ಫಿಲೋಮಿನಾದಲ್ಲಿ ರಸ್ತೆ ಸುರಕ್ಷತಾ ಮಾಸ ಜಾಗೃತಿ ಸಂಚಾರಿ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ-ಎಸ್‍ಐ ರಾಮ ನಾಯ್ಕ್

ಪುತ್ತೂರು: ವಿದ್ಯಾರ್ಥಿಗಳು ಆಗಲಿ ಯಾರೇ ಆಗಲಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿ ತಮ್ಮ ಅಮೂಲ್ಯ ಜೀವವನ್ನು ಮೃತ್ಯುವಿನ ದವಡೆಗೆ ಒಯ್ಯುತ್ತಿರುವುದು ಬೇಸರದ ವಿಷಯವಾಗಿದೆ ಅದೂ ಅಲ್ಲದೆ ಲೈಸೆನ್ಸ್ ಇಲ್ಲದ 18ರ ಹರೆಯದೊಳಗಿನ ಹೆಚ್ಚಿನ ವಿದ್ಯಾರ್ಥಿಗಳು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪುತ್ತೂರು ಸಂಚಾರಿ ಠಾಣೆಯ ಎಸ್‍ಐ ರಾಮ ನಾಯ್ಕ್‍ರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೇಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಫೆ.15 ರಂದು ವಿದ್ಯಾರ್ಥಿಗಳಿಗೆ ನಡೆಸಲಾದ 32ನೇ ರಸ್ತೆ ಸುರಕ್ಷತಾ ಮಾಸ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಂಚಾರಿ ನಿಯಮದ ಬಗ್ಗೆ ಹಾಗೂ ರಸ್ತೆ ಸುರಕ್ಷತಾ ಬಗ್ಗೆ ಮಾತನಾಡಿದರು. ಸಂಚಾರಿ ನಿಯಮವನ್ನು ಯಾರೇ ಉಲ್ಲಂಘನೆ ಮಾಡಿದರೂ ಅದು ಶಿಕ್ಷಾರ್ಹ ಅಪರಾಧವೇ. ಪ್ರಸಕ್ತ ವಿದ್ಯಾಮಾನದಲ್ಲಿ ರಸ್ತೆ ಅಪಘಾತದಿಂದ ಸಾಯುವವರು ಹೆಚ್ಚಾಗಿ ತರುಣರೇ ಆಗಿದ್ದಾರೆ. ಆದರೂ ಈ ಯುವಸಮುದಾಯ ಬುದ್ದಿ ಕಲಿಯದಿರುವುದು ವಿಪರ್ಯಾಸವಾಗಿದೆ. ವಾಹನಗಳನ್ನು ನಾವು ಚಲಾಯಿಸುವಾಗ ತನ್ನ ಮತ್ತು ಮತ್ತೊಬ್ಬರ ಜೀವದ ಬಗ್ಗೆ ಮಹತ್ವದ ಅರಿವು ಹೊಂದಬೇಕಾಗಿರುವುದು ಮತ್ತು ವಾಹನ ಚಲಾಯಿಸುವಾಗ ನಮ್ಮಲ್ಲಿ ವಾಹನದ ಅಧಿಕೃತ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದ ಅವರು ಪ್ರತಿಷ್ಠಿತ ಕಂಪೆನಿಗಳಲ್ಲಿ ಮಾತ್ರ ಇನ್ಸೂರೆನ್ಸ್ ಮಾಡಿಸುವುದು ಒಳಿತು. ನೂತನ ವಾಹನಗಳನ್ನು ಖರೀದಿಸುವವರು ನಮ್ಮ ವಾಹನಕ್ಕೆ ಐದು ವರ್ಷಗಳ ಇನ್ಸೂರೆನ್ಸ್ ಇದೆ ಎಂದರೆ ಅದು ತಪ್ಪಾದೀತು. ಅದು ಇರುವುದು ಕೇವಲ ಒಂದೇ ವರ್ಷಕ್ಕೆ. ರಿನೀವಲ್ ಮಾಡಿದಿದ್ರೆ ವಾಹನಕ್ಕೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮಾತ್ರ ಲಭ್ಯವಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಮನುಷ್ಯನ ಜೀವ ಬಹಳ ಅಮೂಲ್ಯವಾದದ್ದು. ಬಾಳಿ ಬದುಕಬೇಕಾದ ಯುವ ಪೀಳಿಗೆಯೇ ಇತ್ತೀಚೆಗಿನ ದಿನಗಳಲ್ಲಿ ರಸ್ತೆ ಅಪಘಾತಗಳಲ್ಲಿ ಜೀವನ್ನಪ್ಪುತ್ತಿರುವುದು ಯುವಪೀಳಿಗೆ ಎತ್ತ ಕಡೆಗೆ ಸಾಗುತ್ತಿದೆ ಎಂದು ತಿಳಿಯಬೇಕಾಗಿದೆ. ಮನೆಯಲ್ಲಿ ಹೆತ್ತವರು ತಮಗೆ ಇಷ್ಟವಿಲ್ಲದಿದ್ದರೂ ಮಕ್ಕಳಿಗೆ ಗರಿಷ್ಟ ಬೆಲೆಯ ಬೈಕ್‍ಗಳನ್ನು ಕೊಡಿಸುವುದು, ಅಪಘಾತಗಳಿಗೆ ಕಾರಣವೆನಿಸುವ ಬೈಕ್‍ಗಳಿಗೆ ವಿದ್ಯಾರ್ಥಿಗಳು ಮೋಹಚಿತ್ತರಾಗುವುದು ಒಂದರ್ಥದಲ್ಲಿ ಇವೆಲ್ಲವೂ ಅಪಘಾತಗಳಿಗೆ ಎಡೆಮಾಡಿಕೊಡುತ್ತದೆ. ಯುವಪೀಳಿಗೆಯು ವಾಹನಗಳನ್ನು ಚಲಾಯಿಸುವಾಗ ವೇಗದ ಬಗ್ಗೆ ಹೆಚ್ಚಿನ ಗಮನವಿಡುವಂತಾದಾಗ ಅಪಘಾತವನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು.
