ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಸಮಯದಲ್ಲಿ ಸಮಾಜದಲ್ಲಿನ ಆಗು-ಹೋಗುಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತಾ, ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಾಗ ಸಮಾಜವು ಆರೋಗ್ಯವಂತ ಸಮಾಜವಾಗುವುದರಲ್ಲಿ ಸಂದೇಹವಿಲ್ಲ ಎಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿದರು.

ಅವರು ಆ.3 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಪ್ರಾಯೋಜಿತ ಸಂಸ್ಥೆಯಾದ ಇಂಟರ್ಯಾಕ್ಟ್ ಕ್ಲಬ್‍ನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆ ಎನಿಸಿಕೊಂಡ ರೋಟರಿಯು ಇಡೀ ವಿಶ್ವದಲ್ಲೇ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಸರ್ವತ್ರ ಶ್ಲಾಘನೆಗೆ ಒಳಗಾಗಿದೆ. ಅದೇ ರೀತಿ ಪುತ್ತೂರು ರೋಟರಿ ಸಂಸ್ಥೆಯಲ್ಲಿ ಇಂಜಿನಿಯರ್, ಡಾಕ್ಟರ್ ಹೀಗೆ ವಿವಿಧ ಉನ್ನತ ಹುದ್ದೆಗಳನ್ನು ಆಲಂಕರಿಸಿದವರೂ ಇದ್ದರೂ, ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕು ಎನ್ನುವ ಸದುದ್ಧೇಶದಿಂದ ಸಮಯದ ಹೊಂದಾಣಿಕೆ ಮಾಡಿಕೊಂಡು ರೋಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಇಂಟರ್ಯಾಕ್ಟ್ ಕ್ಲಬ್‍ನ ವಿದ್ಯಾರ್ಥಿಗಳು ಧನಾತ್ಮಕ ಧೋರಣೆಯುಳ್ಳ ಕಾರ್ಯಕ್ರಮಗಳನ್ನು ಮಾಡಲು ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.

ಇಂಟರ್ಯಾಕ್ಟ್ ಚೇರ್‍ಮ್ಯಾನ್ ಆಗಿರುವ ಕೃಷ್ಣಮೋಹನ್‍ರವರು ಮಾತನಾಡಿ, ರೋಟರಿ ಸಂಸ್ಥೆ ಅಂದರೆ ಏನು?, ಅದರ ಕಾರ್ಯವ್ಯಾಪ್ತಿಗಳು ಯಾವುದು?, ರೋಟರಿ ಸಂಸ್ಥೆಯಲ್ಲಿ ಸೇರಿಕೊಂಡರೆ ಯಾವ ಸೇವೆಗೈಯಲು ಅವಕಾಶವಿದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ಸಮಾಜದಲ್ಲಿನ ಅಗತ್ಯತೆಯನ್ನು ಕಂಡುಕೊಂಡು ತನ್ನಿಂದ ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡಲು ಸಾಧ್ಯವಿದೆ ಎಂದು ತಿಳಿದು ಕಾರ್ಯೋನ್ಮುಖರಾಗಬೇಕು. ವಿಶ್ವವೇ ಪೋಲಿಯೋ ಮುಕ್ತವಾಗಬೇಕು ಎಂಬ ಧ್ಯೇಯದೊಂದಿಗೆ ಪೋಲಿಯೋ ನಿರ್ಮೂಲನಕ್ಕೆ ರೋಟರಿ ಸಂಸ್ಥೆಯು ಬಹಳಷ್ಟು ಶ್ರಮಿಸುತ್ತಿದೆ. ಸಮಾಜದ ಹಿತವನ್ನು ಕಾಪಾಡಲು ತನ್ನ ಪಾಲು ಇರಬೇಕು ಎನ್ನುವ ಆಕಾಂಕ್ಷೆ ಹಾಗೂ ಇತರರಿಗೆ ಸ್ಫೂರ್ತಿಯಾಗಿರಬೇಕು ಎನ್ನುವ ಧ್ಯೇಯ ವಿದ್ಯಾರ್ಥಿಗಳಲ್ಲಿ ನೆಟ್ಟಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮನೋಹರ್ ಕೊಳಕ್ಕಿಮಾರ್‍ರವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿ ಪದಗ್ರಹಣವನ್ನು ನೆರವೇರಿಸಿ ಮಾತನಾಡಿ, ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಉತ್ತಮ ಬಾಂಧವ್ಯವನ್ನು ಬೆಸೆಯುವಲ್ಲಿ ರೋಟರಿ ಸಂಸ್ಥೆಯು ಹೆಜ್ಜೆಯಿಡುತ್ತಿದೆ. ವಿದ್ಯಾರ್ಥಿಗಳು ಇಂಟರ್ಯಾಕ್ಟ್ ಕ್ಲಬ್‍ನ ಉದ್ಧೇಶಗಳನ್ನು ವಿಮರ್ಶೆ ಮಾಡುತ್ತಾ ಸಮಾಜಮುಖಿ ಚಟುವಟಿಕೆಗಳತ್ತ ಮನ ಮಾಡಬೇಕು. ಸಮಾಜಮುಖಿ ಕಾರ್ಯಗಳೊಂದಿಗೆ ವಿದ್ಯಾರ್ಥಿಗಳೊಳಗೆ ಉತ್ತಮ ಸಂಬಂಧವನ್ನು ಏರ್ಪಡುತ್ತಾ ಮಾದರಿ ಪ್ರಜೆಯಾಗಿಸುವಲ್ಲಿ ಸಹಕಾರಿಯಾಗಬೇಕು ಎಂದರು.

