ಮಲ್ಟಿ ಮೀಡಿಯಾ ಮಾಹಿತಿ ಕಾರ್ಯಕ್ರಮ

ವ್ಯಕ್ತಿ ತನ್ನ ಮನಸ್ಸಿನಲ್ಲಿರುವ ಆಲೋಚನೆಗಳನ್ನು, ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಮೀಡಿಯಗಳು ಬೆಂಬಲವಾಗಿ ನಿಲ್ಲಬಲ್ಲುದು. ಪ್ರಿಂಟ್ ಮಾಧ್ಯಮ, ದೃಶ್ಯ ಮಾಧ್ಯಮಗಳ ಪೈಕಿ ಮಲ್ಟಿ ಮೀಡಿಯಾಗಳಲ್ಲಿ ಕಲಾತ್ಮಕ ಕೌಶಲ್ಯವನ್ನು ಜಾಸ್ತಿ ಉಪಯೋಗಿಸಬೇಕಾಗುತ್ತದೆ ಎಂದು ಅನಿಕೇತನ ಎಜ್ಯುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣಪ್ರಸಾದ್ ನಡ್ಸಾರ್‌ರವರು ಹೇಳಿದರು.

ಅವರು ನ.20 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕಾಲೇಜ್‌ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ ಆನಿಮೇಶನ್-ಮಲ್ಟಿ ಮೀಡಿಯದಿಂದ ಆಗುವ ಪ್ರಯೋಜನಗಳೇನು? ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ಮಲಗುವವರೆಗೆ ಪ್ರತಿಯೊಬ್ಬ ವ್ಯಕ್ತಿಯು ಮಲ್ಟಿ ಮೀಡಿಯದಲ್ಲಿನ ಅನುಭವವನ್ನು ಅರಿವಿಲ್ಲದೆ ಅನುಭವಿಸಬಲ್ಲನು. ಆಧುನಿಕ ವೈಜ್ಞಾನಿಕ ಕಾಲದಲ್ಲಿ ಮಲ್ಟಿ ಮೀಡಿಯಾಗಳು ವಿವಿಧ ಪ್ರಕಾರಗಳಲ್ಲಿ ಲಭ್ಯವಿದ್ದು ಇವುಗಳು ಸುದ್ದಿಯನ್ನು ವಿವಿಧ ಆಯಾಮಗಳಲ್ಲಿ ಪ್ರಪಂಚದ ಮೂಲೆ ಮೂಲೆಗಳಿಗೆ ಶೀಘ್ರದಲ್ಲಿ ಭಿತ್ತರಿಸಲು ಕಾರಣವಾಗುವ ಸಾಧನವಾಗಿದೆ ಎಂದು ಹೇಳಿ ಮಲ್ಟಿ ಮೀಡಿಯಾದಲ್ಲಿರುವ ವಿವಿಧ ಆಯಾಮಗಳನ್ನು ಪವರ್ ಪಾಂಟ್ ಮೂಲಕ ತೋರಿಸಿ ವಿಶ್ಲೇಷಣೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜ್ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ವಿವಿಧ ಅಂಶಗಳನ್ನು ಒಳಗೊಂಡಿರುವ ಮಲ್ಟಿ ಮೀಡಿಯಾದಲ್ಲಿ ಸಾಕಷ್ಟು ಅವಕಾಶಗಳಿವೆ. ಶೈಕ್ಷಣಿಕ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾವು ಆರಿಸಿದ ವಿಷಯದಲ್ಲಿ ತಲ್ಲೀನರಾಗುವುದರ ಜೊತೆಗೆ ಭವಿಷ್ಯದ ಬದುಕಿಗೆ ಪೂರಕವಾಗಿರುವ ಧನಾತ್ಮಕ ಅಂಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಗಣಕ ವಿಜ್ಞಾನ ವಿಭಾಗದಿಂದ ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಅನಿಕೇತನ ಎಜ್ಯುಕೇಶನಲ್ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಟೆಕ್ನೋಲಜಿ ಇದರ ಕೋರ್ಡಿನೇಟರ್ ಶ್ಯಾಮ್, ಐಟಿ ಸಿಬ್ಬಂದಿ ಗುರುಪ್ರಸಾದ್, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅನಿಲ್ ಕುಮಾರ್ ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು. ವಿದ್ಯಾರ್ಥಿನಿ ಪ್ರಥಮ ಎಸ್‌ಸಿಬಿಎಯ ಶರಲ್ ಮತ್ತು ಬಳಗ ಪ್ರಾರ್ಥಿಸಿದರು. ದ್ವಿತೀಯ ಪಿಸಿಎಂಸಿಯ ಸುವಿರಾ ಸ್ವಾಗತಿಸಿ, ದ್ವಿತೀಯ ಪಿಸಿಎಂಸಿಯ ಕಾಂಚನ ಕಾವೇರಿ ವಂದಿಸಿದರು. ದ್ವಿತೀಯ ಪಿಸಿಎಂಸಿಯ ಅಮನ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.