ರಕ್ಷಕ-ಶಿಕ್ಷಕ ಸಂಘದ ಉದ್ಘಾಟನೆ

ಸರಕಾರದಿಂದ ಸಿಗುವ ಸೌಲಭ್ಯಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ಬೇಕಾದರೂ ಕಾದು ನಿಲ್ತಾರೆ. ಆದರೆ ತಮ್ಮ ಮಕ್ಕಳ ಹಿತಗೋಸ್ಕರ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಪೋಷಕರ ಸಭೆಗೆ ಕೆಲಸವಿದೆ, ಪುರುಸೊತ್ತಿಲ್ಲ ಎಂದು ಕೇವಲ ದಸ್ಕತ್ತು ಹಾಕಿ ಹೋಗುವ ಪೋಷಕರಿಗೆ ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮವಾಗಿ ಬೆಳೆಯಬೇಕು ಎನ್ನುವ ಕಾಳಜಿಯಿಲ್ಲ. ಯಾರಿಗೆ ತಮ್ಮ ಮಕ್ಕಳ ಸಾಧನೆ ಬಗ್ಗೆ ಹಂಬಲವಿದೆಯೋ ಅವರು ಬದುಕಿನಲ್ಲಿ ಶ್ರೇಷ್ಟತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಲೇಖಕರು ಹಾಗೂ ಶೈಕ್ಷಣಿಕ ಮಾರ್ಗದರ್ಶಕರಾದ ನಾರಾಯಣ ಭಟ್ ಟಿ.ರಾಮಕುಂಜರವರು ಹೇಳಿದರು.

ಅವರು ಜು.5 ರಂದು ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ 2019-20ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಉದ್ಘಾಟನೆಯಲ್ಲಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ದೀಪ ಬೆಳಗಿಸಿ ಉದ್ಘಾಟಿಸಿ `ವಿದ್ಯಾರ್ಥಿಗಳ ಜೀವನದಲ್ಲಿ ಪೋಷಕರ ಜವಾಬ್ದಾರಿಗಳ’ ಬಗ್ಗೆ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇವಲ ಫೀಸು ಕಟ್ಟಿ ತಮ್ಮ ಮಕ್ಕಳನ್ನು ಶಾಲಾ-ಕಾಲೇಜ್‍ಗೆ ಕಳುಹಿಸಿದರೆ ಸಾಲದು. ತಮ್ಮ ಮಕ್ಕಳು ಹೇಗಿದ್ದಾರೆ ಎಂಬುದನ್ನು ಗಮನಿಸಲು ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಅಂಕ ಗಳಿಸುವುದು ಒಂದೇ ನಮ್ಮ ಗುರಿ ಎಂದು ಅಂದುಕೊಳ್ಳಬಾರದು. ಪ್ರಸ್ತುತ ವಿದ್ಯಾಮಾನದಲ್ಲಿ ಕೇವಲ ನೂರು ಅಂಕಗಳು ಗಳಿಸಿದರೂ ವೃತ್ತಿ ಸಿಗಲಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿ ಬದುಕು ಉತ್ತಮ ಎನಿಸಿಕೊಳ್ಳಬೇಕಾದರೆ ಕೌಶಲ್ಯದ ಜೊತೆಗೆ ಬದುಕಿನಲ್ಲಿ ಆಶಾದಾಯಕ ಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದ ಅವರು ಪ್ರಶಸ್ತಿ ಗಳಿಸುವುದು ದೊಡ್ಡ ಸಂಗತಿಯಲ್ಲ. ಬದಲಾಗಿ ನಾವು ನಮ್ಮ ಸುತ್ತಮುತ್ತಲಿನ ಸಮಾಜದ ಜನರೊಡನೆ ಹೇಗಿದ್ದೇವೆ ಎಂಬುದು ಬಹಳ ಮುಖ್ಯವೆನಿಸುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಜೀವನ ಎನ್ನುವುದು ಅದು ಕಬ್ಬಿಣದ ಕಡಲೆ ಇದ್ದಾಗೆ. