ಇಂಟರ‍್ಯಾಕ್ಟ್ ಕ್ಲಬ್‌ ರಚನೆ

ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವು ಆ.9 ರಂದು ಕಾಲೇಜ್‌ನ ಆಡಿಯೋ ವಿಶ್ಯುವಲ್ ಸಭಾಂಗಣದಲ್ಲಿ ನಡೆಯಿತು.

ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸಿಟಿಯ ನಿಯೋಜಿತ ಅಧ್ಯಕ್ಷ ಮನೋಹರ್ ಕೆ.ರವರು ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷೆ ವಂದನಾ ಗೋವಿಯಸ್‌ರವರಿಗೆ ರೋಟರಿ ಕೊರಳಪಟ್ಟಿಯನ್ನು ಹಾಕುವುದರ ಮೂಲಕ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು,1966 ರಲ್ಲಿ ಇಂಟರ‍್ಯಾಕ್ಟ್ ಪ್ರಥಮವಾಗಿ ಪ್ರಾರಂಭವಾಗಿದ್ದು 1985 ರಲ್ಲಿ ಇದು ಅಧಿಕೃತವಾಗಿ ಆಸ್ತಿತ್ವಕ್ಕೆ ಬಂತು. ವ್ಯಕ್ತಿಯ ಮಾನಸಿಕ ಬೆಳವಣಿಗೆಗೆ, ನಾಯಕತ್ವ ಕೌಶಲ್ಯಕ್ಕೆ, ವೈಯಕ್ತಿಕ ಸಮಗ್ರತೆಗೆ ಜೊತೆಗೆ ಜವಾಬ್ದಾರಿ ಅಂದರೆ ಏನು ಎಂಬುದರ ಬಗ್ಗೆ ಇಂಟರ‍್ಯಾಕ್ಟ್‌ನಲ್ಲಿ ತೊಡಗಿಸಿಕೊಂಡಾಗ ಅರಿವಾಗುತ್ತದೆ ಮಾತ್ರವಲ್ಲದೆ ಒಗ್ಗಟ್ಟು, ಪರಸ್ಪ ಒಡನಾಟ ಸಂಪಾದಿಸಬಹುದಾಗಿದೆ ಎಂದ ಅವರು ಹೇಳಿದರು.

ಇಂಟರ‍್ಯಾಕ್ಟ್ ಕ್ಲಬ್‌ನ ಚೇರ್‌ಮ್ಯಾನ್ ಡಾ|ಶಶಿಧರ್ ಕಜೆರವರು ಮಾತನಾಡಿ, ಪ್ರಪಂಚದ ದೊಡ್ಡ ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು 1905ರಲ್ಲಿ ಪ್ರಾರಂಭವಾಗಿ ಇಂದಿನವರೆಗೆ ಅದು ಮನುಕುಲದ ಸೇವೆಯಲ್ಲಿ ಕಳೆದಿದೆ. 159 ದೇಶದಲ್ಲಿ ಸುಮಾರು 5 ಲಕ್ಷಕ್ಕೂ ಮಿಕ್ಕಿ ಸದಸ್ಯರು ಇಂಟರ‍್ಯಾಕ್ಟ್ ಕ್ಲಬ್‌ನಲ್ಲಿ ಸೇವೆಯನ್ನು ನೀಡುತ್ತಿದ್ದಾರೆ. ಸದಸ್ಯರಲ್ಲಿ ಪರಸ್ಪರ ಸ್ನೇಹ ಹಾಗೂ ಒಡನಾಟ ವೃದ್ಧಿಯಾಗುವುದಕ್ಕೆ ಇಂಟರ‍್ಯಾಕ್ಟ್ ಕ್ಲಬ್ ಹುಟ್ಟಿಕೊಂಡಿದೆ. ಸ್ವ-ಹಿತ ಮೀರಿದ ಸೇವೆಯೆಂಬುದು ರೋಟರಿಯ ಧ್ಯೇಯವಾಕ್ಯವಾಗಿದ್ದರೂ ಸಮಾಜದಲ್ಲಿ ಭಿನ್ನವಾದ ಯೋಜನೆಯನ್ನು ಹುಟ್ಟು ಹಾಕುವಂತಹುದು, ಸಮಾಜದಲ್ಲಿ, ಕಾಲೇಜ್‌ನಲ್ಲಿ ನಾಯಕತ್ವ ರೂಪಿಸಿಕೊಳ್ಳುವಂತಹುದು, ಹೊಸ ಹೊಸ ಸ್ನೇಹಿತರ ಸಂಪಾದಿಸುವಂತಹುದು, ಮತ್ತೊಬ್ಬರಿಗೆ ಸೇವೆ ನೀಡುವ ಮೂಲಕ ನಾವು ವಿಭಿನ್ನವೆಂದು ತೋರಿಸಿಕೊಡುವಂತಹುದು ಇವೆಲ್ಲಾ ಕ್ಲಬ್‌ನಲ್ಲಿ ಗುರುತಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿ ಕಾಲೇಜ್ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಮತ್ತು ಅವರಲ್ಲಿ ನಾಯಕತ್ವದ ಕೌಶಲ್ಯಗಳನ್ನು ಮೂಡಿಸಲು ರೋಟರಿ ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಚಟುವಟಿಕೆಗಳು ಕೇವಲ ಉದ್ಘಾಟನೆಗೆ ಸೀಮಿತವಾಗದೆ ಸಾಮಾಜಿಕ ಚಟುವಟಿಕೆಗಳಿಗೆ ಆಸ್ಪದ ನೀಡುವಂತಾಗಬೇಕು ಅಲ್ಲದೆ ಪ್ರಸ್ತುತ ವರ್ಷ ಕಡಿಮೆ ಪಕ್ಷ ನಾಲ್ಕು ಕಾರ್ಯಕ್ರಮಗಳನ್ನು ಕ್ಲಬ್ ಮುಖೇನ ನಡೆಯುವ ಮೂಲಕ ಗುರುತರ ಜವಾಬ್ದಾರಿಯನ್ನು ಅರಿಯುವಂತಾಗಬೇಕು ಎಂದರು.

ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ವಂದನಾ ಗೋವಿಯಸ್‌ರವರು ಮಾತನಾಡಿ, ಸರ್ವರ ಸಹಕಾರದೊಂದಿಗೆ ಉತ್ತಮ ಸೇವೆ ಮಾಡುತ್ತ ರೋಟರಿ ಮೌಲ್ಯವನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ರೋಟರಿ ಸಿಟಿ ಕಾರ್ಯದರ್ಶಿ ವಲೇರಿಯನ್ ಮೊಂತೇರೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಸಿಟಿ ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು. ಸೌಧ ಮತ್ತು ಬಳಗ ಪ್ರಾರ್ಥಿಸಿದರು. ರೋಟರಿ ಸಿಟಿ ಯೂತ್ ಸರ್ವಿಸ್ ನಿರ್ದೇಶಕ ಕೃಷ್ಣಮೋಹನ್ ಪಿ.ಎಸ್ ಸ್ವಾಗತಿಸಿ, ನೂತನ ಇಂಟರ‍್ಯಾಕ್ಟ್ ಕಾರ್ಯದರ್ಶಿ ಸುಶಾಂತ್ ವಂದಿಸಿದರು. ಆಲನ್ ಪಿಂಟೋ, ಜೋಸ್ವಿನ್ ಮಸ್ಕರೇನ್ಹಸ್, ಖುಶಿ, ಸೃಜನ್, ರಂಜಿತ್, ರಿತೇಶ್‌ರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಲಿನ್ಸಿಯ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ವಂದನಾ ಗೋವಿಯಸ್, ಕಾರ್ಯದರ್ಶಿಯಾಗಿ ಸುಶಾಂತ್, ಉಪಾಧ್ಯಕ್ಷೆಯಾಗಿ ಖುಶಿ ವಿ, ಜೊತೆ ಕಾರ್ಯದರ್ಶಿಯಾಗಿ ಸೃಜನ್ ಕಶ್ಯಪ್, ಕೋಶಾಧಿಕಾರಿಯಾಗಿ ತನುಜ, ಹಾಗೂ ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಅಮೃತ, ಕ್ಲಬ್ ಸರ್ವಿಸ್ ನಿದೇಶಕರಾಗಿ ಸ್ವಾತಿ ಎಂ.ಎನ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಸುಶ್ಮಾ ಬಿ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಖುಶಿ, ಇನ್ಸ್‌ಟಿಟ್ಯೂಷನಲ್ ಸರ್ವಿಸ್ ನಿರ್ದೇಶಕರಾಗಿ ವರ್ಷಾ ಹಾಗೂ ಇಂಟರ‍್ಯಾಕ್ಟ್ ಸ್ಟಾಫ್ ಸಂಯೋಜಕರಾಗಿ ರೋಹಿತ್ ಕುಮಾರ್, ಭರತ್ ಪೈ, ರೇಖಾ, ಉಷಾ ರೈರವರು ಆಯ್ಕೆಯಾಗಿದ್ದಾರೆ. ರೋಟರಿ ಸಿಟಿ ನಿಯೋಜಿತ ಅಧ್ಯಕ್ಷ ಮನೋಹರ್ ಕೆ.ರವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ರೌಂಡ್ ಬಾಕ್ಸ್
ರೋಟರಿ ಸಂಸ್ಥೆಯು ಮಾನವ ಹಕ್ಕುಗಳ ಜಾಗೃತಿ ಹಾಗೂ ಸ್ವಚ್ಚತಾ ಅಭಿಯಾನ ಯೋಜನೆಗೆ ಬಹಳ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಸದಸ್ಯರು ಪ್ರತಿ ತಿಂಗಳು ಕಾಲೇಜ್ ಕ್ಯಾಂಪಸ್‌ನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ರೀತಿ ಯೋಜನೆ ಕಾರ್ಯಗತಗೊಳಿಸಿದಾಗ ಉಳಿದ ವಿದ್ಯಾರ್ಥಿಗಳು ಕೈಜೋಡಿಸಲು ಮುಂದೆ ಬರುತ್ತಾರೆ ಇಂಟರ‍್ಯಾಕ್ಟ್ ಕ್ಲಬ್‌ನ ಚೇರ್‌ಮ್ಯಾನ್ ಡಾ|ಶಶಿಧರ್ ಕಜೆರವರು ಹೇಳಿದರು.