ಜೀವನದ ಮೌಲ್ಯಗಳು ಮಗುವಿನಲ್ಲಿ ಅಂತಸ್ತವಾಗಬೇಕು-ತಾಳ್ತಜೆ

 

ಪೋಷಕರು ಹಿರಿಯರಿಗೆ ಗೌರವ ಕೊಟ್ಟಾಗ ಮಗು ಕೂಡ ಗೌರವ ಕೊಡುವುದನ್ನು ಕಲಿಯುತ್ತದೆ. ಪೋಷಕರು ಯಾವ ರೀತಿ ಅನುಕರಣೆ ಮಾಡುತ್ತಾರೋ ಅದನ್ನೇ ಮಗು ಕೂಡ ಹಿಂಬಾಲಿಸುತ್ತದೆ. ಜೀವನದ ಮೌಲ್ಯಗಳು ಮಗುವಿನಲ್ಲಿ ಅಂತಸ್ತವಾಗುವುದು, ಅದನ್ನು ಮೈಗೂಡಿಸಿಕೊಳ್ಳುವುದು ಹೇಗೆಂದರೆ ಅದು ನಮ್ಮ ಮಾತಿನ ಮೂಲಕ ಅಲ್ಲ, ಬದಲಾಗಿ ನಮ್ಮ ನಡವಳಿಕೆ ಮೂಲಕ ಆಗಿದೆ ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ, ವಿಶ್ರಾಂತ ಪ್ರಾಧ್ಯಾಪಕ, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ|ತಾಳ್ತಜೆ ವಸಂತ ಕುಮಾರರವರು ಹೇಳಿದರು.

ಜು.15 ರಂದು ಕಾಲೇಜ್‌ನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ನಡೆದ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ರಕ್ಷಕ-ಶಿಕ್ಷಕ ಸಂಘದ ಉದ್ಘಾಟನೆ, ಮಹಾಸಭೆ, 2017-18ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಹಾಗೂ ‘ವಿದ್ಯಾರ್ಥಿಗಳ ಜೀವನದಲ್ಲಿ ಪೋಷಕರ ಜವಾಬ್ದಾರಿ’ ಬಗ್ಗೆ ಚಿಂತನ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನ್ಯೂಕ್ಲಿಯಸ್ ಕುಟುಂಬವಾಗಿರುವ ಇಂದಿನ ಕಾಲದಲ್ಲಿ ಪೋಷಕರಿಗೆ ತಮ್ಮ ಕೆಲಸದ ಒತ್ತಡದ ನಡುವೆ ಮಕ್ಕಳೊಡನೆ ಕಾಲ ಕಳೆಯಲು ಸಮಯವಿಲ್ಲದಾಗಿದೆ. ಪ್ರತಿ ಮಗುವಿಗೂ ತನ್ನ ಭಾವನೆಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ಆದ್ದರಿಂದ ಪೋಷಕರು ಮಕ್ಕಳೊಡನೆ ಕಾಲ ಕಳೆಯಲು ಸಮಯವನ್ನು ಮೀಸಲಿಟ್ಟಾಗ ಮಗುವು ವಿಕಾಸ ಹೊಂದಲು ಸಹಕಾರಿಯಾಗುತ್ತದೆ ಎಂದ ಅವರು ಮಗುವಿನ ಕೋಮಲವಾದ ಸ್ಪಂದನಾಶೀಲತೆ ಅರಳುವಂತಹ ಈ ಕಾಲಘಟ್ಟದಲ್ಲಿ ಹೆತ್ತವರು ಕ್ಷುಲ್ಲಕ ವಿಚಾರಗಳಿಗೆ ಜಗಳ ಮಾಡುವುದರಿಂದ ಮಗುವಿನ ಬೆಳವಣಿಗೆಯಲ್ಲಿ ಏರಿಳಿತ ಉಂಟಾಗುತ್ತದೆ ಎಂದರು. ಮಗುವಿನ ಭಾವಲೋಕ, ಕಲ್ಪನಾಲೋಕಕ್ಕೆ ನೀರೆರೆದು ಅದನ್ನು ಬೆಳೆಸುವ ಕೆಲಸ ಪೋಷಕರದ್ದಾಗಬೇಕು. ಯಾವುದು ಸತ್ಯ, ಯಾವುದು ಧರ್ಮ. ಸತ್ಯದ ಸಾಕ್ಷಾತ್ಕಾರದ ಕಡೆಗೆ ಮಗುವು ಮುಖ ಮಾಡುವಂತಾಗಬೇಕು. ಮಗುವಿನ ಮನೋದೈಹಿಕ ಬದಲಾವಣೆಯಲ್ಲಿ ಪೋಷಕರು ಸದಾ ಗಮನ ಹರಿಸುವಂತಾಗಬೇಕು ಎಂದು ತಾಳ್ತಜೆರವರು ಹೇಳಿದರು.