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಿಗೆ ಕಷ್ಟಗಳ ಬಗ್ಗೆ ಅಷ್ಟೊಂದು ಅರಿವಿರುವುದಿಲ್ಲ. ಶೈಕ್ಷಣಿಕ ವಿದ್ಯಾಭ್ಯಾಸವನ್ನು ಪೂರೈಸಿದ ಬಳಿಕ `ಮುಂದೇನು’ ಎಂಬ ಚಿಂತೆ ಆವರಿಸಿದಾಗಲೇ ತಿಳಿಯುತ್ತದೆ ಬದುಕು ಎನ್ನುವುದು ಎಷ್ಟು ಕಷ್ಟವೆಂದು. ಕಠಿಣ ಪರಿಶ್ರಮ ಹಾಗೂ ದೇವರ ಮೇಲೆ ನಂಬಿಕೆ ಇಟ್ಟಾಗ ದೇವರು ಖಂಡಿತಾ ಕೃಪೆಯನ್ನು ಕರುಣಿಸುತ್ತಾನೆ. ಉತ್ತಮ ಜೀವನ, ಸಹಬಾಳ್ವೆ ಹಾಗೂ ಪರಸ್ಪರ ಹೊಂದಿಕೊಂಡು ಸಮಾಜದಲ್ಲಿ ಜೀವಿಸಿದಾಗ ಸಮಾಜ ಗೌರವಿಸುತ್ತದೆ ಎಂದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಫಿಲೋಮಿನಾ ಕಾಲೇಜ್‍ಗೆ ತನ್ನದೇ ಆದ ಇತಿಹಾಸವಿದೆ. ಫಿಲೋಮಿನಾ ವಿದ್ಯಾಸಂಸ್ಥೆಯು ಸಣ್ಣ ವಿದ್ಯಾಸಂಸ್ಥೆಯಲ್ಲ. ತಾನು ಕಲಿತದ್ದು ಕೂಡ ಇದೇ ವಿದ್ಯಾಸಂಸ್ಥೆಯಲ್ಲಿ. ಅನೇಕ ಹಿರಿಯರು ಈ ವಿದ್ಯಾಸಂಸ್ಥೆಯಲ್ಲಿ ಕಲಿತು ಇಂದು ಸಮಾಜದ ಉತ್ತಮ ಸ್ತರದಲ್ಲಿ ಇದ್ದಾರೆ ಎನ್ನುವುದು ಶ್ಲಾಘಿಸತಕ್ಕ ಅಂಶವಾಗಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಕೆಲವೊಂದು ಚಟುವಟಿಕೆಗಳನ್ನು ಗಮನಿಸಿದಾಗ ವಾತಾವರಣವು ಗೊಂದಲದ ಗೂಡಾಗಿದೆ ಎಂದನಿಸುತ್ತದೆ. ವಿನಯವಂತ ಹೃದಯವುಳ್ಳ ಅಧ್ಯಾಪಕ ವೃಂದ ಈ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ. ಪುತ್ತೂರಿನ ವಿದ್ಯಾರ್ಥಿ ಸಮುದಾಯವನ್ನು, ಜನರನ್ನು ಸರಿ ದಾರಿಗೆ ತರುವುದು ಪ್ರಜ್ಞಾವಂತ ನಾಗರಿಕನ ಕರ್ತವ್ಯದ ಜೊತೆಗೆ ಒಳ್ಳೆಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಪುತ್ತೂರಿನ ಇತಿಹಾಸವನ್ನು ಬೆಳೆಸೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜ್‍ನ ಪ್ರಾಂಶುಪಾಲ ವಂ| ವಿಜಯ್ ಲೋಬೋರವರು, ಪ್ರತಿಯೋರ್ವ ವಿದ್ಯಾರ್ಥಿಯ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣವು ಅತ್ಯಂತ ಪ್ರಮುಖವಾದ ಘಟ್ಟವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಪಥಕ್ಕೆ ದಾರಿದೀಪವಾಗಿದೆ. ವಿದ್ಯಾರ್ಥಿಗಳ ಕಡೆಗೆ ಹೆತ್ತವರು ಹೆಚ್ಚಿನ ಪ್ರಮಾಣದಲ್ಲಿ ಗಮನ ನೀಡಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿ ಪ್ರಸ್ತುತವಾಗಿದೆ. ಶೈಕ್ಷಣಿಕ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಮಾಡುವ ಕೆಲಸದ ಬಗ್ಗೆ ಸಮರ್ಪಣಾಭಾವ ಅತ್ಯಂತ ಪ್ರಮುಖ ಅಂಶಗಳಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಹುರಿದುಂಬಿಸಲು ಶಿಕ್ಷಕರು ಹಾಗೂ ಹೆತ್ತವರು ಮನ ಮಾಡಬೇಕಾಗಿದೆ ಎಂದ ಅವರು ಹದಿಹರೆಯದ ವಿದ್ಯಾರ್ಥಿಗಳು ದುವ್ರ್ಯಸನಗಳಿಗೆ ಬಲಿಯಾಗದೆ, ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳದ ರೀತಿಯಲ್ಲಿ ನೋಡಬೇಕಾಗಿದೆ. ಆದ್ದರಿಂದ ವರ್ಷಂಪ್ರತಿ ವಿದ್ಯಾಸಂಸ್ಥೆಯು ಪೋಷಕರ ಸಭೆಯನ್ನು ಕರೆಯುವುದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಳ್ಳುವುದೇ ಮುಖ್ಯ ಉದ್ಧೇಶವಾಗಿದೆ ಎಂದು ಅವರು ಹೇಳಿದರು.

