ಜಿಲ್ಲಾ ಮಟ್ಟದ ಅಂತರ್-ಶಾಲಾ ಸ್ಪರ್ಧೆ `ಪ್ರತಿಭಾ 2018′ ಕಾರ್ಯಕ್ರಮ

ಕೇವಲ ಅಂಕ ಗಳಿಸುವುದೇ ಜೀವನದ ಪ್ರಮುಖ ಉದ್ಧೇಶವಲ್ಲ ಮಾತ್ರವಲ್ಲದೆ ಜೀವನವೂ ಪರಿಪೂರ್ಣವಾಗುವುದಿಲ್ಲ. ಯಾವುದೇ ಸಾಧನೆಯ ಹಿಂದೆ ವಿಜ್ಞಾನ ಮತ್ತು ಕಲೆಯ ಹೆಚ್ಚುಗಾರಿಕೆಯಿದೆ. ಆದ್ದರಿಂದ ಪ್ರತಿಭೆ ಬೆಳಕಿಗೆ ಬರುವಲ್ಲಿ ವಿಜ್ಞಾನ ಮತ್ತು ಕಲೆಯ ಸಂಹಿತವಾದಾಗ ಮಾತ್ರ ಜೀವನಕ್ಕೆ ಅರ್ಥ ಬರುತ್ತದೆ ಎಂದು ಕಾಲೇಜ್‍ನ ಹಿರಿಯ ವಿದ್ಯಾರ್ಥಿ ಹಾಗೂ ಜಿ.ಎಲ್. ಆಚಾರ್ಯ ಜ್ಯುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕರಾದ ಬಲರಾಮ ಆಚಾರ್ಯರವರು ಹೇಳಿದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಆಶ್ರಯದಲ್ಲಿ ಸೆ.7 ರಂದು ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾ ಮಟ್ಟದ ಅಂತರ್-ಶಾಲಾ ಸ್ಪರ್ಧೆ `ಪ್ರತಿಭಾ 2018′ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಫಿಲೋಮಿನಾ ಸಂಸ್ಥೆಯವರು ಆಯೋಜಿಸಿದ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದುದು ಮಾತ್ರವಲ್ಲದೆ ವಿದ್ಯಾರ್ಥಿಗಳ ಬೆಳವಣಿಗೆಗೂ ಸಾಕಾರವಾಗುವುದು. ವಿದ್ಯಾರ್ಥಿಗಳು ಸೃಜನಾತ್ಮಕತೆ, ಬುದ್ಧಿಶಕ್ತಿ ಹಾಗೂ ಕಲಾತ್ಮಕತೆಯೆಂಬ ಸಾಪ್ಟ್ ಸ್ಕಿಲ್‍ಗಳನ್ನು ಅಳವಡಿಸಿವುದರ ಜೊತೆಗೆ ಕ್ಷಮತೆಯನ್ನೂ ಬೆಳೆಸಿಕೊಂಡಾಗ ಜೀವನವು ಯಶಸ್ವಿ ಎನಿಸುವುದು ಎಂದ ಅವರು ಫಿಲೋಮಿನಾ ಸಂಸ್ಥೆಯು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಗೊಳಿಸುವುದಕ್ಕೋಸ್ಕರ ಆಯೋಜಿಸಿರುವ ಪ್ರತಿಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತ್ತ್ಯುನ್ನತ ಪ್ರದರ್ಶನ ನೀಡುವಂತಾಗಲಿ. ಸ್ಪರ್ಧೆಯಲ್ಲೊ ಒಂದು ವೇಳೆ ಸೋತರೆ ನಿರಾಶಾರಾಗದೆ, ಮುಂದಿನ ಸ್ಪರ್ಧೆಯಲ್ಲಿ ಸಂಪೂರ್ಣ ಶಕ್ತಿ ಸಾಮಾಥ್ರ್ಯದೊಂದಿಗೆ ಪ್ರತಿಭೆಯನ್ನು