್ಟಿನಲ್ಲಿ ಯಕ್ಷಗಾನ ವೈಭವ ಆರಂಭವಾಯಿತು ಮತ್ತು ಯಕ್ಷಗಾನಕ್ಕೆ ಪ್ರೇಕ್ಷಕರು ಕೂಡ ಹುಟ್ಟಿಕೊಂಡರು. ಆದ್ದರಿಂದ ಯುವ ಕಲಾವಿದರು ಸಮಾಜದ ಮುನ್ನೆಲೆಗೆ ಬರುವಂತಾಗಬೇಕು, ಆ ಮೂಲಕ ಯಕ್ಷರಂಗ ಬೆಳೆಯಬೇಕು ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಪ್ರಯೋಗಾಲಯ ಬೋಧಕರಾದ ಹರಿಪ್ರಸಾದ್ ಡಿ.ರವರು ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಾಲೇಜಿನ ಪ್ರದರ್ಶನ ಕಲಾ ಸಂಘದ ಆಶ್ರಯದಲ್ಲಿ ಸೆ.16 ರಂದು ಕಾಲೇಜಿನ ರಜತ ಮಹೋತ್ಸವದ ಸಭಾಭವನದಲ್ಲಿ ನಡೆದ `ಫಿಲೋ ಸಿಂಚನ-ಯಕ್ಷ ಗಾಯನ ವೈಭವ’ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಹಾಗೂ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ಜಾತ್ರಾ ಸಂದರ್ಭದಲ್ಲಿ ಹಲವು ಡೇರೆಗಳಲ್ಲಿ ವಿವಿಧ ಮೇಳಗಳಿಂದ ಯಕ್ಷಗಾನ ಕಥಾ ಪ್ರಸಂಗಗಳು ನಡೆಯುತ್ತಿದ್ದವು. ಕಾಲಕ್ರಮೇಣ ಯಕ್ಷಗಾನದ ಪ್ರದರ್ಶನಗಳು ಕಡಿಮೆಯಾಗಿ ಇನ್ನೇನು ನೇಪಥ್ಯಕ್ಕೆ ಸರಿಯುತ್ತಿದೆಯೋ ಎನ್ನುವಷ್ಟರಲ್ಲಿ ಮೈ ಕೊಡವಿ ನಿಂತು ಯಕ್ಷಗಾನ ಮುಂದುವರೆಯುತ್ತಿದೆ. ಯಕ್ಷಗಾನದ ಕಲಾ ಪ್ರಕಾರಗಳಾದ ಗಾನ, ನೃತ್ಯ, ವೈಭವ, ತಾಳಮದ್ದಳೆ ಇವುಗಳು ಸಮಾಜದ ಮುನ್ನೆಲೆಗೆ ಬಂದುವು, ಕಲಾ ಪ್ರೇಕ್ಷಕರು ಹುಟ್ಟಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಕ್ಷಗಾನದ ಬಗ್ಗೆ ಉತ್ತಮ ಅಭಿಪ್ರಾಯಗಳು ವಿನಿಮಯವಾಗುತ್ತಿವೆ ಎಂದರು.

