ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಕೊಂಕಣಿ ಭಾಷೆಯ ಜಾಗೃತಿಗೋಸ್ಕರ ಮತ್ತು ಉಳಿವಿಗೋಸ್ಕರ ಬಹಳಷ್ಟು ನಿರ್ಣಯ ತೆಗೆದುಕೊಳ್ಳುತ್ತೇವೆ, ಜ್ಯಾರಿನೂ ಮಾಡುತ್ತೇವೆ ಆದರೆ ಅದನ್ನು ಪರಾಂಪರಾಗತವಾಗಿ ಉಳಿಸಿಕೊಳ್ಳುವಲ್ಲಿ ಮಾತ್ರ ನಾವು ಎಡವುತ್ತಿದ್ದೇವೆ. ಆದ್ದರಿಂದ ಕೊಂಕಣಿ ಭಾಷಾ ಹಿನ್ನೆಲೆಯುಳ್ಳವರು ಇತರರನ್ನು ದೂಷಿಸದೆ ಕೊಂಕಣಿ ಭಾಷೆಯನ್ನು ಉಳಿಸುವಲ್ಲಿ ಮತ್ತು ನವೀನತೆ ತರುವಲ್ಲಿ ಶ್ರಮಿಸೋಣ ಎಂದು ಸಂತ ಫಿಲೋಮಿನಾ ಕಾಲೇಜ್‍ನ ಹಿಂದಿ ವಿಭಾಗದ ಮುಖ್ಯಸ್ಥೆ, ಡಾ|ಡಿಂಪಲ್ ಫೆರ್ನಾಂಡೀಸ್‍ರವರು ಹೇಳಿದರು.

ಅವರು ಆ.20 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ದಿವ್ಯ ಚೇತನ ಸಂಘದ ಆಶ್ರಯದಲ್ಲಿ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜರಗಿದ `ಕೊಂಕಣಿ ಮಾನ್ಯತಾ ದಿವಸ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪ್ರತಿಯೋರ್ವರು ಅವರವರ ಮಾತೃಭಾಷೆಯನ್ನು ಖಂಡಿತಾ ಮರೆಯಬಾರದು. ಅವರವರ ಮಾತೃಭಾಷೆಯು ಅವರವರ ಕುಟುಂಬದ ಹಿನ್ನೆಲೆಯಿಂದ ಬಂದಿರುವಂತಹುದು. ಕೊಂಕಣಿ ಭಾಷೆಯಲ್ಲಿ ಇಂದು ಸಾಕಷ್ಟು ಮಂದಿ ಪುಸ್ತಕ ಬರೆಯುವ ಮೂಲಕ ಲೇಖಕರಾಗಿ, ಕೊಂಕಣಿ ಭಾಷೆಯ ಪಾಂಡಿತ್ಯವನ್ನು ಪಡೆಯುವ ವಿದ್ವಾಂಸಕರಾಗಿಯೂ ಹುಟ್ಟಿಕೊಂಡಿದ್ದಾರೆ. ಕೊಂಕಣಿ ಭಾಷೆಯು ಆಯಾ ಕಾಲಕ್ಕನುಗುಣವಾಗಿ ಮುಳುಗುವುದು, ಬಾಳುವುದು, ಅರಳುವುದು ಸರ್ವೇಸಾಮಾನ್ಯವಾಗಿದೆ ಎಂದ ಅವರು ಕೊಂಕಣಿ ಭಾಷೆಯ ಕುರಿತು ಜಾಗೃತಿ ತರುವಲ್ಲಿ, ಉತ್ತಮ ರೀತಿಯಲ್ಲಿ ಸಂವಹನ ಮಾಡುವಲ್ಲಿ ಮತ್ತು ಕೊಂಕಣಿ ಭವಿಷ್ಯದ ಕುರಿತು ದೂರದೃಷ್ಟಿಯನ್ನಿಟ್ಟು ಸಾಗುವುದು ಬಹಳ ಅತ್ಯವಶ್ಯಕವಾಗಿದೆ. ಕೊಂಕಣಿ ಭಾಷೆ ಕುರಿತು ಅಸಡ್ಡೆ ತೋರಿಸುವ ಬದಲು ಭಾಷೆಯನ್ನು ಖುಶಿಯಿಂದ, ಪ್ರೀತಿಯಿಂದ ಬೆಳೆಸುವಲ್ಲಿ ನಮ್ಮ ಪ್ರಯತ್ನವಿರಲಿ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಕೊಂಕಣಿ ಭಾಷಿಗರು ಎಲ್ಲರೂ ಒಗ್ಗಟ್ಟಾಗಿ ತಮ್ಮ ಮಾತೃಭಾಷೆಯನ್ನು ಮಾತನಾಡುವ ಮೂಲಕ ಇತರರಿಗೆ ಪ್ರೇರೇಪಣೆ ಮಾಡುವುದು ಉತ್ತಮ ವಿಚಾರವಾಗಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಕೊಂಕಣಿ ಭಾಷಾ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕೊಂಕಣಿ ಭಾಷೆ ಮಾತನಾಡುವವರಾಗಲಿ ಅಥವಾ ಆಯಾ ಧರ್ಮದ ಮಾತೃಭಾಷೆಯಾಗಲಿ, ನಾವು ಮಾತನಾಡುವ ಮಾತೃಭಾಷೆಯನ್ನು ಪ್ರೀತಿಯಿಂದ ಸ್ವೀಕರಿಸಿದಾಗ ಮಾತ್ರ ನಮ್ಮ ಮಾತೃಭಾಷೆಯನ್ನು ಜೀವಾಳವಾಗಿಸಲು ಸಾಧ್ಯವಿದೆ. ಕೊಂಕಣಿ ಭಾಷಿಗರು ತಮ್ಮ ಕೊಂಕಣಿ ಮಾತೃಭಾಷೆಯನ್ನು ಬಲಿಷ್ಟಗೊಳಿಸುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡಬೇಕಾಗಿದೆ ಎಂದರು.