ಪ್ರದರ್ಶಿಸುವಂತಾಗಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಜೀವನವೆಂಬ ಪಯಣದಲ್ಲಿ ವಿದ್ಯಾರ್ಥಿಗಳು ಗುರಿಯನ್ನು ಸಾಧಿಸಬಲ್ಲೆನೆಂಬ ದೃಢವಾದ ಆತ್ಮವಿಶ್ವಾಸ, ಭರವಸೆಯ ಜೊತೆಗೆ ಸಮಯಪ್ರಜ್ಞೆ ಇದ್ದಾಗ ಗುರಿಯನ್ನು ತಲುಪಲು ಸಾಧ್ಯ. ಜೊತೆಗೆ ಗುರುಹಿರಿಯರ ಮೇಲೆ ಭಕ್ತಿ ಹಾಗೂ ಧನ್ಯತಾಭಾವ ವಿದ್ಯಾರ್ಥಿಗಳ ಅಂತರಂಗದಲ್ಲಿ ಬೇರೂರಬೇಕು. ವಿದ್ಯಾರ್ಥಿಗಳಲ್ಲಿ ಅಡಕವಾದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಸಿಕ್ಕಾಗ ಸಿಕ್ಕಂತಹ ಅವಕಾಶವನ್ನು ಸದ್ವಿನಿಯೋಗಗೊಳಿಸುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಪಡಬೇಕಾಗಿದೆ ಎಂದ ಅವರು ವಿದ್ಯಾರ್ಥಿಗಳು ತಮ್ಮಲ್ಲಿದ್ದ ಪ್ರತಿಭೆಯನ್ನು ಇತರರಿಗೂ ಕಲಿಸಿಕೊಡುವಂತಾಗಬೇಕು. ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡಾಗ ನಾಯಕತ್ವ ಬೆಳೆಯಲು ಕಾರಣವಾಗಬಲ್ಲುದು ಎಂದು ಹೇಳಿದರು.

ಗೌರವ ಅತಿಥಿ, ಕಾಲೇಜ್‍ನ ಕ್ಯಾಂಪಸ್ ನಿರ್ದೇಶಕರು ಹಾಗೂ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ವಂ|ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊರವರು ಮಾತನಾಡಿ, ಪ್ರತಿಭೆ ಎಲ್ಲರಲ್ಲೂ ಇದೆ. ಆದರೆ ಪ್ರತಿಭೆಯು ಸಂಪನ್ನವಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ಮೊತ್ತ ಮೊದಲು ಸಮಾಧಾನ ಹಾಗೂ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕಾಗಿದೆ. ಪ್ರತಿಭೆ ಹಾಗೂ ಬುದ್ಧಿವಂತಿಕೆ ಇವೆರಡನ್ನೂ ದೇವರು ಕರುಣಿಸುವ ವರವಾಗಿದೆ ಎಂದ ಅವರು ನಮ್ಮಲ್ಲಿರುವ ಪ್ರತಿಭೆಯು ಬೆಳಗಬೇಕಾದರೆ ಮೊದಲು ಕಲಿಯುವ ಕುತೂಹಲವಿರಬೇಕು. ಕ್ರಿಯಾಶೀಲರೆನಿಸಿಕೊಂಡು ಚುರುಕು ಸ್ವಭಾವದವರಾಗಬೇಕು. ಪ್ರತಿಯೊಂದು ವಿಷಯವು ರಚನಾತ್ಮಕತೆಯಿಂದ ಕೂಡಿರುವಂತಾಗಬೇಕು ಎಂದು ಅವರು ಹೇಳಿದರು.

ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸತತ ಮೂರನೇ ವರ್ಷ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಕಾಲೇಜು ವೇದಿಕೆಯನ್ನು ಒದಗಿಸುತ್ತಿದೆ. ಅವಕಾಶ ಮತ್ತು ಸವಾಲುಗಳು ಜೀವನದಲ್ಲಿ ಎದುರಿಸಲು ಬಂದಾಗ ನಿರಾಶಾರಾಗದೆ ಸಾಧಿಸುತ್ತೇನೆ ಎಂಬ ಭರವಸೆಯೊಂದಿಗೆ ಮುಂದಡಿಯಿಡುವ ಧೈರ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಸ್ಪರ್ಧೆಗಳು ಜೀವನಕ್ಕೆ ಸೋಲು-ಗೆಲುವಿನ ಪಾಠ ಕಲಿಸುತ್ತದೆ ಮಾತ್ರವಲ್ಲದೆ ಜೀವನದಲ್ಲಿ ಮುಂದೆ ಬರಲು ಸಹಕಾರಿಯೂ ಆಗುತ್ತದೆ. ಯಾವುದೇ ವಿಷಯದಲ್ಲಿ ವಿದ್ಯಾರ್ಥಿ ಸೋಲನ್ನು ಅನುಭವಿಸಿದಾಗ ಧೃತಿಗೆಡದೆ ಉತ್ತಮ ಆಲೋಚನೆಯೊಂದಿಗೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಮುಂದೆ ಸಾಗಬೇಕು ಎಂದು ಅವರು ಹೇಳಿದರು.

ಈರ್ವರಿಗೆ ಸನ್ಮಾನ:
ಕಾಲೇಜ್‍ನ ಹಿರಿಯ ವಿದ್ಯಾರ್ಥಿ ಹಾಗೂ ಜಿ.ಎಲ್. ಆಚಾರ್ಯ ಜ್ಯುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕರಾದ ಬಲರಾಮ ಆಚಾರ್ಯರವರನ್ನು ಹಾಗೂ ಚೆನ್ನೈನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮುಕ್ತ ಸರ್ಫಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಸತತ ಐದನೇ ಬಾರಿ ಪ್ರಥಮ ಸ್ಥಾನ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ಡಿ.ಗೌಡರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಕನ್ನಡ ವಿಭಾಗದ ಉಪನ್ಯಾಸಕಿ ಉಷಾ ಯಶ್ವಂತ್‍ರವರು ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ 27 ಪ್ರೌಢಶಾಲೆಗಳ 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ರಸಪ್ರಶ್ನೆ, ಸೆಮಿನಾರ್(ವಿಚಾರ ಸಂಕಿರಣ), ಬೆಸ್ಟ್ ಔಟ್ ಆಫ್ ವೇಸ್ಟ್(ಆವೆ ಮಣ್ಣಿನಿಂದ ರಚನೆ), ಪೇಂಯ್ಟಿಂಗ್, ಪೆನ್ಸಿಲ್ ಸ್ಕೆಚ್, ಕ್ಲೇ ಮಾಡೆಲಿಂಗ್, ಸೈನ್ಸ್ ಮಾಡೆಲ್(ವಿಜ್ಞಾನ ಮಾದರಿ ಪ್ರದರ್ಶನ), ಪ್ರೊಡಕ್ಟ್ ಲಾಂಚಿಂಗ್(ಹೊಸ ಉತ್ಪನ್ನಗಳ ಬಿಡುಗಡೆ), ಕೊಲಾಜ್(ತೇಪೆ ಚಿತ್ರಗಾರಿಕೆ), ಜಾನಪದ ನೃತ್ಯ ಹೀಗೆ ಹತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೊಡ್ರಿಗಸ್, ಕಾಲೇಜ್‍ನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೈರಾಜ್ ಭಂಡಾರಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಸುಮನಾ ಪ್ರಶಾಂತ್‍ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಲಹರಿ ಮತ್ತು ಬಳಗ ಪ್ರಾರ್ಥಿಸಿದರು. ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕಿ ಅಶ್ವಿನಿ ಕೆ ವಂದಿಸಿದರು. ಉಪನ್ಯಾಸಕರಾದ ಸುಮ ಪಿ.ಆರ್, ಸುಕುಮಾರ್ ಎಸ್.ಕೆ, ಗೀತಾ ಕುಮಾರಿ, ಆಡಳಿತ ಸಿಬಂದಿ ಐಸಾಕ್ ಡಿ’ಸೋಜ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಕಾಶ್ ಸಿ.ಭಟ್, ಕಾರ್ಯದರ್ಶಿ ಶ್ರೀದೇವಿ ಕೆ, ಜೊತೆ ಕಾರ್ಯದರ್ಶಿ ಡೆಲ್ಮಾ ಲೋರಾ ಕುಟಿನ್ಹಾರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಶಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು.