ಫಿಲೋಮಿನಾ ಪಿಯು ಕಾಲೇಜಿನಲ್ಲಿ ದಿವ್ಯ ಚೇತನ ಸಂಘದಿಂದ ದಿವ್ಯ ಬಲಿಪೂಜೆ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದಿವ್ಯ ಚೇತನ ಸಂಘದ ವತಿಯಿಂದ ಕಾಲೇಜಿನ ಕ್ರೈಸ್ತ ವಿದ್ಯಾರ್ಥಿಗಳಿಗೆ ದಿವ್ಯ ಚೇತನಾ ಪ್ರಾರ್ಥನಾ ಮಂದಿರದಲ್ಲಿ ದಿವ್ಯ ಬಲಿಪೂಜೆಯನ್ನು ಫೆ.10 ರಂದು ಆಯೋಜಿಸಲಾಗಿತ್ತು.
ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್, ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಕಾಲೇಜಿನ ಪುರುಷರ ವಸತಿನಿಲಯದ ವಾರ್ಡನ್ ಆಗಿರುವ ವಂ|ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪವಿತ್ರ ಬೈಬಲ್‍ನ್ನು ವಾಚಿಸಿ ಸಂದೇಶ ನೀಡಿದ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರು, ಮೊ|ಪತ್ರಾವೋರವರ ದೂರದೃಷ್ಟಿತ್ವದ ಚಿಂತನೆಯೊಂದಿಗೆ ಆರಂಭಿಸಿದ ಈ ಕಾಲೇಜು ಇದೀಗ 62 ವರ್ಷಗಳನ್ನು ದಾಟಿದೆ. ಅಂದಿನಿಂದ ಇಂದಿನವರೆಗೆ ಈ ಸಂಸ್ಥೆಯು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಬಂದಿರುವುದು ಶ್ಲಾಘನೀಯತಕ್ಕ ಅಂಶವಾಗಿದೆ. ಸದಾ ಒಳ್ಳೆಯದನ್ನೇ ಮಾಡಬೇಕು, ಸದಾ ಒಳ್ಳೆಯದನ್ನೇ ಚಿಂತಿಸಬೇಕು ಎನ್ನುವ ಸದುದ್ಧೇಶದಿಂದ ಪ್ರಭು ಯೇಸುಕ್ರಿಸ್ತರು ಭುವಿಗೆ ಬಂದಿರುವುದಾಗಿದೆ. ಅದರಂತೆ ನಾವೆಲ್ಲರೂ ಪ್ರಭು ಯೇಸುಕ್ರಿಸ್ತರ ಉತ್ತಮ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಥೆಯ ಅಭಿವೃದ್ಧಿಗೆ ಮತ್ತು ನಮ್ಮೆಲ್ಲರ ಭವಿಷ್ಯಕ್ಕೆ ಮುನ್ನುಡಿಯಿಡುವಂತಾಗಬೇಕು ಎಂದರು.
ದಿವ್ಯ ಬಲಿಪೂಜೆ ಕೊನೆಗೆ ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಪ್ರಸಕ್ತ ಈ ಕೋವಿಡ್ ಸನ್ನಿವೇಶದಲ್ಲಿ ಶಾಲಾ-ಕಾಲೇಜುಗಳ ಆರಂಭ ವಿಳಂಬವಾದ್ದರಿಂದ ನಮ್ಮ ದಿವ್ಯ ಚೇತನ ಸಂಘದ ಆರಂಭವು ವಿಳಂಬವಾಗಿದೆ. ದೇವರು ಆದಷ್ಟು ಬೇಗ ಈ ಮಹಾಮಾರಿಯಾದ ಕೋವಿಡ್ ಅನ್ನು ಹೋಗಲಾಡಿಸಿ, ಎಲ್ಲರಿಗೂ ನಿರಾತಂಕವಾಗಿ ಮೊದಲಿನಂತೆ ಜೀವನ ಮಾಡಲು ಅನುವು ಮಾಡಿ ಕೊಡಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದು ಹೇಳಿ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ದಿವ್ಯ ಚೇತನ ಸಂಘದ ನಿರ್ದೇಶಕಿ, ಉಪನ್ಯಾಸಕಿ ಫಿಲೋಮಿನಾ ಮೊಂತೇರೋ ಸಹಿತ ದಿವ್ಯ ಬಲಿಪೂಜೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ವರ್ಗದವರು ಪಾಲ್ಗೊಂಡರು.