ಜಿಲ್ಲಾ ಪ್ರೌಢಶಾಲಾ ವಿಭಾಗದ ಸ್ಪರ್ಧೆ `ಪ್ರತಿಭಾ -2019′

ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಸ್ಪರ್ಧೆಗಳು `ಟಾರ್ಗೆಟ್’ ಅಂದುಕೊಳ್ಳದೆ, ಸ್ಪರ್ಧೆಗಳು ನಮ್ಮ ಮನಸ್ಸಿನ ಸಮಾಧಾನಕ್ಕೆ, ಉಲ್ಲಾಸಕ್ಕೆ ಇಂಬು ಕೊಡಬಲ್ಲುದು ಎಂದು ತಿಳಿದುಕೊಳ್ಳಬೇಕು. ಆದ್ದರಿಂದ ಪ್ರತಿಯೋರ್ವರಲ್ಲೂ ಯೋಗ್ಯತೆ ಮತ್ತು ಬದ್ಧತೆ ಮನೆಮಾಡಿದಾಗ ನಮ್ಮಲ್ಲಿನ ಕನಸುಗಳು ನನಸಾಗುವುದು ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್ ಹೊಂದಿರುವ ವೈದ್ಯರಾದ ಡಾ.ಶ್ರೀಕಾಶ್ ಬಂಗಾರಡ್ಕರವರು ಹೇಳಿದರು.

ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಆಶ್ರಯದಲ್ಲಿ ಆ.7 ರಂದು ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾ ಮಟ್ಟದ ಅಂತರ್-ಶಾಲಾ ಸ್ಪರ್ಧೆ `ಪ್ರತಿಭಾ 2019′ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಹೆತ್ತವರು ಫೀಸ್ ಕಟ್ತಾರೆ ಎಂದು ಅವರ ಒತ್ತಡಕ್ಕೆ ಮಣಿದು ಶಾಲಾ-ಕಾಲೇಜಿಗೆ ಆಗಮಿಸಿದರೆ ಸಾಲದು. ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯನ್ನು ನೀಡಿದಾಗ, ವಿದ್ಯಾರ್ಥಿಗಳು ಅದನ್ನು ಸದ್ವಿನಿಯೋಗ ಮಾಡುವ ಹುಮ್ಮಸ್ಸು ಇರಬೇಕು. ಮಕ್ಕಳ ಬಾಲ್ಯದ ಸಂತೋಷವನ್ನು ಇಂದು ಮೊಬೈಲ್, ಟಿ.ವಿ ಮಾಧ್ಯಮದ ಮೂಲಕ ಹಾಳುಗೆಡಹುತ್ತಿದೆ ಎಂಬುದು ನಿಜ. ದಿನದ 24 ಗಂಟೆಗಳಲ್ಲಿ 16 ಗಂಟೆ ನಮ್ಮ ಕೈಯಲ್ಲಿರುವಾಗ, ಆ ಸಮಯದಲ್ಲಿ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಗೆಡವಲು ಪ್ರಯತ್ನಿಸಬೇಕು ಎಂದ ಅವರು ಆವೆ ಮಣ್ಣಿನಿಂದ ಹಾಗೂ ವೇಸ್ಟ್‍ವುಳ್ಳ ವಸ್ತುವಿನಿಂದ ಹೇಗೆ ಮತ್ತೊಂದು ವಸ್ತುವೊಂದನ್ನು ರಚಿಸಲಾಗುತ್ತಿದೆಯೋ ಹಾಗೆಯೇ ಮನುಷ್ಯ ಜೀವನದಲ್ಲಿ ದೇವರು ಅನೇಕ ಸುಂದರವಾದ ಅವಕಾಶಗಳನ್ನು ನೀಡಿರುವಾಗ ಅವನ್ನು ತನ್ನ ಶಿಸ್ತುಬದ್ಧ ಯೋಜನೆಯಿಂದ ಉತ್ತಮವಾಗಿ ಬಳಸಿಕೊಂಡಾಗ ಅಥವಾ ತಮ್ಮನ್ನು ತಾವು ತೊಡಗಿಸಿಕೊಂಡಾಗ ಕುಟುಂಬಕ್ಕೆ, ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಸಾಧ್ಯ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಫಿಲೋಮಿನಾ ವಿದ್ಯಾಸಂಸ್ಥೆಯ ಸುಂದರ ಕ್ರೀಡಾಂಗಣ ಸಂಸ್ಥೆಗೆ ಮಕುಟಪ್ರಾಯವಾಗಿ ಹೇಗೆ ಕಂಗೊಳಿಸುತ್ತದೆಯೋ ಹಾಗೆಯೇ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳಿಸುವ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ಫಿಲೋಮಿನಾ ವಿದ್ಯಾಸಂಸ್ಥೆ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರತಿಯೋರ್ವ ಮಕ್ಕಳಿಗೆ ದೇವರು ಒಂದಲ್ಲ ಒಂದು ಪ್ರತಿಭೆಯನ್ನು ನೀಡಿರುತ್ತಾನೆ. ಆದ್ದರಿಂದ ದೇವರು ಕೊಟ್ಟ ಆ ಪ್ರತಿಭೆ ಎಂಬ ಉಡುಗೊರೆಯನ್ನು ವಿನಮ್ರತೆಯಿಂದ ಸದ್ವಿನಿಯೋಗಗೊಳಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದ ಅವರು ಜೀವನವೆಂಬ ಪಯಣದಲ್ಲಿ ವಿದ್ಯಾರ್ಥಿಗಳು ಗುರಿಯನ್ನು ಸಾಧಿಸಬಲ್ಲೆನೆಂಬ ದೃಢವಾದ ಆತ್ಮವಿಶ್ವಾಸ, ಭರವಸೆಯ ಜೊತೆಗೆ ಸಮಯಪ್ರಜ್ಞೆ ಇದ್ದಾಗ ಗುರಿಯನ್ನು ತಲುಪಲು ಸಾಧ್ಯ. ಜೊತೆಗೆ ಗುರುಹಿರಿಯರ ಮೇಲೆ ಭಕ್ತಿ ಹಾಗೂ ಧನ್ಯತಾಭಾವ ವಿದ್ಯಾರ್ಥಿಗಳ ಅಂತರಂಗದಲ್ಲಿ ಬೇರೂರಬೇಕಾಗಿದೆ ಎಂದು ಅವರು ಹೇಳಿದರು.

ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾರವರು ಪ್ರತಿಭಾ-2019 ಕಾರ್ಯಕ್ರಮದ ಪ್ರೊಮೋವನ್ನು ಬಿಡುಗಡೆಗೊಳಿಸಿ ಮಾತನಾಡಿ, ಫಿಲೋಮಿನಾ ಪದವಿ ಪೂರ್ವ ಕಾಲೇಜು ಅದು ಕ್ರೀಡಾ ಕ್ಷೇತ್ರವಿರಲಿ ಅಥವಾ ಶೈಕ್ಷಣಿಕ ಕ್ಷೇತ್ರವಿರಲಿ ಅಥವಾ ಯಾವುದೇ ಕ್ಷೇತ್ರವಿರಲಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಅನಾವರಣಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಅವಕಾಶಗಳು ಒದಗಿ ಬಂದಾಗ ಅವನ್ನು ಸದ್ಭಳಕೆ ಮಾಡುವ ಗುಣವಿರಬೇಕಾಗುತ್ತದೆ. ಯಾರಾದರೂ ತಮ್ಮನ್ನು ವಿಮರ್ಶಾ ಭಾವನೆಯಿಂದ ನೋಡಿದಾಗ ಮತ್ತು ಜೀವನದಲ್ಲಿ ಸೋಲು ಎದುರಾದಾಗ ಧೃತಿಗೆಡದೆ ಸವಾಲುಗಳನ್ನು ಧ್ಯೆರ್ಯದಿಂದ ಎದುರಿಸುವ ಛಲಗಾರಿಕೆ ಹೊಂದಿದಾಗ ಜೀವನವು ಶೈನ್ ಎನಿಸಲಿದೆ ಎಂದರು.

ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಪದನಿಮಿತ್ತದಿಂದ ಸಿಗುವ ಗೌರವಕ್ಕಿಂತ, ಪ್ರತಿಭೆಯ ಮೂಲಕ ಸಿಗುವ ಗೌರವ ಅತೀ ಮೇಲು ಆಗಿದೆ. ಜೀವನದಲ್ಲಿ ಶಿಸ್ತು ಇದ್ದಾಗ ಅವರಿಗೆ ಯಾವುದೇ ಬೋಧನೆಯ ಅವಶ್ಯಕತೆಯಿಲ್ಲ ಎನ್ನುವುದನ್ನು ಇಂದಿಲ್ಲಿ ಪ್ರತಿಭಾ ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ನೋಡಿದಾಗ ತಿಳಿಯುತ್ತದೆ. ಪ್ರತಿಯೋರ್ವರಿಗೆ ನಿರ್ದಿಷ್ಟವಾದ ಗುಣ ಲಕ್ಷಣಗಳಿವೆ. ಆದರೆ ಅದನ್ನು ಯಾರು ಧೈರ್ಯದಿಂದ ಎದುರಿಸಿದಾಗ ಸಾಧನೆ ಮಾಡಲು ಸಾಧ್ಯವಿದೆ. ಇಲ್ಲಿನ ಪ್ರಾಂಶುಪಾಲರ ಮಾರ್ಗದರ್ಶನದಿಂದ, ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹದಿಂದ ಪ್ರತಿಭಾ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ ಎಂದರು.

ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸತತ ನಾಲ್ಕನೇ ವರ್ಷ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಕಾಲೇಜು ವೇದಿಕೆಯನ್ನು ಒದಗಿಸುತ್ತಿದೆ. ಅವಕಾಶ ಮತ್ತು ಸವಾಲುಗಳು ಜೀವನದಲ್ಲಿ ಎದುರಿಸಲು ಬಂದಾಗ ನಿರಾಶಾರಾಗದೆ ಸಾಧಿಸುತ್ತೇನೆ ಎಂಬ ಭರವಸೆಯೊಂದಿಗೆ ಮುಂದಡಿಯಿಡುವ ಧೈರ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಸ್ಪರ್ಧೆಗಳು ಜೀವನಕ್ಕೆ ಸೋಲು-ಗೆಲುವಿನ ಪಾಠ ಕಲಿಸುತ್ತದೆ ಮಾತ್ರವಲ್ಲದೆ ಜೀವನದಲ್ಲಿ ಮುಂದೆ ಬರಲು ಸಹಕಾರಿಯೂ ಆಗುತ್ತದೆ. ಯಾವುದೇ ವಿಷಯದಲ್ಲಿ ವಿದ್ಯಾರ್ಥಿ ಸೋಲನ್ನು ಅನುಭವಿಸಿದಾಗ ಧೃತಿಗೆಡದೆ ಉತ್ತಮ ಆಲೋಚನೆಯೊಂದಿಗೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಮುಂದೆ ಸಾಗಬೇಕು ಎಂದರು.

ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೊಡ್ರಿಗಸ್, ಕಾಲೇಜ್‍ನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಶಿಕುಮಾರ್ ರ್ ಬಾಲ್ಯೊಟ್ಟುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಸುಮನಾ ಪ್ರಶಾಂತ್‍ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಬಳಗ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಯೋಜಕಿ ಅಶ್ವಿನಿ ಕೆ ವಂದಿಸಿ, ಉಪನ್ಯಾಸಕಿ ಸುಮ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕರಾದ ಫಿಲೋಮಿನಾ ಮೊಂತೇರೋ, ದಿವ್ಯ ಕೆ, ಆಡಳಿತ ಸಿಬ್ಬಂದಿ ಮಾರ್ಟಿನ್ ಡಿ’ಸೋಜ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೋಭಿತ್ ರೈ, ಕಾರ್ಯದರ್ಶಿ ಸತ್ಯಾತ್ಮ, ಜೊತೆ ಕಾರ್ಯದರ್ಶಿ ಕ್ಯಾಲಿನ್ ಡಿ’ಸೋಜರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

10 ಸಾಂಸ್ಕøತಿಕ ಸ್ಪರ್ಧೆಗಳು…
ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಕನ್ನಡ ಹಾಗೂ ಇಂಗ್ಲೀಷ್ ಸೆಮಿನಾರ್(ವಿಚಾರ ಸಂಕಿರಣ), ಬೆಸ್ಟ್ ಔಟ್ ಆಫ್ ವೇಸ್ಟ್(ಕಸದಿಂದ ರಸ), ಪೇಂಯ್ಟಿಂಗ್, ಪೆನ್ಸಿಲ್ ಸ್ಕೆಚ್, ಕ್ಲೇ ಮಾಡೆಲಿಂಗ್(ಆವೆ ಮಣ್ಣಿನ ರಚನೆ), ಸೈನ್ಸ್ ಮಾಡೆಲ್(ವಿಜ್ಞಾನ ಮಾದರಿ ಪ್ರದರ್ಶನ), ಪ್ರೊಡಕ್ಟ್ ಲಾಂಚಿಂಗ್(ಹೊಸ ಉತ್ಪನ್ನಗಳ ಬಿಡುಗಡೆ), ಕೊಲಾಜ್(ತೇಪೆ ಚಿತ್ರಗಾರಿಕೆ), ಜಾನಪದ ನೃತ್ಯ ಹೀಗೆ ಹತ್ತು ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಸೂಸಲು ಕಾಲೇಜು ಅವಕಾಶವಿತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 34 ಕಾಲೇಜುಗಳಿಂದ ಸುಮಾರು 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 34 ಪ್ರೌಢಶಾಲೆಗಳಿಂದ ಸ್ಪರ್ಧೆಗಾಗಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.