ಭಾಷೆಯು ಜ್ಞಾನನಿಧಿಯನ್ನು ಸಂಗ್ರಹಿಸಿಡುವ ಸಂಗ್ರಹಾಲಯ-ಡಾ|ರಾಧಾಕೃಷ್ಣ

ವಿಚಾರಗಳನ್ನು ಸಂಗ್ರಹಿಸುವ ಮಾಧ್ಯಮ ಬರವಣಿಗೆ ಭಾಷೆ ಆಗಿದೆ. ಭಾಷೆ ಎಂಬುದು ಮಾನವನಿಗೆ ಸಂವಹನಯುಕ್ತ ಸಾಧನವಾಗಿದೆ. ಭಾಷೆ ಯಾವುದೇ ಇರಲಿ, ಮಾನವನಲ್ಲಿ ಅಗಾಧವಾಗಿ ಹುದುಗಿರುವ ಜ್ಞಾನನಿಧಿಯನ್ನು ಸಂಗ್ರಹಿಸಲ್ಪಡುವ ಸಾಧನವಾಗಿ ಭಾಷೆ ಪರಿಣಾಮ ಬೀರುತ್ತದೆ ಎಂದು ಕಾಸರಗೋಡು ಸರಕಾರಿ ಕಾಲೇಜು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ|ರಾಧಾಕೃಷ್ಣ ಬೆಳ್ಳೂರುರವರು ಹೇಳಿದರು.

ಅವರು ಆ.28 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ `ಪ್ರಾಚೀನ ಗ್ರಂಥಗಳ ಶೋಧ’ ಎಂಬುದರ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು. ಭಾಷೆ ಯಾವುದೇ ಇರಲಿ, ಅಲ್ಲಿ ಸಂಸ್ಕೃತ ದ ಗಾಳಿ ಇರುತ್ತದೆ. ಮಾನವ ತನಗೆ ತಿಳಿದಿರುವ ಭಾಷೆಯ ಮೂಲಕ ತನ್ನಲ್ಲಿರುವ ವಿಚಾರಧಾರೆಗಳನ್ನು ಪ್ರಚುರಪಡಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಭೂರ್ಜ ಮತ್ತು ತಾಳೆಗರಿಗಳಲ್ಲಿ ಬರೆಯುವ ಎರಡು ಮಾದರಿಗಳು ಪ್ರಾಚೀನ ಕಾಲದಲ್ಲಿ ಕಂಡುಬಂದ ಸತ್ಯಗಳಾಗಿದೆ. ಆದರೆ ಇಂದಿನ ಕಾಲದಲ್ಲಿ ಭೂರ್ಜ ಮತ್ತು ತಾಳೆಗರಿ ವಿಧಾನಗಳನ್ನು ಸಂರಕ್ಷಿಸುವ ಹೊಣೆ ನಮ್ಮದಾಗಿದೆ. ವಿದೇಶದವರು ಕೊಂಡುಹೋದ ಆಯುರ್ವೇದ ಶಾಸ್ತ್ರಗಳನ್ನು ತಂದು ಆಭ್ಯಸಿಸುವ ಅನಿವಾರ್ಯತೆಯೂ ಇದೆ ಎಂದು ಹೇಳಿ ಭಾಷೆ, ಬರವಣಿಗೆ, ಲಿಪಿಯ ಉಗಮ ಮತ್ತು ಅದರ ಬೆಳವಣಿಗೆಯ ಕುರಿತು ಸವಿಸ್ತಾರವಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಪ್ರಸ್ತುತ ವಿದ್ಯಾಮಾನವನ್ನು ಗಮನಿಸಿದರೆ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯಲ್ಲಿ ಬಹಳ ಆಸಕ್ತಿ ಇರುವಂತೆ ಕಾಣಿಸುತ್ತದೆ. ಯಾಕೆಂದರೆ ನಮ್ಮ ಕಾಲೇಜ್‍ನಲ್ಲಿ ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಿಕೊಂಡವರು ತುಂಬಾ ವಿದ್ಯಾರ್ಥಿಗಳಿರುವುದೇ ಸಾಕ್ಷಿಯಾಗಿದೆ. ಮಾತ್ರವಲ್ಲದೆ ಭಾಷೆಯ ಬೆಳವಣಿಗೆಗೂ ಸಾಧ್ಯವಾಗಿದೆ. ಯಾವುದೇ ವಿಷಯವಿರಲಿ, ಮೊದಲು ನಮ್ಮಲ್ಲಿ ಆಸಕ್ತಿ ಮೂಡಬೇಕು. ಆವಾಗ ಮಾತ್ರ ಉತ್ತುಂಗಕ್ಕೇರಲು ಸಾಧ್ಯ ಎಂದು ಹೇಳಿದರು.

ಸಂಸ್ಕೃತ ಸಂಘದ ಸಂಯೋಜಕರಾ ಸುರೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ವಿನ್‍ಸ್ಟನ್ ಸ್ವಾಗತಿಸಿ, ನಮಿತಾ ವಂದಿಸಿದರು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.