`ಬಾಹ್ಯಾಕಾಶ ವಿಜ್ಞಾನದ ಕುರಿತು ಸಂವಾದ’ ಕಾರ್ಯಕ್ರಮ

ವಿಜ್ಞಾನವೇ ನಮ್ಮ ಜೀವನ. ಜಗತ್ತಿನ ಪ್ರತಿಯೊಂದು ಅಂಶದಲ್ಲೂ ವಿಜ್ಞಾನವು ತುಂಬಿಕೊಂಡಿದೆ. ನಮ್ಮ ದೇಶ ಬಾಹ್ಯಾಕಾಶ ವಿಜ್ಞಾನದಲ್ಲಿ ಸಾಧನೆಯ ಶಿಖರವನ್ನೇರಿದೆ. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೇ ವಿಜ್ಞಾನವಾಗಿದೆ ಎಂದು ಇಸ್ರೋ ಎಂ.ಸಿ.ಎಫ್ ಹಾಸನ ಇಲ್ಲಿನ ಉಪ ವ್ಯವಸ್ಥಾಪಕರಾದ ಬಿ.ಯಸೊಬ್‍ರವರು ಹೇಳಿದರು.

ಅವರು ಆ.8 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಿಜ್ಞಾನ ವೇದಿಕೆಯ ಆಶ್ರಯದಲ್ಲಿ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ `ಬಾಹ್ಯಾಕಾಶ ವಿಜ್ಞಾನದ ಕುರಿತು ಸಂವಾದ’ ಕಾರ್ಯಕ್ರಮದಲ್ಲಿ ಸಂಪನ್ಮೂ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆ ಸಣ್ಣದೇನಲ್ಲ. ಮಂಗಳಯಾನ, ಚಂದ್ರಯಾನ ಹೀಗೆ ಹಲವಾರು ಸಾಧನೆಗಳ ಕೀರ್ತಿಯನ್ನು ಮುಡಿಗೇರಿಸಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಆಹಾರ ಉತ್ಪಾದನೆ ಹೆಚ್ಚಿಸಲು, ಆರ್ಥಿಕ ಅಭಿವೃದ್ಧಿ ಮತ್ತು ದೇಶದ ಆರೋಗ್ಯ ವೃದ್ಧಿಗೊಳಿಸಲು ಸಾಧ್ಯವಾಗಬಲ್ಲುದು. ಜಗತ್ತಿನ ಬಲಿಷ್ಟ ರಾಷ್ಟ್ರಗಳು ಭಾರತಕ್ಕೆ ಮಾನ್ಯತೆ ನೀಡಬೇಕಾದರೆ ನಾವು ಮೊದಲು ತಂತ್ರಜ್ಞಾನಶಕ್ತ ರಾಷ್ಟ್ರವಾಗಬೇಕಾಗಿದೆ ಎಂದ ಅವರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿ ದೇಶದ ಅಭಿವೃದ್ಧಿ ಸಾಧನೆಗೆ ನೆರವಾಗುತ್ತಿದ್ದರೂ ಸಾಧಿಸಬೇಕಾದುದು ಬಹಳಷ್ಟಿದೆ. ನಮ್ಮ ಪ್ರಯೋಗಗಳು, ಸಂಶೋಧನೆಗಳು ಜನಸಾಮಾನ್ಯರನ್ನು ತಲುಪುವುದು ಅತೀ ಮುಖ್ಯವಾದುದು. ಸಾಮಾನ್ಯ ಜನರ ಜೀವನ ಸುಖಮಯವಾಗಿ ಅವರ ಬದುಕು ಹಸನು ಮಾಡುವುದೇ ವಿಜ್ಞಾನ ಮತ್ತು ತಂತ್ರಜ್ಞಾನದ ಉದ್ಧೇಶವಾಗಿದೆ. ಎಲ್ಲಾ ರಾಷ್ಟ್ರಗಳು ಇದನ್ನು ಮನಗಂಡು ಕಾರ್ಯೋನ್ಮುಖರಾದಾಗ ಪ್ರಪಂಚ ಶಾಂತಿಯ ನಿಟ್ಟುಸಿರು ಬಿಡಲು ಸಾಧ್ಯ ಎಂದು ಅವರು ಹೇಳಿದರು.

 

ಅಧ್ಯಯನಾಶಕ್ತಿ, ಕಠಿಣ ಪರಿಶ್ರಮ ಹೊಂದಿರಬೇಕು-ವಂ|ಡಾ|ಆ್ಯಂಟನಿ:

ದಿಕ್ಸೂಚಿ ಭಾಷಣಗೈದ ಫಿಲೋಮಿನಾ ಕಾಲೇಜ್‍ನ ಕ್ಯಾಂಪಸ್ ನಿರ್ದೇಶಕರಾದ ವಂ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಜೀವನವು ವಿಜ್ಞಾನ, ತತ್ವಶಾಸ್ತ್ರ ಮತ್ತು ಧರ್ಮದೊಂದಿಗೆ ತುಂಬಿದೆ. ಇವುಗಳ ಬಗ್ಗೆ ಅಧ್ಯಯನಾಶಕ್ತಿಯನ್ನು ಬೆಳೆಸಿಕೊಂಡರೆ ನಾವು ನಿಜವಾದ ಮಾನವರಾಗಲು ಸಾಧ್ಯವಿದೆ. ತತ್ವಶಾಸ್ತ್ರವು ಆಶ್ಚರ್ಯಕರವಾಗಿದ್ದು ಇದು ನಿಜವಾದ ವಿಜ್ಞಾನಿಯನ್ನು ರೂಪಿಸಬಲ್ಲುದು. ಬಾಹ್ಯಾಕಾಶ ಮತ್ತು ವೈಜ್ಞಾನಿಕ ಸಂಶೋಧನೆ ಕ್ಷೇತ್ರದಲ್ಲಿ ಭಾರತ ದೇಶ ಇಂದು ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ನಮ್ಮ ವಿಜ್ಞಾನಿಗಳ ಅಮೋಘ ಸಾಧನೆಯ ಬಗ್ಗೆ ದೇಶ ಹೆಮ್ಮೆ ಪಡಬೇಕಾಗಿದೆ. ಇಂತಹ ಸಾಧನೆಗೈಯಲು ವಿಷಯದ ಬಗೆಗಿನ ಅಧ್ಯಯನಾಶಕ್ತಿ, ಕಠಿಣ ಪರಿಶ್ರಮ, ಇಚ್ಛಾಶಕ್ತಿಯೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳೂ ಕೂಡ ಅವರವರ ಕ್ಷೇತ್ರಗಳಲ್ಲಿ ಅಧ್ಯಯನಾಶಕ್ತಿ, ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮವನ್ನು ರೂಢಿಸಿಕೊಂಡಾಗ ವಿಜ್ಞಾನಿಯಾಗಬಲ್ಲನು ಎಂದರು.

