2019-20ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪ್ರಾರಂಭೋತ್ಸವ ಕಾರ್ಯಕ್ರಮ

 

ಭವಿಷ್ಯದಲ್ಲಿ ಸಿಎ ಆಗಬೇಕೆನ್ನುವ ಕನಸನ್ನು ಹೊತ್ತು ಪದವಿ ಪೂರ್ವ ಶಿಕ್ಷಣಕ್ಕೆ ಫಿಲೋಮಿನಾ ವಿದ್ಯಾಸಂಸ್ಥೆಯನ್ನು ಆರಿಸಿಕೊಂಡು, ತನ್ನ ನಿರಂತರ ಪರಿಶ್ರಮದ ಮೂಲಕ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿಯೇ ತೃತೀಯ ರ್ಯಾಂಕ್ ಗಳಿಸಿ ಸಂಸ್ಥೆಗೆ ಹೆಸರು ತಂದಿತ್ತ ಸ್ವಸ್ತಿಕ್ ಪಿ. ಹಾಗೂ ಅವರ ಅವಳಿ ಸಹೋದರಿ ಎಂಟನೇ ರ್ಯಾಂಕ್ ಗಳಿಸಿರುವ ಸಾತ್ವಿಕಾ ಪಿ, ಒಂಭತ್ತನೇ ರ್ಯಾಂಕ್ ಗಳಿಸಿರುವ ಫಾತಿಮತ್ ಸಾನಿದಾರವರ ಸಹಿತ ಡಿಸ್ಟಿಂಕ್ಷನ್ ಪಡೆದ 70 ಮಂದಿ ವಿದ್ಯಾರ್ಥಿಗಳಿಗೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವತಿಯಿಂದ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅಭಿನಂದಿಸುವ ಕಾರ್ಯಕ್ರಮವನ್ನು ಮೇ.11 ರಂದು ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಸಂತ ಫಿಲೋಮಿನಾ ಕಾಲೇಜ್‍ನ ಕ್ಯಾಂಪಸ್ ಇನ್-ಚಾರ್ಜ್ ವಂ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಪ್ರಸ್ತುತ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸುಧನ್ವ ಶ್ಯಾಮ್, ವಾಣಿಜ್ಯ ವಿಭಾಗದ ರಿತೇಶ್ ಹಾಗೂ ಕಲಾ ವಿಭಾಗದ ಡಿವೈನ್ ಎಂಬ ಮೂವರು ವಿದ್ಯಾರ್ಥಿಗಳ ಜೊತೆಗೂಡಿ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಡಿಸ್ಟಿಂಕ್ಷನ್ ಹಾಗೂ ರ್ಯಾಂಕ್ ಗಳಿಸುವುದು ವಿದ್ಯಾರ್ಥಿಗಳ ಜೀವನದ ಗುರಿ ನಿಜ. ಆದರೆ ನಮ್ಮ ನಿಜ ಜೀವನದಲ್ಲಿ ಯಾರು ಪರಸ್ಪರರನ್ನು ಪ್ರೀತಿಸುತ್ತಾರೋ, ಗುರು-ಹಿರಿಯರನ್ನು ಗೌರವಿಸುತ್ತಾರೋ, ಪರಸ್ಪರರ ಕಷ್ಟ-ಸುಖವನ್ನು ಅರ್ಥೈಸುತ್ತಾರೋ ಅವರು ರ್ಯಾಂಕ್ ಹಾಗೂ ಡಿಸ್ಟಿಂಕ್ಷನ್ ಪಡೆದವರಿಕ್ಕಿಂತ ಶ್ರೇಷ್ಟರು ಆಗುತ್ತಾರೆ ಎಂದ ಅವರು ಹಿಂದಿನ ಕಾಲದಲ್ಲಿ ಅಂಕ ಗಳಿಸುವುದು ಬಹಳ ಕಷ್ಟಕರವಾಗಿತ್ತು. ಆದರೆ ಇಂದು ಅಂಕ ಗಳಿಸಲು ಬಹಳ ಸುಲಭ ಎಂದ ಅವರು ಪ್ರಸ್ತುತ ವಿದ್ಯಾಮಾನದಲ್ಲಿ ಶಿಕ್ಷಣದ ಗುಣಮಟ್ಟವನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ಶಿಕ್ಷಣವು ಯಾವ ದಿಸೆಯಲ್ಲಿ ಸಾಗಬಲ್ಲುದು ಎಂಬುದು ಖೇದಕರ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಜೊತೆಗೆ ನಮ್ಮ ಭಾವನೆಗಳನ್ನ ಉ ಹಂಚಿಕೊಂಡು ಪ್ರತಿಯೋರ್ವರನ್ನು ಪ್ರೀತಿಯಿಂದ ಗೆಲ್ಲುವುದು ಪರಿಪೂರ್ಣತೆಯ ಲಕ್ಷಣವಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ಕಲಿಕೆಗೆ ಬೇಕಾದ ಪೂರಕ ವಾತಾವರಣವಿದೆ. ಹಿಂದಿನಿಂದಲೂ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣವನ್ನು ಕಾಯ್ದುಕೊಂಡು ಫಿಲೋಮಿನಾ ವಿದ್ಯಾಸಂಸ್ಥೆ ಬೆಳೆದುಕೊಂಡು ಬಂದಿದೆ. ಕಳೆದೆರಡು ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಗಮನಿಸಿದಾಗ ವಿದ್ಯಾರ್ಥಿಗಳ ಸಾಧನೆ ಅನನ್ಯವಾದದ್ದು. ದೇವರು ಕೊಟ್ಟ ಈ ಜೀವನವನ್ನು ಸಂತೋಷದಿಂದ ಬಾಳುವುದರ ಜೊತೆಗೆ, ಒಂದು ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡುವುದರಿಂದ ಜೀವನ ನಿಜವಾದ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು
ಉಪನ್ಯಾಸಕಿ ಸುಮನಾ ಪ್ರಶಾಂತ್‍ರವರ ನೇತೃತ್ವದಲ್ಲಿ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ.ಡಿ ಸ್ವಾಗತಿಸಿ, ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ಸತ್ಯಲತಾ ರೈ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ರ್ಯಾಂಕ್ ವಿಜೇತರಿಗೆ ಸನ್ಮಾನ..
ವಾಣಿಜ್ಯ ವಿಭಾಗದಲ್ಲಿ 594/600 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಮೂರನೇ ರ್ಯಾಂಕ್ ಪಡೆದ ಸ್ವಸ್ತಿಕ್ ಪಿ., ವಾಣಿಜ್ಯ ವಿಭಾಗದಲ್ಲಿ ಸ್ವಸ್ತಿಕ್‍ರವರ ಅವಳಿ ತಂಗಿ 589 ಅಂಕಗಳೊಂದಿಗೆ ರಾಜ್ಯದಲ್ಲಿ ಎಂಟನೇ ರ್ಯಾಂಕ್ ಗಳಿಸಿದ ಸಾತ್ವಿಕಾ ಪಿ ಹಾಗೂ 588 ಅಂಕ ಗಳಿಸಿ 9ನೇ ರ್ಯಾಂಕ್‍ನ್ನು ಗಳಿಸಿಕೊಂಡಿರುವ ಫಾತಿಮತ್ ಸಾನಿದಾರವರಿಗೆ ಶಾಲು ಹೊದಿಸಿ, ಹೂಗುಚ್ಛ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಬಾಕ್ಸ್
ಸ್ವಸ್ತಿಕ್ ಪಿ, ಸಾತ್ವಿಕಾ ಪಿ ಹಾಗೂ ಫಾತಿಮತ್ ಸಾನಿದಾರವರು ವಾಣಿಜ್ಯ ವಿಭಾಗದಲ್ಲಿ ರ್ಯಾಂಕ್‍ಗಳನ್ನು ಗಳಿಸುವುದರ ಜೊತೆಗೆ ಇನ್ನುಳಿದ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳ ಸಾಧನೆಯು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಕಠಿಣ ಪರಿಶ್ರಮ ಮತ್ತು ನಿರಂತರ ಅಧ್ಯಯನವಿದ್ದಾಗ ಸಾಧನೆ ಸಾಧ್ಯ ಎಂಬುದಕ್ಕೆ ಈ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳೇ ಸಾಕ್ಷಿ. ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಲಿಕೆಗೆ ಮಹತ್ವ ನೀಡುತ್ತಾ ಉಜ್ವಲ ಭವಿಷ್ಯದೆಡೆಗೆ ತಮ್ಮ ಜೀವನವನ್ನು ಸಾಗಿಸುವಂತಾಗಲಿ.
-ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಫಿಲೋಮಿನಾ ಪಿಯು ಕಾಲೇಜು

