ಜಿಲ್ಲಾ ಮಟ್ಟದ ಅಂತರ್-ಶಾಲಾ ಸ್ಪರ್ಧೆ `ಪ್ರತಿಭಾ 2019′ ಕಾರ್ಯಕ್ರಮ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾ ಮಟ್ಟದ ಅಂತರ್-ಶಾಲಾ ಸ್ಪರ್ಧೆ `ಪ್ರತಿಭಾ 2019′ ಕಾರ್ಯಕ್ರಮವು ಆ.7ರಂದು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆಯಲಿದೆ. ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಕಾಲೇಜು ಕಳೆದ ನಾಲ್ಕು ವರ್ಷಗಳಿಂದ `ಪ್ರತಿಭಾ’ ಎನ್ನುವ ನಾಮದಡಿಯಲ್ಲಿ ಯಶಸ್ವಿ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸುತ್ತಾ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ 27 ಪ್ರೌಢಶಾಲೆಗಳಿಂದ ಸುಮಾರು 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮೆರುಗನ್ನು ಹೆಚ್ಚಿಸಲಿದ್ದಾರೆ. ಬೆಳಿಗ್ಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕನ್ನು ಹೊಂದಿರುವ ಪ್ರಖ್ಯಾತ ದಂತವೈದ್ಯರಾದ ಡಾ.ಶ್ರೀಪ್ರಕಾಶ್ ಬಂಗಾರಡ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಿಯೋ ನೊರೊನ್ಹಾ, ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ|ಸುನಿಲ್ ಜಾರ್ಜ್ ಡಿ’ಸೋಜರವರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಉಪನ್ಯಾಸಕಿ ಅಶ್ವಿನಿ ಕೆ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.