ಅಂತರ್ಜಾಲ ಬಳಕೆ ಉಪನ್ಯಾಸ

ಅಂತರ್ಜಾಲವು ಮನುಷ್ಯನ ಜೀವನದ ಒಂದು ಭಾಗವಾಗಿದ್ದು, ಜನರಿಗೆ ಬೇಕಾಗುವ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುತ್ತದೆ. ಮಾನವನ ಬುದ್ಧಿವರ್ಧನೆಗೆ ಅಂತರ್ಜಾಲವು ಬಹಳ ಸಹಕಾರಿಯಾಗಿದ್ದು, ಅಂತರ್ಜಾಲವು ಆಕರ್ಷಣೆಯ ಸಾಧನವಾಗಿದೆ ಮಾತ್ರವಲ್ಲದೆ ಪ್ರಸ್ತುತ ಜನಾಂಗಕ್ಕೆ ಅಂತರ್ಜಾಲವು ಅಧೀನವಾಗಿಬಿಟ್ಟಿದೆ ಎಂದು ಮೂಡಬಿದ್ರೆ ಅಳ್ವಾಸ್ ಪದವಿ ಪೂರ್ವ ಕಲೇಜ್‌ನ ಗಣಕಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರಭಾಕರ್ ಎನ್.ಕೆರವರು ಹೇಳಿದರು.

ಅವರು ಆ.3 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಕಂಪ್ಯೂಟರ್ ಕ್ಲಬ್‌ನ ಆಶ್ರಯದಲ್ಲಿ ನಡೆದ ಅಂತರ್ಜಾಲ ಬಳಕೆ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು. ಇ-ಮೇಲ್, ವೀಡಿಯೋ ಚಾಟಿಂಗ್, ಗೇಮ್ಸ್, ಸಾಮಾಜಿಕ ಚಟುವಟಿಕೆಗಳು ಹೀಗೆ ವಿವಿಧ ಸೇವೆಗಳಿಗಾಗಿ ಅಂತರ್ಜಾಲವನ್ನು ಬಳಸಿಕೊಳ್ಳುತ್ತಿದ್ದೇವೆ. ಅಂತರ್ಜಾಲವು ದಿನದಿಂದ ದಿನಕ್ಕೆ ಕ್ಷೀಪ್ರವಾಗಿ ಬೆಳೆಯುತ್ತಿದ್ದು ಮನುಷ್ಯನ ಆಗು-ಹೋಗುಗಳಿಗೆ ಅಂತರ್ಜಾಲವು ಬಹಳ ಸರಳವಾಗುತ್ತಿದೆ. ತಂತ್ರಜ್ಞಾನವನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೇ ಹೊರತು ಅದರ ದಾಸರಾಗಬಾರದು. ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ಧನಾತ್ಮಕ ಅಂಶಗಳನ್ನು ಮಾತ್ರ ತೆಗೆದುಕೊಂಡು ಅವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಅಂತರ್ಜಾಲದಿಂದಾಗಿ ನಮ್ಮ ಜೀವನಶೈಲಿಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅಂತರ್ಜಾಲದಿಂದ ಒಳಿತು ಮತ್ತು ಕೆಡುಕು ಇವೆರಡೂ ಇದ್ದು, ವಿದ್ಯಾರ್ಥಿಗಳು ಒಳಿತ್ತನ್ನು ಮಾತ್ರ ಸ್ವೀಕರಿಸುವವರಾಗಬೇಕು. ಅಂತರ್ಜಾಲದ ಬಳಕೆಯನ್ನು ಮಾಡುತ್ತಾ ನಮ್ಮಲ್ಲಿರುವ ಜ್ಞಾನ ಕೌಶಲವನ್ನು ವೃದ್ಧಿಗೊಳಿಸಬೇಕು ಎಂದರು.

ಕಂಪ್ಯೂಟರ್ ಕ್ಲಬ್‌ನ ಸಂಯೋಜಕರಾದ ಅನಿಲ್ ಕುಮಾರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಇಸ್ಮತ್ ಸ್ವಾಗತಿಸಿ, ವೇಣುಗೋಪಾಲ್ ವಂದಿಸಿದರು. ಫಾತಿಮತ್ ಸಾನಿದಾ ಕಾರ್ಯಕ್ರಮ ನಿರೂಪಿಸಿದರು.