ವಿದ್ಯಾರ್ಥಿಗಳಲ್ಲಿ ನಾಯಕತ್ವ ಎಂಬುದರ ಬಗ್ಗೆ ತರಬೇತಿ ಶಿಬಿರ

ಪ್ರತಿಯೋರ್ವರಲ್ಲೂ ನಾಯಕತ್ವ ಗುಣವನ್ನು ರೂಢಿಸಿಕೊಳ್ಳುವ ಗುಣವಿದೆ. ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ. ತಂಡದ ಮುಂದಾಳತ್ವವನ್ನು ವಹಿಸಿಕೊಂಡು, ಜವಾಬ್ದಾರಿಗಳನ್ನು ಅರಿತುಕೊಂಡು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವವನೇ ನಿಜವಾದ ನಾಯಕ ಎಂದು ಜೇಸಿಐ ವಲಯ 15ರ ಉಪಾಧ್ಯಕ್ಷರಾದ ಮನಮೋಹನ ಬಲ್ಲಡ್ಕರವರು ಹೇಳಿದರು.

ಅವರು ಜು.31ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಎಂಬುದರ ಬಗ್ಗೆ ನಡೆದ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಾಯಕನಾಗುವವನಿಗೆ ಮುಂಗೋಪ ಇರಕೂಡದು. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹೋಗಬೇಕಾಗುತ್ತದೆ ಎಂದ ಅವರು ಅವಕಾಶಗಳು ಹುಡುಕಿಕೊಂಡು ಬಂದಾಗ ಆವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಇರಾದೆ ಹೊಂದಿರಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜ್‌ನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಯಶ್ವಂತ್ ಎಂ.ಡಿರವರು ಮಾತನಾಡಿ, ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಕಾಲೇಜ್‌ನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕ್ರಿಯಾಶೀಲರಾಗಿ. ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸಿ, ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಸುಂದರವಾದ ರಾಷ್ಟ್ರ ಕಟ್ಟುವ ನಾಯಕರಾಗಿ ಎಂದು ಹೇಳಿದರು.

ಉಪನ್ಯಾಸಕರಾದ ಲವೀನಾ ಎಲ್.ಸಾಂತ್‌ಮಯೋರ್, ಉಷಾ ಯಶ್ವಂತ್‌ರವರು ಉಪಸ್ಥಿತರಿದ್ದರು. ಲಹರಿ ಮತ್ತು ಬಳಗ ಪ್ರಾರ್ಥಿಸಿದರು. ಖುಷಿ ಸ್ವಾಗತಿಸಿ, ಸೃಜನ್ ಕಶ್ಯಪ್ ವಂದಿಸಿದರು. ಸಾತ್ವಿಕ್ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಸೃಜನಶೀಲತೆ, ಹೊಂದಾಣಿಕೆ, ಪ್ರಾಮಾಣಿಕತೆ, ಏಕತೆ, ಸಂಘಟನಾ ಚತುರತೆಯ ಜೊತೆಗೆ ಸಾಧಿಸಬಲ್ಲೆನೆಂಬ ಆತ್ಮವಿಶ್ವಾಸ, ಗುಣನಡತೆ ಇತ್ಯಾದಿ ಗುಣಗಳನ್ನು ಬೆಳೆಸಿಕೊಂಡಾಗ ವ್ಯಕ್ತಿಯು ನಾಯಕನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಏಕಾಗ್ರತೆಯ ಮನಸ್ಸಿನೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂಡವನ್ನು ಮುನ್ನೆಡೆಸುವವನಾಗಬೇಕು
-ಮನಮೋಹನ ಬಲ್ಲಡ್ಕ, ಉಪಾಧ್ಯಕ್ಷರು, ಜೇಸಿಐ ವಲಯ 15