ಬಾಲಕನೋರ್ವನ ಮೂತ್ರಪಿಂಡಗಳ ಡಯಾಲಿಸಿಸ್‍ಗೆ ಫಿಲೋಮಿನಾ ಪ.ಪೂ ಕಾಲೇಜಿನಿಂದ ನೆರವು

ಮೂತ್ರಪಿಂಡಗಳೆರಡು ಬೆಳವಣಿಗೆ ಹೊಂದದೆ ಬಳಲುತ್ತಿರುವ ಬಾಲಕನೋರ್ವನಿಗೆ ಇಲ್ಲಿನ ಕಾಲೇಜೊಂದು ಸಹಾಯಹಸ್ತ ಚಾಚಿದೆ.

ಇಲ್ಲಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮಂಜೇಶ್ವರ ತಾಲೂಕಿನ ಕಾಟುಕುಕ್ಕೆ ದಂಬೆಕಾನ ನಿವಾಸಿ ವಿಶ್ವನಾಥ ರೈ ಹಾಗೂ ಪುಷ್ಪಾವತಿ ದಂಪತಿಯ ಈರ್ವರು ಪುತ್ರರಲ್ಲಿ ಕಿರಿಯವರಾದ ಪ್ರತಿಭಾವಂತ ವಿದ್ಯಾರ್ಥಿ ಜಿತೇಶ್ ಕುಮಾರ್ ಡಿ.ರವರೇ ಎರಡೂ ಕಿಡ್ನಿಗಳು ಬೆಳವಣಿಗೆ ಹೊಂದದೆ ಬಳಲುತ್ತಿರುವ ದುರ್ದೈವಿಯಾಗಿದ್ದಾರೆ. ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಬೇಕಾಗಿದ್ದು ತಿಂಗಳಿಗೆ ರೂ.30 ಸಾವಿರ ವೆಚ್ಚ ತಗಲುತ್ತಿದ್ದು, ವರ್ಷಕ್ಕೆ ರೂ.3 ಲಕ್ಷದ 60 ಸಾವಿರ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸದೃಢವಲ್ಲದ ಜಿತೇಶ್‍ರವರ ಕುಟುಂಬದ ಪರಿಸ್ಥಿತಿಯನ್ನು ಮನಗಂಡು ಅರಿತು ಬಾಲಕನ ಚಿಕಿತ್ಸೆಗೆ ನೆರವಾಗಲೆಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಆಡಳಿತ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಮೂಲಕ ರೂ.ಒಂದು ಲಕ್ಷ ಹಣವನ್ನು ಸಂಗ್ರಹಿಸಿ ಬಳಲುತ್ತಿರುವ ಬಾಲಕನ ಮನೆಗೆ ತೆರಳಿ ಸಂಗ್ರಹಿಸಿದ ಹಣದ ಮೊತ್ತವನ್ನು ಹಸ್ತಾಂತರಿಸಿದ್ದು, ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಉಪನ್ಯಾಸಕರಾದ ಫಿಲೋಮಿನಾ ಮೊಂತೇರೋ, ಲವೀನಾ ಸಾಂತ್‍ಮಾಯೆರ್, ಸುರೇಶ್ ಕುಮಾರ್‍ರವರು ಉಪಸ್ಥಿತರಿದ್ದು ಬಾಲಕ ಜಿತೇಶ್‍ರವರು ಶೀಘ್ರ ಗುಮುಖವಾಗಲೆಂದು ಹಾರೈಸಿದ್ದಾರೆ. ಸದ್ರಿ ಬಾಲಕನ ಚಿಕಿತ್ಸೆಗೆ ನೆರವಾಗುವ ಸಹೃದಯಿ ದಾನಿಗಳು ವಿಜಯಾ ಬ್ಯಾಂಕ್ ಕಾಟುಕುಕ್ಕೆ, ಮಂಗಳೂರು, ಖಾತೆ ನಂಬ್ರ 205201111000188, ಐಎಫ್‍ಸಿ ಕೋಡ್ VIJB0002052 ಖಾತೆಗೆ ಹಣವನ್ನು ಜಮಾಯಿಸಬಹುದಾಗಿದೆ.