ಸಂಚಾರಿ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್‍ಗಳಾದ ಪ್ರಶಾಂತ್ ರೈ ಹಾಗೂ ರಾಧಾಕೃಷ್ಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ರೂ.2.5 ಲಕ್ಷದ ಬೈಕ್, ಜೀವಕ್ಕೆ ಆಪತ್ತು..
ಮನೆಯವರ ಬಗ್ಗೆ ಚಿಂತಿಸುವುದು ಒಳಿತು..
ಬೈಕ್‍ಗಳಲ್ಲಿ ಮೂವರು ಹೋಗುವುದು, ಹೆಲ್ಮೆಟ್ ಧರಿಸದೇ ಇರುವುದು ಅಥವಾ ನಾಮಕಾವಸ್ಥೆಗೆ ಹೆಲ್ಮೆಟ್‍ನ್ನು ಧರಿಸುವುದು, ಬಸ್‍ನಲ್ಲಿ ಫುಟ್‍ಬೋರ್ಡ್‍ನಲ್ಲಿ ನಿಂತು ಪ್ರಯಾಣಿಸುವುದು, ಎಲ್‍ಎಲ್‍ಆರ್ ಸಿಕ್ಕಿದ ತಕ್ಷಣ ವಾಹನವನ್ನು ರಸ್ತೆಯಲ್ಲಿ ಚಲಾಯಿಸುವುದು, ವಾಹನಗಳಲ್ಲಿ ಸರಿಯಾದ ದಾಖಲೆ ಪತ್ರಗಳನ್ನು ಇಡದಿರುವುದು, ಅತಿಯಾದ ವೇಗದಿಂದ ವಾಹನಗಳನ್ನು ಚಲಾಯಿಸುವುದು, ಸಂಚಾರಿ ನಿಯಮವನ್ನು ಉಲ್ಲಂಘಿಸುವುದು, ಕಾರಿನಲ್ಲಿ ಐದು ಜನರಿಗಿಂತ ಜಾಸ್ತಿ ಜನರನ್ನು ಹಾಕುವುದು, ಓವರ್‍ಟೇಕ್ ಮಾಡುವುದು ಇವೆಲ್ಲವೂ ಅಪಘಾತಕ್ಕೆ ಹಾಗೂ ಪ್ರಾಣಹಾನಿಗೆ ಕಾರಣವಾಗುತ್ತದೆ. ರೂ.2.5 ಲಕ್ಷ ಮೌಲ್ಯದ ಬೈಕ್‍ಗಳನ್ನು ಖರೀದಿಸಿ, ಅತಿಯಾದ ವೇಗದಿಂದ ಚಲಾಯಿಸಿದರೆ ಜೀವಕ್ಕೆ ಆಪತ್ತು ತರವುದು ಖಂಡಿತಾ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯವರ ಬಗ್ಗೆ ಚಿಂತಿಸುವುದು ಒಳಿತು.
-ಶಿವಪ್ರಸಾದ್, ಹೆಡ್‍ಕಾನ್‍ಸ್ಟೇಬಲ್, ಪುತ್ತೂರು ಸಂಚಾರಿ ಠಾಣೆ

112 ನಂಬರಿಗೆ ಕರೆ ಮಾಡಿ, ಜೀವ ಉಳಿಸಿ..
ದ.ಕ ಜಿಲ್ಲೆಯಲ್ಲಿ ಆರು ಪೊಲೀಸ್ ವಾಹನಗಳು ಅಪಘಾತದ ಸಂದರ್ಭದಲ್ಲಿ ನಿರಂತರವಾಗಿ ಕಾರ್ಯಾಚರಿಸುತ್ತದೆ. ಯಾವುದೇ ಕಡೆಗಳಲ್ಲಿ, ಯಾವುದೇ ಸಂದರ್ಭದಲ್ಲಿ ಏನಾದರೂ ಅಪಘಾತಗಳು ಸಂಭವಿಸಿದರೆ ಕೂಡಲೇ 112 ನಂಬರಿಗೆ ಫೋನಾಯಿಸಿ, ಸರಿಯಾದ ಲೊಕೇಶನ್ ತಿಳಿಸಿ. ನೀವು ಫೋನ್ ಮಾಡಿದ ಕರೆಯು ಬೆಂಗಳೂರಿನ ಪೊಲೀಸ್ ಕಂಟ್ರೋಲ್ ರೂಂಗೆ ತಲುಪಿ, ಅಲ್ಲಿಂದ ಅವರು ಸಂಬಂಧಪಟ್ಟ ಅಪಘಾತ ಸ್ಥಳಕ್ಕೆ ವಾಹನಗಳನ್ನು ಬರೀ ಹತ್ತೇ ನಿಮಿಷದಲ್ಲಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ಸಾರ್ವಜನಿಕ ಪ್ರಾಣಹಾನಿಯನ್ನು ಮತ್ತು ದೇಶದ ಸಂಪತ್ತನ್ನು ಉಳಿಸಬಹುದಾಗಿದೆ.
-ರಾಮ ನಾಯ್ಕ್, ಎಸ್‍ಐ, ಸಂಚಾರಿ ಪೊಲೀಸ್ ಠಾಣೆ, ಪುತ್ತೂರು