ಮಾನವೀಯ ಮೌಲ್ಯಗಳ ಜೊತೆಗೆ ಶಿಸ್ತನ್ನು ಮೈಗೂಡಿಸಿಕೊಳ್ಳಿ-ವಂ|ಆಲ್ಫ್ರೆಡ್:
ಅಧ್ಯಕ್ಷತೆ ವಹಿಸಿದ ಮಾದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ  ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎನ್ನುವ ದೂರದೃಷ್ಟಿತ್ವದಿಂದ 1958ರಲ್ಲಿ ಶಿಕ್ಷಣ ಶಿಲ್ಫಿ ಮೊ|ಪತ್ರಾವೋರವರು ಪುತ್ತೂರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿಕ್ಷಣ ಸಂಸ್ಥೆಗಳಲ್ಲೊಂದಾದ ಪದವಿ ಪೂರ್ವ ಕಾಲೇಜು ಪ್ರಸ್ತುತ ವಜ್ರಮಹೋತ್ಸವನ್ನು ಆಚರಿಸುತ್ತಿದೆ. ವಿವಿಧತೆಯಲ್ಲಿ ಏಕತೆಯೆಂಬಂತೆ ಮಕ್ಕಳಲ್ಲಿ ಸಂಸ್ಕಾರಯುತ ಮಾನವೀಯ ಮೌಲ್ಯಗಳ ಜೊತೆಗೆ ಶಿಸ್ತನ್ನು ಮೈಗೂಡಿಸಿಕೊಂಡು ದೇಶದ ಉತ್ತಮ ನಾಗರಿಕನನ್ನಾಗಿ ಮಾಡಿದಾಗ ದೇಶ ಸುಭೀಕ್ಷೆಯತ್ತ ಹೆಜ್ಜೆಯಿಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದರು.

ಪೋಷಕರೇ ಮಕ್ಕಳಿಗೆ ಮಾರ್ಗದರ್ಶಕರಾಗುವಂತಾಗಬೇಕು-ವಂ|ಡಾ|ಆಂಟನಿ:
ಕಾಲೇಜ್ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಮಕ್ಕಳ ಪೋಷಣೆಯಲ್ಲಿ ಹೆತ್ತವರು ಪ್ರಮುಖ ಪಾತ್ರ ವಹಿಸುತ್ತಾರೆ. ಬೆಳೆಯುವಂತಹ ಮಕ್ಕಳ ಎದುರು ಪೋಷಕರಾದ ನಾವು ಮಕ್ಕಳಿಗೆ ಯಾವ ರೀತಿಯ ಮಾರ್ಗದರ್ಶಕರಾಗಬಲ್ಲೆವು ಎಂಬುದನ್ನು ಅಲೋಚಿಸಬೇಕಾದ ಅಗತ್ಯತೆ ಇದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗಬೇಕಾದರೆ ಮೊದಲು ನಾವು ಅವರಿಗೆ ಮಾರ್ಗದರ್ಶಕರಾಗಬೇಕು ಎಂದ ಅವರು ಶೈಕ್ಷಣಿಕ ರಂಗದಲ್ಲಿ ಮಾತ್ರವಲ್ಲ ಶೈಕ್ಷಣೇತರ ರಂಗದಲ್ಲೂ ವ್ಯಕ್ತಿಯ ದೇಹದಲ್ಲಿ, ಆತ್ಮದಲ್ಲಿ, ಮನಸ್ಸಿನಲ್ಲಿ ಸಾಧನೆ ಮಾಡುವವರಾಗಬೇಕು. ಅಧ್ಯಾತ್ಮಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ ಬೆಳೆದವನೇ ನಿಜವಾದ ವಿದ್ಯಾರ್ಥಿಯಾಗುತ್ತಾನೆ ಎಂದರು. ನಿಜವಾದ ವಿದ್ಯೆ ಎಂಬುದು ಬದುಕಿನ ಸವಾಲುಗಳನ್ನು ಎದುರಿಸಲು ಶಕ್ತರಾಗುವಂತಾಗಬೇಕು ಎಂದು ಅವರು ಹೇಳಿದರು.