ದಿವ್ಯ ಚೇತನ ಸಂಘಟನೆಯ ಸಚೇತಕಿ, ಉಪನ್ಯಾಸಕಿ ಫಿಲೋಮಿನಾ ಮೊಂತೇರೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘವು ಏರ್ಪಡಿಸಿದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಉಪನ್ಯಾಸಕ ಭರತ್ ಜಿ.ಪೈ ವಿಜೇತರ ಹೆಸರನ್ನು ಓದಿದರು. ವಿದ್ಯಾರ್ಥಿ ಪ್ರೀತಂ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಸಮೃದ್ಧಿ ಶೆಣೈ ಸ್ವಾಗತಿಸಿ, ಮನೀಷ ಮಿನೇಜಸ್ ವಂದಿಸಿದರು. ಉಪನ್ಯಾಸಕಿಯರಾದ ಲವೀನಾ ಸಾಂತ್‍ಮಾಯೆರ್, ಶಿಲ್ಪಾ ರೊಡ್ರಿಗಸ್, ದಿವ್ಯ ಚೇತನಾ ಸಂಘದ ಅಧ್ಯಕ್ಷ ರಿಸ್ಟನ್ ಸೋಹನ್, ಕಾರ್ಯದರ್ಶಿ ರೇಚಲ್ ಡಿ’ಸೋಜರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಪ್ರಿನ್ಸಿಟಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.


ಹೊಸತನ ರಚಿಸುವ ಪ್ರವೃತ್ತಿಯೂ ಬೆಳೆಯಲಿ…
ಕೊಂಕಣಿ ಭಾಷೆಗೆ ಸಂವಿಧಾನದಲ್ಲಿ ಮಾನ್ಯತೆ ದೊರಕಿದ ದಿನವನ್ನು ಕೊಂಕಣಿ ಮಾನ್ಯತಾ ದಿವಸ್ ಆಗಿ ಆಚರಣೆ ಮಾಡುವುದಾಗಿದೆ. ಯಾವ ಭಾಷೆಯಡಿಯಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ಅಭಿಮಾನವಿರಬೇಕು. ಯಾವುದೇ ಭಾಷೆಯಾಗಲಿ, ಭಾಷೆಯನ್ನು ನಿರರ್ಗಳವಾಗಿ, ಸ್ಪಷ್ಟವಾಗಿ ಮಾತನಾಡುವುದು, ಉತ್ತಮವಾಗಿ ಬರೆಯುವ ಮತ್ತು ಓದುವುದನ್ನು ಕರಗತ ಮಾಡುವುದು ಜೊತೆಗೆ ಭಾಷೆಯ ಮುಖಾಂತರ ಹೊಸತನವನ್ನು ರಚಿಸುವ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವುದರೊಂದಿಗೆ ಭಾಷೆಯಲ್ಲಿನ ಪ್ರಾಮುಖ್ಯತೆ ಮತ್ತು ಅಸ್ಮಿತತೆಯನ್ನು ಅರಿಯಬೇಕಾಗಿದೆ. ಮಲಯಾಳಿಗರೀರ್ವರು ಒಂದೆಡೆ ಸೇರಿದಾಗ ಹೇಗೆ ಅವರು ಮಲಯಾಳಿ ಭಾಷೆಯಲ್ಲಿಯೇ ಸಂವಹನ ಮಾಡುತ್ತಾ ಭಾಷೆಯನ್ನು ಉಳಿಸುವಲ್ಲಿ ಅಭಿಮಾನ ತೋರಿಸುತ್ತಾರೋ, ಹಾಗೆಯೇ ಇತರ ಧರ್ಮದ ಬಾಂಧವರು ಒಟ್ಟಿಗೆ ಸೇರಿದಾಗ ತಮ್ಮ ಮಾತೃಭಾಷೆಯೊಂದಿಗೆ ಸಂವಹನ ಮಾಡಿದಾಗ ಮಾತೃಭಾಷೆಗೆ ಮನ್ನಣೆ ದೊರಕುತ್ತದೆ.

-ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋ, ಕ್ಯಾಂಪಸ್ ಇನ್-ಚಾರ್ಜ್, ಫಿಲೋಮಿನಾ ಕಾಲೇಜು