ಬದುಕಿನಲ್ಲಿ ಒಳ್ಳೆಯ ಗುರಿಯನ್ನಿಟ್ಟುಕೊಂಡು ಈ ವಿದ್ಯಾಸಂಸ್ಥೆಗೆ ಭರ್ತಿಯಾದೆ. ಫಿಲೋಮಿನಾ ವಿದ್ಯಾಸಂಸ್ಥೆ ಎನ್ನುವುದು ಪವಿತ್ರ ದೇಗುಲವಿದ್ದಾಗೆ. ಇಲ್ಲಿ ಕಲಿಕೆಗೆ ಬೇಕಾದ ಎಲ್ಲಾ ವಾತಾವರಣವೂ ಇದೆ. ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಪ್ರಾಂಶುಪಾಲರು, ಉತ್ತಮ ಉಪನ್ಯಾಸಕರ ಹಾಗೂ ಆಡಳಿತ ಸಿಬ್ಬಂದಿ ಬಳಗ ಈ ವಿದ್ಯಾಸಂಸ್ಥೆಯಲ್ಲಿದೆ. ನನಗೆ ಯಾವುದೇ ವಿಷಯದಲ್ಲಿ ಸಂದೇಹವಿದ್ದಾಗ ಉಪನ್ಯಾಸಕರಲ್ಲಿ ವಾಟ್ಸಾಫ್ ಮುಖೇನ ಸಂದೇಹವನ್ನು ನಿವಾರಿಸಿದ ಬಹಳಷ್ಟು ಘಟನೆಗಳಿವೆ. ಸಾಧನೆ ಸುಮ್ಮನೆ ಬಾರದು. ಸಾಧಿಸುವ ಛಲ ಮತ್ತು ಬಯಕೆವಿದ್ದಾಗ ಮಾತ್ರ ಸಾಧನೆಯ ಗುರಿ ಮುಟ್ಟಲು ಸಾಧ್ಯ.

-ಸ್ವಸ್ತಿಕ್ ಪಿ, 3ನೇ ರ್ಯಾಂಕ್ ವಿಜೇತ ವಿದ್ಯಾರ್ಥಿ
ಅಂಕಗಳು ಎಂಬುದು ಕೇವಲ ನಂಬರ್ ಎಂದು ತಿಳಿಯುವುದು ತಪ್ಪು. ಇಂದಿನ ಪ್ರಸಕ್ತ ವಿದ್ಯಾಮಾನದಲ್ಲಿ ಅಂಕಗಳು ನಮ್ಮ ಜೀವನದಲ್ಲಿ ಪ್ರಮುಖ ಮಾನದಂಡವಾಗಿ ಪರಿಣಮಿಸಿದೆ. ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ಕಲಿಕೆಗೆ ಆಗಿರಲಿ ಅಥವಾ ಪಾಠ್ಯೇತರ ಚಟುವಟಿಕೆಯಲ್ಲಿ ಆಗಿರಲಿ, ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿದ್ದೇನೆ ಎಂಬುದನ್ನು ಹೇಳಲು ಬಹಳ ಖುಶಿಯಾಗುತ್ತದೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಮತ್ತು ನನ್ನ ಹೆತ್ತವರ ಪ್ರೋತ್ಸಾಹವನ್ನು ಎಂದಿಗೂ ಮರೆಯಲಾಗದು.

