ಮೈಸೂರು ವಿಭಾಗೀಯ ಮಟ್ಟದ ದಸರಾ ಈಜು ಸ್ಪರ್ಧೆ

ಉಡುಪಿ ಅಜ್ಜರಕಾಡು ಈಜುಕೊಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ನೀಲ್ ಮಸ್ಕರೇನ್ಹಸ್‍ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

50ಮೀ, 100ಮೀ ಹಾಗೂ 200ಮೀ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಹಾಗೂ 4*100ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ನೀಲ್ ಮಸ್ಕರೇನ್ಹಸ್‍ರವರು ಚಿನ್ನದ ಪದಕ ಪಡೆದಿದ್ದು, 200ಮೀ ವೈಯಕ್ತಿಕ ಮೆಡ್ಲೆಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ. ಆಕ್ಟೋಬರ್ 2ರಿಂದ 6ರ ವರೆಗೆ ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂನ ಈಜುಕೊಳದಲ್ಲಿ ಜರಗುವ ರಾಜ್ಯ ಮಟ್ಟದ ದಸರಾ ಈಜು ಸ್ಪರ್ಧೆಗೆ ನೀಲ್‍ರವರು ಭಾಗವಹಿಸಲಿದ್ದಾರೆ. ಏತನ್ಮಧ್ಯೆ ಮಂಗಳೂರಿನ ಮಂಗಳಾ ಈಜುಕೊಳದಲ್ಲಿ ಜರಗಿದ ದಸರಾ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ನೀಲ್‍ರವರು 100ಮೀ, 200ಮೀ ಬ್ರೆಸ್ಟ್ ಸ್ಟ್ರೋಕ್, 200ಮೀ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 100ಮೀ ಫ್ರೀ ಸ್ಟೈಲ್‍ನಲ್ಲಿ ಬೆಳ್ಳಿ ಪದಕ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಇವರಿಗೆ ಬೆಂಗಳೂರಿನ ಗ್ಲೆನ್‍ಮಾರ್ಕ್ ರೇ ಸೆಂಟರ್ ಈಜುಕೊಳದ ನಾಗಭೂಷಣ್, ಗುರುಪ್ರಸಾದ್‍ರವರು ನೀಲ್‍ರವರಿಗೆ ತರಬೇತಿ ನೀಡಿರುತ್ತರೆ. ನೀಲ್‍ರವರು ಸಾಮೆತ್ತಡ್ಕ ನಿವಾಸಿ ಹಾಗೂ ಸಂತ ಫಿಲೋಮಿನಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಡಾ|ನೋರ್ಬರ್ಟ್ ಮಸ್ಕರೇನ್ಹಸ್ ಹಾಗೂ ಮುಕ್ರಂಪಾಡಿ ಮಹಿಳಾ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಕ್ರಾಸ್ತಾರವರ ಪುತ್ರ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.