ಇಂಟರ್ಯಾಕ್ಟ್ ಕಾರ್ಯದರ್ಶಿ ವರ್ಷಾ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಸಿಟಿ ಕಾರ್ಯದರ್ಶಿ ಅಮಿತಾ ಶೆಟ್ಟಿ ವಂದಿಸಿದರು. ಜನನಿ ಮತ್ತು ಬಳಗ ಪ್ರಾರ್ಥಿಸಿದರು. ಸುಚಿತ್ರಾ ಪಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸಿಟಿಯ ನಿಕಟಪೂರ್ವ ಅಧ್ಯಕ್ಷ ಜೆರೋಮಿಯಸ್ ಪಾೈಸ್, ಕೋಶಾಧಿಕಾರಿ ಪ್ರಮೋದ್ ಮಲ್ಲಾರ, ಉದಯ ಶೆಟ್ಟಿ, ಸಂತೋಷ್ ಶೆಟ್ಟಿ, ಲಾರೆನ್ಸ್ ಗೊನ್ಸಾಲ್ವಿಸ್, ಜ್ಯೋ ಡಿ’ಸೋಜರವರು ಉಪಸ್ಥಿತರಿದ್ದರು.

ಬಾಕ್ಸ್ಇಂಟರ್ಯಾಕ್ಟ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಶಾನಿಯಲ್ ನೊರೋನ್ಹಾ, ಕಾರ್ಯದರ್ಶಿಯಾಗಿ ವರ್ಷಾ ಜಿ.ಎನ್, ಉಪಾಧ್ಯಕ್ಷೆಯಾಗಿ ಸುಚಿತ್ರಾ ಪಿ.ಭಟ್, ಕೋಶಾಧಿಕಾರಿಯಾಗಿ ರಾಹುಲ್ ಎಂ.ಗೌಡ, ಸಾರ್ಜಂಟ್ ಎಟ್ ಆಮ್ರ್ಸ್ ಆಗಿ ಸಮೀಕ್ಷಾ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ದಿವ್ಯಾ ಕೆ.ಎನ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕ್ಲಿಯೋನ್ ಫ್ರಾನ್ಸ್ಟಿನ್ ಮಿರಾಂದ, ಇನ್‍ಸ್ಟಿಟ್ಯೂಷನಲ್ ಸರ್ವಿಸ್ ನಿರ್ದೇಶಕರಾಗಿ ಗೌತಮ್ ಬಿ.ಎನ್ ಹಾಗೂ ಇಂಟರ್ಯಾಕ್ಟ್ ಸಂಯೋಜಕರಾಗಿ ಉಪನ್ಯಾಸಕರಾದ ರೇಖಾ, ಆಶಾಲತಾರವರು ಆಯ್ಕೆಯಾದರು.

ರೌಂಡ್ ಬಾಕ್ಸ್ನೂತನ ಅಧ್ಯಕ್ಷ ಶಾನಿಯಲ್ ನೊರೋನ್ಹಾರವರು ಮಾತನಾಡಿ, ಕಾಲೇಜು ನೀತಿ-ನಿಯಮಗಳನ್ನು ಪಾಲಿಸುವುದರ ಜೊತೆಗೆ ಇಂಟರ್ಯಾಕ್ಟ್ ಕ್ಲಬ್ ಏಳಿಗೆಗೆ ಶ್ರಮಿಸುತ್ತೇನೆ. ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ರೋಟರಿ ಹಾಗೂ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಳ್ಳುವ ಭರವಸೆ ನೀಡಿದರು.