-ಸಾತ್ವಿಕಾ ಪಿ, 8ನೇ ರ್ಯಾಂಕ್ ವಿಜೇತೆ
ಫಿಲೋಮಿನಾ ವಿದ್ಯಾಸಂಸ್ಥೆಯ ಉತ್ತಮ ತರಗತಿಸ್ನೇಹಿ ವಾತಾವರಣ ನನಗೆ ಬಹಳಷ್ಟು ಇಷ್ಟವಾಯಿತು. ಕಠಿಣ ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದಾಗಿದೆ. ಆದರೆ ಅದಕ್ಕೆ ಇಚ್ಛಾಶಕ್ತಿ, ಮನಸ್ಸನ್ನು ಕೇಂದ್ರೀಕರಿಸುವಿಕೆ ಮತ್ತು ಅರ್ಥಮಾಡಿಕೊಳ್ಳುವಿಕೆಯ ಗುಣವಿರಬೇಕು. ನಮ್ಮಲ್ಲಿನ ಜ್ಞಾನವನ್ನು ಹೆಚ್ಚಿಸಲು ಫಿಲೋಮಿನಾ ವಿದ್ಯಾಸಂಸ್ಥೆಯು ನಿಜವಾಗಿಯೂ ನಮಗೆ ದಾರಿದೀಪವಾಗಿದೆ.

-ಫಾತಿಮತ್ ಸಾನಿದಾ, 9ನೇ ರ್ಯಾಂಕ್ ವಿಜೇತೆ
ವಿಷಯ ಯಾವುದೇ ಇರಲಿ, ನಮ್ಮಲ್ಲಿ ಹಿಂಜರಿಕೆ ಇರಬಾರದು. ಹಿಂಜರಿಕೆ ಇದ್ದರೆ ಯಾರಿಗೂ ಸಾಧನೆ ಮಾಡಲು ಸಾಧ್ಯವಿಲ್ಲ. ಸಾಧಿಸಬಲ್ಲೆನು ಎಂಬ ಅಚಲ ನಿರ್ಧಾರ ಮತ್ಯು ಹೆಬ್ಬಯಕೆಯ ಜೊತೆಗೆ ಭರವಸೆಯೂ ಇದ್ದಾಗ ಸಾಧನೆಯ ತುಡಿತವನ್ನು ಏರಲು ಸಾಧ್ಯವಾಗಬಲ್ಲುದು. ನನಗೆ ಕಲಿಕೆಗೆ ಆಗಲಿ ಅಥವಾ ಸಾಂಸ್ಕøತಿಕ ಚಟುವಟಿಕೆಗೆ ಆಗಲಿ, ಫಿಲೋಮಿನಾ ಸಂಸ್ಥೆಯು ಸಾಕಷ್ಟು ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ ಎಂದರೆ ಸುಳ್ಳಲ್ಲ. ವಿದ್ಯಾರ್ಥಿಗಳು ಅವಕಾಶಗಳ ಸದ್ಭಳಕೆ ಮಾಡುವಲ್ಲಿ ಕಾರ್ಯೋನ್ಮುಖರಾಗಿ.

-ಶ್ರೀದೇವಿ ಕೆ, ಡಿಸ್ಟಿಂಕ್ಷನ್ ವಿದ್ಯಾರ್ಥಿನಿ
ಉತ್ತಮ ಅಂಕಗಳನ್ನು ಗಳಿಸಲು ಅವಿರತ ಪ್ರಯತ್ನ ಸದಾ ಬೇಕಾಗುತ್ತದೆ. ಉಪನ್ಯಾಸಕರ ಪ್ರೋತ್ಸಾಹದಿಂದಲೇ ನಾವಿಲ್ಲಿ ಇಂದು ಡಿಸ್ಟಿಂಕ್ಷನ್ ಪಡೆಯಲು ಕಾರಣವಾಗಿದೆ. ಕಳೆದ ಎರಡು ವರ್ಷ ಉತ್ತಮವಾಗಿ ಈ ಪವಿತ್ರವಾದ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣವನ್ನು ಪೂರೈಸಿ ನಿರ್ಗಮಿಸುತ್ತಿದ್ದೇವೆ. ವಿದ್ಯಾರ್ಥಿಗಳು ಕಲಿಕೆಗೆ ಸದಾ ಒತ್ತು ನೀಡಿ, ಉತ್ತಮ ವರ್ತನೆಯನ್ನು ಬೆಳೆಸಿಕೊಂಡಾಗ ಸಾಧನೆ ಒಲಿಯಲು ಸಾಧ್ಯ.
-ಅಕ್ಷತಾ ಎಂ, ಪಾವ್ಲ್ ವರ್ಗೀಸ್, ಡಿಸ್ಟಿಂಕ್ಷನ್ ವಿದ್ಯಾರ್ಥಿಗಳು