ಮುಖ್ಯ ಅತಿಥಿ, ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಕಲೆಗಳ ಉಪಾಸನೆ ಮಾಡುವುದು ಮತ್ತು ಅವನ್ನು ಪರಿಗಣಿಸುವುದು ಕಲೆಯ ವೈಶಿಷ್ಟ್ಯತೆಯಾಗಬೇಕಿದೆ. ಯಕ್ಷಗಾನದ ಕಲಾ ಪ್ರಕಾರಗಳು ನಮ್ಮ ಜೀವನದಲ್ಲಿ ಹಸ್ತಾಂತರವಾಗಬೇಕು ಮತ್ತು ಅದರಲ್ಲಿ ಪರಿಣತಿ ಪಡೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯವಿದೆ. ಜನರಿಂದ ಉತ್ಪತ್ತಿಯಾದ ಜಾನಪದ ಎಂಬುದು ನಾಡಿನ ಕಲೆಯಾಗಿದ್ದು ಅವನ್ನು ಪ್ರೋತ್ಸಾಹಿಸಬೇಕಾಗಿದೆ. ಕಲೆ ಮತ್ತು ಸಂಸ್ಕøತಿ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಿದ್ದು ಇವುಗಳಲ್ಲಿ ಪರಿಣತಿ ಪಡೆದವನು ಮನುಷ್ಯ ಎಂದು ಎನಿಸಿಕೊಳ್ಳುತ್ತಾನೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಮಾತನಾಡಿ, ಭಾರತ ದೇಶವು ಹಲವು ಕಲೆಗಳ ತವರೂರಾಗಿದೆ. ಪ್ರತಿಯೊಂದು ಕಲಾ ಪ್ರಕಾರವು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು ಸಾಂಪ್ರದಾಯಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಸಂಗೀತ, ಭರತನಾಟ್ಯ, ಯಕ್ಷಗಾನ, ಕೂಚುಪುಡಿ, ಕಥಕ್ಕಳಿ ಮುಂತಾದ ಕಲೆಗಳು ನಮ್ಮ ಸಾಂಸ್ಕøತಿಕ ಜ್ಞಾನವನ್ನು ಹೆಚ್ಚಿಸುತ್ತದೆ ಅಲ್ಲದೆ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ಸದೃಢತೆಗೂ ಕಾರಣವಾಗುತ್ತದೆ. ಕಲೆಯ ವೈವಿಧ್ಯತೆಯನ್ನು ಗುರುತಿಸಿ ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಪ್ರದರ್ಶನ ಸಂಘದ ಸಂಯೋಜಕಿಯರಾದ ಸುಮನಾ ಪ್ರಶಾಂತ್ ಹಾಗೂ ರಶ್ಮಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮೃದ್ಧಿ ಶೆಣೈ ಸ್ವಾಗತಿಸಿ, ಅನುಶ್ರೀ ವಂದಿಸಿದರು. ಉಪನ್ಯಾಸಕರಾದ ಸುರೇಶ್ ಕುಮಾರ್, ಡಾ|ಆಶಾ ಸಾವಿತ್ರಿ, ಜ್ಯೋತಿರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಬೆವನ್ ಮ್ಯಾಥ್ಯೂ ಕಾರ್ಯಕ್ರಮ ನಿರೂಪಿಸಿದರು.

ರಂಜಿಸಿದ ಯಕ್ಷ ಗಾಯನ…

ಬಳಿಕ ನಡೆದ ಯಕ್ಷಗಾನ ವೈಭವದಲ್ಲಿ ಸತ್ಯನಾರಾಯಣ ಅಡಿಗರವರು ನಿರೂಪಣೆಯನ್ನು, ಪೆರ್ಲ ಸತೀಶ್ ಪುಣಿಚಿತ್ತಾಯ ಹಾಗೂ ಕು|ಪಾಣಾಜೆ ಅಮೃತ ಅಡಿಗರವರು ಭಾಗವತರಾಗಿ, ಚೆಂಡೆಯಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನೂಪ್ ಸ್ವರ್ಗ, ಮದ್ದಳೆಯಲ್ಲಿ ನೆಕ್ಕರೆಮಲೆ ಗಣೇಶ್ ಭಟ್, ಚಕ್ರತಾಳದಲ್ಲಿ ಮಾಸ್ಟರ್ ಸಮೃಧ್ ಪುಣಿಚಿತ್ತಾಯರವರು ನುಡಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ.

ಯಕ್ಷಗಾನ ಕಲೆಯು ಕರ್ನಾಟಕದ ಕರಾವಳಿಯ ಅತ್ಯಂತ ಶ್ರೀಮಂತ ಜಾನಪದ ಕಲೆಯಾಗಿದ್ದು, ಯಕ್ಷಗಾನದ ಕಂಪು ದೇಶದ ಗಡಿಯನ್ನೂ ಮೀರಿ ವಿದೇಶಗಳಿಗೆ ಹರಡಿದೆ. ಇಂದು ಯಕ್ಷಲೋಕದಲ್ಲಿ ಸಾಕಷ್ಟು ಯುವ ಕಲಾವಿದರು ಮೂಡಿ ಬರುತ್ತಿದ್ದು, ಭವಿಷ್ಯದಲ್ಲಿ ಯಕ್ಷಗಾನವು ಇನ್ನಷ್ಟು ಸಮೃದ್ಧಿ ಕಲೆಯಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಕಷ್ಟು ವೃತ್ತಿಪರ ಕಲಾವಿದರ ನಡುವೆ ಹವ್ಯಾಸಿ ಕಲಾವಿದರು ಕೂಡ ಯಕ್ಷರಾಧನೆಯನ್ನು ಮಾಡುತ್ತಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಹೇಳಿದರು.