ರಕ್ಷಕ-ಶಿಕ್ಷಕ ಸಂಘದ ಉದ್ಘಾಟನೆ

ಹೆತ್ತವರ ಆಶಯದಂತೆ ಮಕ್ಕಳು ಮಾರ್ಕ್ಸ್‌ಗಾಗಿ ರೇಸ್ ಮಾಡುತ್ತಾ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಅಂಕಗಳು ಬದುಕನ್ನು ಗೆಲ್ಲಿಸಲಾರದು. ಮಕ್ಕಳಲ್ಲಿ ಜ್ಞಾನ ಜಾಸ್ತಿಯಾಗಿ ಹೃದಯವಂತಿಕೆ ಕಡಿಮೆಯಾಗುತ್ತಿದೆ. ಮಾರ್ಕ್ಸ್ ಗಳಿಕೆಗಿಂತ ಹೃದಯಶ್ರೀಮಂತಿಕೆಯ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವುದು ಇಂದಿನ ಪ್ರಸ್ತುತತೆಯಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಜೇಸಿಐ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ.ರವರು ಹೇಳಿದರು.

ಅವರು ಜು.30 ರಂದು ಕಾಲೇಜ್‌ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ವಜ್ರಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಪುತ್ತೂರಿನ ಹಿರಿಯ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ 2018-19ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ‘ವಿದ್ಯಾರ್ಥಿಗಳ ಜೀವನದಲ್ಲಿ ಹೆತ್ತವರ ಜವಾಬ್ದಾರಿ’ಗಳ ಕುರಿತು ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆತ್ತವರು ತಮ್ಮ ಮಕ್ಕಳು ಹೀಗೆಯೇ ಆಗಬೇಕು ಎಂಬ ಕನಸುಗಳನ್ನು ಮಕ್ಕಳ ಮೇಲೆ ಹೇರುತ್ತಾ ಮಕ್ಕಳಲ್ಲಿ ಒತ್ತಡವನ್ನು ಹೇರುವ ಬದಲು ಅವರಲ್ಲಿ ಪರಸ್ಪರ ಪ್ರೀತಿಸುವ ಗುಣವನ್ನು ಕಲಿಸಿಕೊಡುವಂತಾಗಬೇಕು. ಮಕ್ಕಳು ತಮ್ಮ ಹೆತ್ತವರನ್ನು, ಸಮಾಜವನ್ನು ಹಾಗೂ ರಾಷ್ಟ್ರವನ್ನು ತಮ್ಮ ಅಂತಃಕರಣದಲ್ಲಿಟ್ಟು ಪ್ರೀತಿಸುವಂತಾಗಬೇಕು. ಮೌಲ್ಯಗಳನ್ನು ಕೇವಲ ಬೋಧಿಸುವುದರಿಂದ ಯಾವುದೇ ಪ್ರಯೋಜನಬಾರದು ಬದಲಾಗಿ ಅವುಗಳನ್ನು ಪ್ರಾಯೋಗಿಕವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಪ್ರತಿಕ್ರಿಯೆ ಉಂಟಾಗಬಲ್ಲುದು ಎಂದ ಅವರು ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ, ಸ್ವಂತ ನಿರ್ಧಾರ ತಳೆಯುವಂತಹ ಸಮರ್ಥತೆಯನ್ನು ಬೆಳೆಸುವಂತಾಗಬೇಕು. ಹೊಸತನವುಳ್ಳ ಯೋಜನೆ ಹಾಗೂ ಯೋಚನೆಗಳನ್ನು ಯಾರು ತಳೆಯುತ್ತಾರೋ ಅವರೇ ನಿಜವಾದ ನಾಯಕರಾಗಿರುತ್ತಾರೆ. ಮಕ್ಕಳಲ್ಲಿ ಜೀವನದಲ್ಲಿ ಸೃಜನಶೀಲತೆ, ಸಂವಹನ ಕೌಶಲ, ಮಾರ್ಕೆಟಿಂಗ್ ಕೌಶಲ, ನಾಯಕತ್ವ ಗುಣ ಹಾಗೂ ನಿರ್ವಹಣಾ ಕೌಶಲ್ಯದ ಆಸಕ್ತತೆಯನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳ ಬಗೆಗಿನ ಸಮಸ್ಯೆಗಳನ್ನು ತದೇಕಚಿತ್ತದಿಂದ ಆಲಿಸಿ, ಆದರೆ ಅವರನ್ನು ಬೆದರಿಸದೆ, ಗದರಿಸದೆ ಸಮಸ್ಯೆಯ ಮೂಲವನ್ನು ಕಂಡುಹುಡುಕಿ ಅದಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವುದೇ ಉತ್ತಮ ಲಕ್ಷಣವಾಗಿದೆ ಎಂದರು. ಮಕ್ಕಳನ್ನು ಜಾಸ್ತಿ ಪ್ರೀತಿಸಬೇಡಿ ಹಾಗೂ ಜಾಸ್ತಿಯಾಗಿ ಸ್ವಾತಂತ್ರ್ಯವನ್ನು ನೀಡಬೇಡಿ. ಯಾಕೆಂದರೆ ನಿಮ್ಮ ಮುದ್ದು ಪ್ರೀತಿಯೇ ಮಕ್ಕಳು ತಪ್ಪು ದಾರಿ ಹಿಡಿಯಲು ರಹದಾರಿಯಾಗಬಲ್ಲುದು ಎಂದು ರಾಜೇಂದ್ರ ಭಟ್‌ರವರು ಹೇಳಿದರು.

ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿ-ವಂ|ಆಲ್ಫ್ರೆಡ್:
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ತಾಲೂಕಿನ ಹಿರಿಯ ಶಿಕ್ಷಣ ಸಂಸ್ಥೆಯೆನಿಸಿದ ಈ ವಿದ್ಯಾಸಂಸ್ಥೆಯು ಪ್ರಸ್ತುತ ವರ್ಷ ವಜ್ರಮಹೋತ್ಸವವನ್ನು ಆಚರಿಸುತ್ತಿದೆ. ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರಿಂದ ಸ್ಥಾಪಿಸಲ್ಪಟ್ಟ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೆ ಸುಮಾರು ಏಳು ಸಾವಿರ ಮಕ್ಕಳು ಪ್ರತೀ ವರ್ಷ ಕಲಿಯುತ್ತಿದ್ದಾರೆ. ನಮ್ಮ ಮಕ್ಕಳು, ನಿಮ್ಮ ಮಕ್ಕಳು ಎಂಬ ಬೇಧಭಾವವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣವನ್ನು ನೀಡುತ್ತಾ ಬಂದಿದೆ ಈ ಸಂಸ್ಥೆ. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಅಧ್ಯಾತ್ಮಿಕ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಬೆಳವಣಿಗೆಯನ್ನು ಕಾಣಬೇಕಾಗಿದೆ ಎಂಬ ನಿಟ್ಟಿನಲ್ಲಿ ಸಂಸ್ಥೆಯು ಶ್ರಮಿಸುತ್ತಿದೆ ಎಂದ ಅವರು ವಿದ್ಯಾರ್ಥಿಗಳಲ್ಲಿ ಯಾವುದು ಒಳಿತು, ಯಾವುದು ಕೆಡುಕು ಎಂಬುದನ್ನು ತಿಳಿಯಬೇಕು ಮಾತ್ರವಲ್ಲ ಅದನ್ನು ಅನುಸರಿಸಿಕೊಂಡು ಹೋಗಬೇಕಾಗಿದೆ. ಪ್ರೀತಿ, ವಾತ್ಸಲ್ಯ ಹಾಗೂ ಹೊಂದಾಣಿಕೆ ನಮ್ಮ ಜೀವನದಲ್ಲಿ ಬೇರೂರಬೇಕು. ಸತ್ಯ, ನೀತಿ, ಶಾಂತಿ ಎಂಬ ಮೌಲ್ಯಗಳು ನಮ್ಮಲ್ಲಿದ್ದು ಭಾರತದ ಉತ್ತಮ ಪ್ರಜೆಗಳಾಗಿ ಮುಂದುವರೆಯಬೇಕಾಗಿದೆ ಎಂದು ಅವರು ಹೇಳಿದರು.

ಮಕ್ಕಳಲ್ಲಿ ಸಂವೇದನಾಶೀಲತೆಯನ್ನು ಬೆಳೆಸಿರಿ-ವಂ|ಆಂಟನಿ ಪ್ರಕಾಶ್:
ಗೌರವ ಅತಿಥಿಗಳಾಗಿ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಕಾಲೇಜು ಕ್ಯಾಂಪಸ್ ಹೇಗಿದೆ, ನಮ್ಮ ಮಕ್ಕಳ ಕಲಿಕೆಗೆ ಪೂರಕವಾಗಿದೆಯೇ ಎಂಬುದನ್ನು ಮನಗಾಣಲು ಹೆತ್ತವರು ಬಂದು ನೋಡುವುದು ಸರ್ವೇಸಾಮಾನ್ಯವಾಗಿದೆ. ಆದರೆ ಹೆತ್ತವರು ಅರಿಯಬೇಕಾದ ಸತ್ಯ ಬೇರೆಯೇ ಇದೆ. ಕ್ಯಾಂಪಸ್‌ನಲ್ಲಿನ ಸುಸಜ್ಜಿತ ಬಿಲ್ಡಿಂಗ್‌ಗಳು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂಬುದರ ಬದಲಾಗಿ ಆಯಾ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಕರಿದ್ದಾರೆಯೇ, ಅಲ್ಲಿ ತರಬೇತಿ ಹೇಗಿದೆ ಎಂಬುದನ್ನು ನಾವು ಮನಗಾಣಬೇಕಿದೆ ಎಂದ ಅವರು ಮಕ್ಕಳು ತಪ್ಪು ದಾರಿಗೆ ಹೋದಾಗ ಅಥವಾ ವಿವೇಚನೆಯನ್ನು ಕಳೆದುಕೊಂಡಾಗ, ಅವರಲ್ಲಿ ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ತಿಳಿಹೇಳುವುದು ಒರ್ವ ಪ್ರಜ್ಞಾವಂತ ನಾಗರಿಕನ ಜವಾಬ್ದಾರಿಯಾಗಿದೆ. ಅತಿಯಾದ ಪ್ರೀತಿಯಿಂದ ಮಕ್ಕಳನ್ನು ಬೆಳೆಸಿ ಹಾಳುಗೆಡಹದಿರಿ. ಮಕ್ಕಳಲ್ಲಿ ಸಂವೇದನಾಶೀಲತೆಯಿಂದ ಪೋಷಿಸಿದರೆ ಖಂಡಿತಾ ಪ್ರತಿಫಲ ಸಿಗುತ್ತದೆ ಮಾತ್ರವಲ್ಲದೆ ಸಮಾಜಕ್ಕೆ ಆರೋಗ್ಯಯುತ ನಾಗರಿಕನಾಗಿ ಬೆಳೆಸಿದರೆ ಅದುವೇ ನಾವು ಮಾಡಬೇಕಾದ ನಿಜವಾದ ಸೇವೆಯಾಗಿದೆ ಎಂದು ಅವರು ಹೇಳಿದರು.

ಮಕ್ಕಳಲ್ಲಿ ಜವಾಬ್ದಾರಿಯ ಅರಿವನ್ನು ಮೂಡಿಸಿ-ವಂ|ವಿಜಯ್ ಲೋಬೋ:
ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ದಿನನಿತ್ಯದ ಕರ್ತವ್ಯದ ಬಗ್ಗೆ ಹೆತ್ತವರ ಗಮನವಿರಬೇಕು. ಮಕ್ಕಳು ತಪ್ಪು ದಾರಿಗೆ ಎಳೆದುಕೊಂಡು ಹೋಗುವ ಸಾಕಷ್ಟು ಪಿಡುಗುಗಳು ಇಂದಿನ ಸಮಾಜದಲ್ಲಿ ಕಂಡುಬರುತ್ತಿರುವುದು ಹಾಗೂ ವಿದ್ಯಾರ್ಥಿಗಳು ಇದಕ್ಕೆ ದಾಸನಾಗುವುದು ಶೋಚನೀಯ ಸಂಗತಿಯಾಗಿದೆ. ಹೆತ್ತವರಾದ ತಾವು ನಮ್ಮ ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ಕಣ್ಣಿಡಬೇಕಾಗುತ್ತದೆ. ಮಕ್ಕಳ ಆಗು-ಹೋಗುಗಳ ಬಗ್ಗೆ ಚರ್ಚಿಸಬೇಕಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ತಮ್ಮ ಮಕ್ಕಳಲ್ಲಿ ಜವಾಬ್ದಾರಿಯ ಬಗ್ಗೆ ಅರಿವನ್ನು ಮೂಡಿಸಬೇಕಾಗುತ್ತದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಹೆತ್ತವರು ಕೈಜೋಡಿಸಬೇಕು ಎಂದರು.

ಜೀವನಮೌಲ್ಯಗಳನ್ನು ಹೆಚ್ಚಿಸಿಕೊಳ್ಳಿ-ದುರ್ಗಾಪ್ರಸಾದ್ ರೈ:
ರಕ್ಷಕ-ಶಿಕ್ಷಕ ಸಂಘದ ಹಾಲಿ ಅಧ್ಯಕ್ಷ ನ್ಯಾಯವಾದಿ ದುರ್ಗಾಪ್ರಸಾದ್ ರೈರವರು ಮಾತನಾಡಿ, ರಕ್ಷಕ-ಶಿಕ್ಷಕ ಸಂಘದ ಓರ್ವ ಅಧ್ಯಕ್ಷನಾಗಿ ತನ್ನ ಜೀವನದಲ್ಲಿ ಜೀವನಮೌಲ್ಯವನ್ನು ಹೆಚ್ಚಿಸಿಕೊಂಡಿದ್ದೇನೆ. ಹೆತ್ತವರು ಸಮಾರಂಭದಲ್ಲಿ ಭಾಗವಹಿಸಿ, ಅತಿಥಿಗಳು ಬೋಧಿಸಿದ ಪ್ರತಿಯೊಂದು ಹಿತನುಡಿಗಳನ್ನು ನಿರ್ಲಕ್ಷಿಸದೆ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಾತ್ರವಲ್ಲದೆ ಅದರಂತೆ ಅನುಸರಿಸಿದಾಗ, ನಮ್ಮ ಮಕ್ಕಳು ಕೂಡ ಅದನ್ನು ಅನುಸರಿಸುತ್ತಾರೆ ಎಂಬುದು ಅಕ್ಷರಸಃ ಸತ್ಯವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಭಟ್‌ರವರ ಪರಿಚಯವನ್ನು ರಸಾಯನಶಾಸ್ತ್ರ ಉಪನ್ಯಾಸಕಿ ದಿವ್ಯಾ ಕೆ.ರವರು ಮಾಡಿದರು. 2018ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.೯೫ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಪ್ರತಿಭಾನ್ವಿತ ಕ್ರೀಡಾಪಟುಗಳ ಹೆಸರನ್ನು ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಅಶ್ವಿನಿ ಕೆ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಸಂಜಯ್ ಎಸ್‌ರವರು ಓದಿದರು. ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ಭಟ್ ಸ್ವಾಗತಿಸಿ, ಕೋಶಾಧಿಕಾರಿ ಅನಿಲ್ ಕುಮಾರ್‌ರವರು 2018-19ನೇ ಸಾಲಿನ ಲೆಕ್ಕಪತ್ರ ಮಂಡಿಸಿ, ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಉಷಾ ಯಶ್ವಂತ್ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಮಾರ್ಕ್ಸ್‌ಗಿಂತ ರಿಮಾರ್ಕ್ಸ್ ಮುಖ್ಯ…
ಕೆಲವೇ ವರ್ಷಗಳ ಪ್ರೀತಿ-ಪ್ರೇಮದಿಂದ ತನ್ನ ಪ್ರಿಯಕರನನ್ನು ಒಂದು ಕ್ಷಣ ಬಿಟ್ಟಿರಲು ತನ್ನಲ್ಲಿ ಶಕ್ತಿಯಿಲ್ಲವೆನ್ನುವ ಕುಟುಂಬದ ಮನೆಮಗಳು, ಜೀವನದುದ್ದಕ್ಕೂ ಪ್ರೀತಿಯಿಂದ ಸಾಕಿ ಸಲಹಿದ ಹೆತ್ತವರನ್ನು ಒಂದು ದಿನವಾದರೂ ಈ ರೀತಿ ಹೇಳಿದ್ದಿದೆಯಾ. ಮನೆಯಲ್ಲಿ ಹೆಣ್ಣುಮಗಳಿಗೆ ಹೆತ್ತವರಿಂದ ಪ್ರೀತಿ ಸಿಕ್ಕರೆ ಆ ಹೆಣ್ಣುಮಗಳು ಹೊರಗಡೆ ಪ್ರೀತಿಯನ್ನು ಅರಸಿ ಹೋಗಲು ಸಾಧ್ಯವೇ ಎಂಬುದನ್ನು ಹೆತ್ತವರು ಆಲೋಚನೆ ಮಾಡಬೇಕಾಗಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಪ್ರಶ್ನೆ ಮಾಡುವ ಬದಲು ಗಂಡು ಮಕ್ಕಳಿಗೂ ಹೆತ್ತವರು ಪ್ರಶ್ನೆ ಮಾಡುವಂತಾಗಬೇಕು. ಮಕ್ಕಳು ಭವಿಷ್ಯದಲ್ಲಿ ಏನಾಗಬೇಕು ಎಂಬುದಾಗಿ ಹೆತ್ತವರು ನಿರ್ಧಾರ ತೆಗೆದುಕೊಳ್ಳುವುದು ಮೂರ್ಖತನ. ಭವಿಷ್ಯದಲ್ಲಿ ಏನಾಗಬೇಕು ಎಂದು ಮಕ್ಕಳೇ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ನಿರ್ಧಾರವಾಗಿದೆ. ಮಾರ್ಕ್ಸ್‌ಗಳು ಜೀವನಕ್ಕೆ ಆಧಾರವಾಗಿ ಬೇಕು, ಆದರೆ ಮಾರ್ಕ್ಸ್‌ಗಿಂತ ಜೀವನದಲ್ಲಿ ರಿಮಾರ್ಕ್ಸ್ ಬರದಂತೆ ನೋಡಿಕೊಳ್ಳುವುದು ಅತೀ ಸೂಕ್ತವಾಗಿದೆ.
-ರಾಜೇಂದ್ರ ಭಟ್, ಜೇಸಿಐ ರಾಷ್ಟ್ರೀಯ ತರಬೇತುದಾರರು