ದುರ್ಗಾಪ್ರಸಾದ್ ರೈ ಸನ್ಮಾನ:
ಕಳೆದ ಎರಡು ವರ್ಷಗಳ ತನಕ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಸಂಸ್ಥೆಯ ಅಭಿವೃದ್ಧಿಯಲ್ಲಿ ಹಾಗೂ ಕಾರ್ಯ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರರವರನ್ನು ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ, ಉಪನ್ಯಾಸಕ ಪ್ರಶಾಂತ್ ಭಟ್ ಸ್ವಾಗತಿಸಿ, ಕೋಶಾಧಿಕಾರಿ, ಉಪನ್ಯಾಸಕ ಅನಿಲ್ ಕುಮಾರ್‍ರವರು ಲೆಕ್ಕಪತ್ರ ಮಂಡಿಸಿ ವಂದಿಸಿದರು. ಉಪನ್ಯಾಸಕರಾದ ವಿಜಯ್ ಮ್ಯಾಕ್ಸಿಂ ಡಿ’ಸೋಜ, ಅಶ್ವಿನಿ ಕೆ, ರವಿಪ್ರಸಾದ್, ಭರತ್ ಪೈಯವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಸನ್ಮಾನಿತ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳ ಹೆಸರನ್ನು ಉಪನ್ಯಾಸಕ ಸಂಜಯ್‍ರವರು ಓದಿದರು. ಉಪನ್ಯಾಸಕಿ ಡಾ.ಆಶಾ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಹೆತ್ತವರೇ ಮಕ್ಕಳಿಗೆ ರೋಲ್ ಮಾಡೆಲ್ ಎನಿಸಲಿ…
ಹೇಗೆ ಚಿನ್ನ ಕಾದ ಬಳಿಕವೇ ಆಭರಣವಾಗುವುದೋ, ಕಲ್ಲಿಗೆ ಪೆಟ್ಟು ಕೊಟ್ಟು ಹೇಗೆ ಸುಂದರ ಮೂರ್ತಿಯಾಗುವುದೋ ಅದರಂತೆ ನಮ್ಮ ಮಕ್ಕಳು ತಪ್ಪು ಮಾಡಿದಾಗ ಅಗತ್ಯ ಬಿದ್ದಲ್ಲಿ ಪೆಟ್ಟು ಕೊಟ್ಟು ಅವರನ್ನು ಉತ್ತಮ ದಾರಿಗೆ ತಂದಾಗ ಮಕ್ಕಳು ಸಮಾಜದಲ್ಲಿ ಮುಂದೆ ಗೌರವಯುತವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಕ್ಕಳ ಕಂಡೀಶನ್‍ಗೆ ಯಾವುದು ಬೇಕು, ಯಾವುದು ಬೇಡ ಎಂಬುದನ್ನು ಸರಿಯಾಗಿ ನಿರ್ಧರಿಸಿ ಮುಂದಡಿಯಿಡಿ. ಅತಿಯಾದ ಸ್ವಾತಂತ್ರ್ಯ, ಸೌಲಭ್ಯವನ್ನು ಎಂದಿಗೂ ಕೊಡಬೇಡಿ. ಮನೆಯಲ್ಲಿ ಮಕ್ಕಳಿಗೆ ಕಲಿಯುವ ವಾತಾವರಣವನ್ನು ಸೃಷ್ಟಿಸಿ, ಕುಟುಂಬದ ಸಂಬಂಧಗಳ ಬಗ್ಗೆ ತಿಳಿ ಹೇಳಿ. ಮಾಕ್ರ್ಸ್ ಪಡೆಯಲಿಲ್ಲ ಎಂದು ಮಕ್ಕಳಿಗೆ ಮಾನಸಿಕ ಆಘಾತ ನೀಡಬೇಡಿ. ಯಾಕೆಂದರೆ ತಮ್ಮ ವೃದ್ಧಾಪ್ಯದಲ್ಲಿ ನೋಡುವವರು ಅಂಕ ಗಳಿಸದವರೇ ಹೊರತು ರ್ಯಾಂಕ್ ಪಡೆದವರಲ್ಲ. ಹೆತ್ತವರ ಉತ್ತಮ ನಡೆಯೇ ಮಕ್ಕಳಿಗೆ ರೋಲ್ ಮಾಡೆಲ್ ಆಗಲಿ.

-ನಾರಾಯಣ ಭಟ್ ರಾಮಕುಂಜ, ಲೇಖಕರು, ಶೈಕ್ಷಣಿಕ ಮಾರ್ಗದರ್ಶಕರು
ರೌಂಡ್ ಬಾಕ್ಸ್
ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ರ್ಯಾಂಕ್ ಗಳಿಸಿದ ಕಾಲೇಜ್‍ನ ಸ್ವಸ್ತಿಕ್ ಪಿ, ಆರನೇ ರ್ಯಾಂಕ್ ಗಳಿಸಿದ ಸ್ವಸ್ತಿಕ್‍ರವರ ಅವಳಿ ಸಹೋದರಿ ಸಾತ್ವಿಕಾ ಪಿ, 9ನೇ ರ್ಯಾಂಕ್ ಗಳಿಸಿದ ಫಾತಿಮತ್ ಸಾನಿದಾ ಮತ್ತು ಶೇ.95 ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಶ್ರೀದೇವಿ ಕೆ, ಲಿಶಾ ಜಾಸ್ಮಿನ್, ಅಂಜನ್ ಕುಮಾರ್, ಶರಲ್ ಸೆಲ್ಮಾ ಡಿ’ಸೋಜ, ನಿಶಾಪ್ರಭಾ ಎನ್, ರೆಚೆಲ್ ಡಿ’ಸೋಜರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.