ಮೊಬೈಲ್, ವಾಹನ ಸಂಪೂರ್ಣ ನಿಷಿದ್ಧ-ವಂ|ವಿಜಯ್ ಲೋಬೋ:
ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಸ್ಪರ್ಧಾತ್ಮಕ ಜಗತ್ತನ್ನು ಮಗು ಸ್ಪರ್ಧಿಯಾಗಿ ಪ್ರವೇಶಿಸಬೇಕೇ ವಿನಹ ಪ್ರೇಕ್ಷಕನಾಗಿ ಅಲ್ಲ. ಇಂತಹ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವಂತೆ ಮಾಡಲು ತಮ್ಮ ಮಕ್ಕಳಿಗೆ ಕಾಲೇಜ್‌ನಲ್ಲಿ ಸಿಪಿಟಿ ತರಗತಿಗಳನ್ನು ಆರಂಭಿಸಿದ್ದೇವೆ. ಪೋಷಕರು ವಿದ್ಯಾರ್ಥಿಗಳಿಗೆ ಕೇಳಿದ್ದನ್ನು ಕೊಡಬೇಡಿ. ಮೊಬೈಲ್ ಹಾಗೂ ಇಂಧನಯುಕ್ತ ವಾಹನಗಳನ್ನು ಕಾಲೇಜ್‌ಗೆ ತರುವುದಕ್ಕೆ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದ್ದರೂ ಕೆಲವು ವಿದ್ಯಾರ್ಥಿಗಳ ಪೋಷಕರು ಇದನ್ನು ಪಾಲಿಸುತ್ತಿಲ್ಲ ಎಂದ ಅವರು ವಿದ್ಯಾರ್ಥಿಗಳು ತಮಗೆ ಸಲ್ಲದಂತಹ ಚಟುವಟಿಕೆಗಳಿಗೆ ದಾಸರಾಗದಂತೆ ಪೋಷಕರು ಮುತುವರ್ಜಿವಹಿಸಬೇಕಾಗಿದೆ ಎಂದು ಹೇಳಿ ಕಾಲೇಜ್‌ನ ಚಟುವಟಿಕೆಗಳ ಬಗ್ಗೆ ವಿವರಿಸಿದರು. 