 

ವಿಜ್ಞಾನವನ್ನು ಮಾನವನ ಏಳಿಗಾಗಿ ಬಳಸಿಕೊಳ್ಳಬೇಕು-ವಂ|ವಿಜಯ್:

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಜ್ಞಾನವು ಮಾನವಕುಲದ ಸ್ಫೂರ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ಒಳಗೊಂಡಿದ್ದು, ಇದರಿಂದ ಬಾಹ್ಯಾಕಾಶ ವಿಜ್ಞಾನವು ಅಂತಿಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಪ್ರಯೋಜನ ಮಾನವಕುಲದ ವಿಕಾಸಕ್ಕೆ ಪೂರಕವಾಗಿರಬೇಕು. ಇದೇ ತಂತ್ರಜ್ಞಾನವನ್ನು ವಿನಾಶಕ್ಕೆ ಬಳಸಿದಾಗ ಅದು ನೀಚತನವಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಯಲ್ಲಿ ತೊಡಗಿರುವ ರಾಷ್ಟ್ರಗಳು ಪರಸ್ಪರ ಸಮಾಲೋಚಿಸಿ ವಿಜ್ಞಾನದ ಪ್ರಯೋಜನವನ್ನು ಮನುಷ್ಯನ ಏಳಿಗೆಗಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆಯನ್ನು ನಡೆಸಬೇಕಾಗಿದೆ ಎಂದರು.

ಇಸ್ರೋದ ತಾಂತ್ರಿಕ ಅಧಿಕಾರಿ ಸ್ಟೀವನ್ ಮಿರಾಂಡ, ವಿಜ್ಞಾನ ಸಂಘದ ಸಂಯೋಜಕರಾದ ರವಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ದಿವ್ಯಾ ಸ್ವಾಗತಿಸಿ, ತಕ್ಷಾ ವಂದಿಸಿದರು. ಸುಚಿತ್ರಾ ಮತ್ತು ಬಳಗ ಪ್ರಾರ್ಥಿಸಿದರು. ನೀಮಾ ಜಾರ್ಜ್ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಡೆಲ್ಮಾ ಲೋರಾ ಡಿ’ಕುನ್ಹಾ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್ ಆಧುನಿಕ ಪ್ರಪಂಚವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವೆನಿಸಿದೆ. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಪ್ರಾಚೀನ ಕಾಲದಿಂದಲೂ ಪರಿಚಿತವಾದ ಕ್ಷೇತ್ರಗಳೇ ಆಗಿದೆ. ಬಾಹ್ಯಾಕಾಶ ವಿಜ್ಞಾನವು ಭಾರತದ ಆರ್ಥಿಕ ಸ್ಥಿತಿ ಮತ್ತು ಜನಜೀವನ ಸುಧಾರಿಸಲು ಬಾಹ್ಯಾಕಾಶ ಯೋಜನೆಗಳ ಕೊಡುಗೆ ಅಪಾರವಾಗಿದೆ. ಏಕಕಾಲಕ್ಕೆ 104 ಉಪಗ್ರಹಗಳನ್ನು ಗಗನನಕ್ಷೆಗೆ ಬಿಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಈ ಹಿಂದೆ 37 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ರಶ್ಯ ದಾಖಲೆ ಸ್ಥಾಪಿಸಿತ್ತು. ಈಗ ಭಾರತ ಆ ದಾಖಲೆಯನ್ನು ಅಳಿಸಿ ಹಾಕಿದೆ. ಏಕಕಾಲಕ್ಕೆ 104 ಉಪಗ್ರಹಗಳನ್ನು ಗಗನನಕ್ಷೆಗೆ ಬಿಡುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅವಕಾಶಗಳ ಹೆಬ್ಬಾಗಿಲನ್ನು ತೆರೆದುಕೊಂಡಿದೆ. ಕಡಿಮೆ ಖರ್ಚು ವೆಚ್ಚದಲ್ಲಿ ಉಪಗ್ರಹ ಉಡಾವಣೆಗಾಗಿ ಖ್ಯಾತಿ ಪಡೆದಿರುವ ಇಸ್ರೋ ಇನ್ನು ಮುಂದೆ ಇನ್ನಷ್ಟು ದಾಖಲೆಗಳನ್ನು ಮುಡಿಗೇರಿಸಿಕೊಳ್ಳಲಿದೆ.

-ಬಿ.ಯಸೊಬ್, ಉಪ ವ್ಯವಸ್ಥಾಪಕರು, ಇಸ್ರೋ ಎಂ.ಸಿ.ಎಫ್, ಹಾಸನ