‘ವಚನ ಸಾಹಿತ್ಯದ ಪ್ರಸ್ತುತೆ’ ಕಾರ್ಯಕ್ರಮ

ವಚನ ಸಾಹಿತ್ಯವು ಸಾಮಾಜಿಕ ಚಳುವಳಿಯಾಗಿದ್ದು ಪ್ರಸ್ತುತ ಸಮಾಜದ ಅಮಾನವೀಯ ಗುಣಗಳನ್ನು ಬದಲಾಯಿಸುವ ಪ್ರಯತ್ನವನ್ನು ಮಾಡಿಕೊಂಡು ಬಂದಿದೆ. ನಮ್ಮ ಮುಂದೆ ಇರುವ ಅನೇಕ ಸವಾಲುಗಳಿಗೆ ಉತ್ತರವನ್ನು ಕೊಡುವ ಪ್ರಯತ್ನವನ್ನು ವಚನ ಸಾಹಿತ್ಯ ಮಾಡಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆ ಇಲ್ಲಿನ ಕನ್ನಡ ಉಪನ್ಯಾಸಕರಾದ ಶ್ರೀ ಸಂಜಯ್ ಬಿ.ಎಸ್.ರವರು ಹೇಳಿದರು.

ಇವರು ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ವಚನ ಸಾಹಿತ್ಯದ ಪ್ರಸ್ತುತತೆ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಾ ವಚನ ಸಾಹಿತ್ಯವು ಸಮಾನತೆಯನ್ನು ಪ್ರತಿಪಾದಿಸುತ್ತದೆ. ನಮ್ಮ ಬದುಕಿನ ಹಲವು ತಲ್ಲಣಗಳಿಗೆ ವಚನ ಸಾಹಿತ್ಯವು ಅತ್ಯಗತ್ಯ.

ವಚನಕಾರರು ತನ್ನನ್ನು ಸ್ವವಿಮರ್ಶೆ ಮಾಡಿಕೊಂಡು ಸಮಾಜದ ವಿಮರ್ಶೆಯನ್ನು ಮಾಡಲು ಹೊರಟರು. ಪ್ರಸ್ತುತ ಸಮಾಜದಲ್ಲಿ ವಚನಗಳು ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯಂತ ಪೂರಕವಾಗಿದ್ದು, ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಫಾ| ವಿಜಯ್ ಲೋಬೊರವರು ಮಾತನಾಡುತ್ತಾ ವಚನ ಸಾಹಿತ್ಯವು ನಮ್ಮ ನಿತ್ಯ ಜೀವನಕ್ಕೆ ತುಂಬಾ ಸಹಕಾರಿಯಾಗಿದೆ. ವಚನ ಸಾಹಿತ್ಯದ ಮಾತುಗಳನ್ನು ಅಳವಡಿಸಿಕೊಂಡು ಒಂದು ಒಳ್ಳೆಯ ಜೀವನವನ್ನು ಹೇಗೆ ನಡೆಸಬೇಕೆಂಬುದನ್ನು ವಚನಕಾರರು ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಸಾಮಾಜಿಕ ಸಂದರ್ಭದ ಅನೆಕ ಜ್ವಲಂತ ಸಮಸ್ಯೆಗಳಿಗೆ ವಚನ ಸಾಹಿತ್ಯವು ಉತ್ತರವನ್ನು ನೀಡಿದೆ. ಮಾನವೀಯತೆಯನ್ನು ಬೆಳೆಸುವುದೇ ನಿಜವಾದ ಹೋರಾಟವೆಂದು ತಿಳಿದುಕೊಂಡ ವಚನಕಾರರು ಮನಸ್ಸನ್ನು ಕಟ್ಟುವ ಕೆಲಸವನ್ನು ಮಾಡಲು ಪ್ರಯತ್ನಿಸಿದ್ದಾರೆ ಎಂದರು. 

ಇದೇ ಸಂದರ್ಭದಲ್ಲಿ 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತ್ಯುನ್ನತ ಅಂಕ ಗಳಿಸಿದ ಆಯಿಷತುಲ್ ಶಮೀಮರನ್ನು ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಕು| ಜೋತ್ಸ್ನಾ ಪ್ರಿಯಾ ಲುವಿಸ್ ಅತಿಥಿಗಳನ್ನು ಸ್ವಾಗತಿಸಿದರು. ಕು| ಕ್ಲಿಯೋನಾ ಕಾರ್ಯಕ್ರಮವನ್ನು ನಿರೂಪಿಸಿದರು. ಜಯಪ್ರಕಾಶ್ ಬಸವಣ್ಣನ ವಚನಗಳನ್ನು ಹಾಡಿದರೆ, ಜಯೇಶ್ ವಂದಿಸಿದರು.