ಸನ್ಮಾನ ನನ್ನದ್ದಲ್ಲ, ಪೋಷಕರಿಗೆ ಅರ್ಪಣೆ-ಡಾ|ಸೂರ‍್ಯನಾರಾಯಣ:
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ|ಸೂರ್ಯನಾರಾಯಣ ಕೆ,ರವರು ಮಾತನಾಡಿ, ಹೇಗೆ ಹಣತೆ ಉರಿದು ಬೆಳಕು ನೀಡುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳನ್ನು ಕಾಲಕಾಲಕ್ಕೆ ಪೋಷಿಸಿ, ಸರಿಯಾದ ಮಾರ್ಗದರ್ಶನದೊಂದಿಗೆ ಅವರನ್ನು ಪ್ರಜ್ವಲಿಸುವಂತೆ ಮಾಡಬೇಕಾದ್ದು ಪ್ರತಿಯೊಬ್ಬ ಹೆತ್ತವರ ಕರ್ತವ್ಯ. ಮಗುವಿನಲ್ಲಿ ಹುದುಗಿರುವ ಪ್ರತಿಭಾ ಸಾಮಾರ್ಥ್ಯವನ್ನು ಬೆಳೆಸುವಂತಾಗತಬೇಕೇ ವಿನಹ ಪೋಷಕರು ತಮ್ಮ ಸ್ವಾರ್ಥಕ್ಕೆ ಅಂಟಿಕೊಂಡು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದರು. ಕಳೆದ ಎರಡು ವರ್ಷಗಳಿಂದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷನಾಗಿ ಎಲ್ಲರ ಸಹಕಾರದಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಇಂದು ನನಗೆ ಸಿಕ್ಕಿದ ಸನ್ಮಾನ ನಿಜವಾಗಿಯೂ ಅದು ನನ್ನದ್ದಲ್ಲ ಬದಲಾಗಿ ಪ್ರತಿಯೊಬ್ಬ ಪೋಷಕರಿಗೆ ಇದನ್ನು ಅರ್ಪಣೆ ಮಾಡುತ್ತಿದ್ದೇನೆ ಎಂದರು.

ಸನ್ಮಾನ/ಪದಾಧಿಕಾರಿಗಳ ಆಯ್ಕೆ:
ಕಳೆದ ಎರಡು ವರ್ಷಗಳಿಂದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಡಾ|ಸೂರ್ಯನಾರಾಯಣ ಕೆ,ರವರನ್ನು ಈ ಸಂದರ್ಭದಲ್ಲಿ ಕಾಲೇಜ್ ವತಿಯಿಂದ ಅತಿಥಿ ಗಣ್ಯರು ಶಾಲು ಹೊದಿಸಿ ಸನ್ಮಾನಿಸಲಾಯಿತು. ಮುಂದಿನ ಎರಡು ವರ್ಷಗಳ ಅವಧಿಗೆ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರರವರು ಸರ್ವಾನುಮತದಿಂದ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ದುರ್ಗಾಪ್ರಸಾದ್ ರೈರವರು ಸಂಸ್ಥೆಯ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ ಎಂದು ಹೇಳಿ ಸರ್ವರ ಸಹಕಾರ ಕೋರಿದರು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ, ಉಪನ್ಯಾಸಕ ಪ್ರಶಾಂತ್ ಭಟ್‌ರವರು ನಿರ್ವಹಿಸಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕಿ ದಿವ್ಯ ಕೆ.ರವರು ಸಂಪನ್ಮೂಲ ವ್ಯಕ್ತಿಗಳ ಪರಿಚಯಿಸಿದರು. ಶೇ.೯೫ ಅಂಕ ಪಡೆದ ವಿದ್ಯಾರ್ಥಿಗಳ ಹೆಸರನ್ನು ಉಪನ್ಯಾಸಕರಾದ ಯಶ್ವಂತ್ ಎಂ.ಡಿ, ಸಂಜಯ್‌ರವರು ಓದಿದರು. ರಕ್ಷಕ-ಶಿಕ್ಷಕ ಸಂಘದ ಕೋಶಾಧಿಕಾರಿ, ಉಪನ್ಯಾಸಕ ಅನಿಲ್ ಕುಮಾರ್ ಲೆಕ್ಕಪತ್ರ ಮಂಡಿಸಿ, ವಂದಿಸಿದರು. ಉಪನ್ಯಾಸಕಿ ಉಷಾ ಯಶ್ವಂತ್ ಕಾರ್ಯಕ್ರಮ ನಿರೂಪಿಸಿದರು.

ವಜ್ರಮಹೋತ್ಸವ ಕಟ್ಟಡಕ್ಕೆ ರೂ,10ಕೋಟಿ ಯೋಜನೆ…
ಪ್ರಸ್ತುತ ವರ್ಷ ಸಂಸ್ಥೆಗೆ ವಜ್ರಮಹೋತ್ಸವ ವರ್ಷ. ಸೆಪ್ಟೆಂಬರ್ ತಿಂಗಳಿನಲ್ಲಿ ಇದರ ಉದ್ಘಾಟನೆಗೊಂಡು 2018 ಡಿಸೆಂಬರ್ ತಿಂಗಳಿನಲ್ಲಿ ಸಮಾರೋಪ ನಡೆಯಲಿದೆ. ಇದರ ಸವಿನೆನಪಿಗೆ ಹಲವಾರು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪದವಿ ಹಾಗೂ ಪದವಿ ಪೂರ್ವ ಕಾಲೇಜು ಜಂಟಿಯಾಗಿ ಆಚರಿಸುತ್ತಿರುವ ಈ ಉತ್ಸವದಲ್ಲಿ ಕನಸಿನ ಯೋಜನೆಗಳಾದ ಪದವಿ ಕಾಲೇಜ್‌ನ ಕಟ್ಟಡಕ್ಕೆ ಇನ್ನೂ ಎರಡು ಹೆಚ್ಚುವರಿ ಮಹಡಿಗಳ ನಿರ್ಮಾಣ, ಪಿಯುಸಿ ಕಟ್ಟಡವನ್ನು ವಿಸ್ತರಿಸಿ ಸುಸಜ್ಜಿತ ಪ್ರಯೋಗಾಲಯ ನಿರ್ಮಾಣ, ಕಾಲೇಜ್‌ನ ಮುಂಭಾಗಕ್ಕೆ ಇಂಟರ್‌ಲಾಕ್ಸ್ ಅಳವಡಿಸುವುದಕ್ಕೆ ಸುಮಾರೂ ರೂ,೧೦ ಕೋಟಿಯ ಬೃಹತ್ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಕನಸು ಸಾಕಾರಗೊಳ್ಳಲು ಆರ್ಥಿಕ ಸಹಾಯ ಅತ್ಯಗತ್ಯ. ಪ್ರತಿಯೊಬ್ಬ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಸಂಸ್ಥೆಯ ಹಿತೈಷಿಗಳು ತನು-ಮನ-ಧನದಿಂದ ಸಹಕರಿಸಿ ಸಂಸ್ಥೆಯನ್ನು ಬೆಳೆಸುವಂತಾಗಬೇಕು -ವಂ|ವಿಜಯ್ ಲೋಬೋ, ಪ್ರಾಂಶುಪಾಲರು.

2016-17ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.95 ಅಂಕ ಪಡೆದ ವಿದ್ಯಾರ್ಥಿಗಳಿಗ ಸನ್ಮಾನ :
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.95 ಅಂಕ ಪಡೆದ ವಿದ್ಯಾರ್ಥಿಗಳಾದ ವಿಜ್ಞಾನ ವಿಭಾಗದಲ್ಲಿ ಆಯಿಷತ್ ಶಮೀಮ, ಅನುಪಮಾ ಪೈ, ಮೊಹಮ್ಮದ್ ಸಿನಾನ್ ಎ.ಎಸ್, ಜೆನಿಫರ್ ರೊವಿನಾ ಗೊನ್ಸಾಲ್ವಿಸ್, ವೆನಿಶಾ ಶೈಲಿ ಡಿ’ಸೋಜ, ಶ್ವೇತಲ್ ಶೆರಿನ್ ವೇಗಸ್, ಐರಲ್ ಕೆರೊಲಿನ್ ಡಿ’ಸೋಜ, ಜಿಶಾ ಎಂ.ಪಿ, ಪ್ರಜ್ವಲ್ ಸಿ.ಪಿ, ವಾಣಿಜ್ಯ ವಿಭಾಗದಲ್ಲಿ ನಿಶಾ ಭಟ್, ಶ್ರೀಲಕ್ಷ್ಮೀ ಭಟ್, ಹೃತ್ವಿಕ್ ಆನ್ಸಿ ಡಿ’ಸೋಜ, ಮೈತ್ರಿ ಕೆ.ಬಿ, ಕೌಶಿಕ್ ಮಯ್ಯ, ಶಮಾ ಟಿ.ಕೆ ಅರ್ಚನಾ ಡಿ, ದೀಪಾ ಸಿ.ಭಟ್‌ರವರನ್ನು ಸನ್ಮಾನಿಸಲಾಯಿತು.