ಫಿಲೋಮಿನಾ ಪಿಯು ಕಾಲೇಜ್‌ನಲ್ಲಿ ವೃತ್ತಿಪರ ಕೋರ್ಸ್‌ಗಳ ಉದ್ಘಾಟನೆ

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನು ಆಗಬೇಕೆನ್ನುವುದು ಗುರಿ ಇಟ್ಟುಕೊಳ್ಳುವುದು ಸಹಜ. ಆದರೆ ಅಧ್ಯಯನ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತನ್ನ ಅಧ್ಯಯನದಲ್ಲಿ ನಿಜವಾದ ಆಸಕ್ತಿಯನ್ನು ಬೆಳೆಸಿಕೊಂಡಾಗ ಜೀವನದ ಗುರಿಯು ತೆರೆದುಕೊಳ್ಳುತ್ತದೆ ಎಂದು ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಹೇಳಿದರು.

ಅವರು ಜೂ.30 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನಲ್ಲಿ ಆರಂಭಿಸಲಾದ ವೃತ್ತಿಪರ ಕೋರ್ಸ್‌ಗಳಾದ ಸಿಇಟಿ, ನೀಟ್ ಮತ್ತು ಜೆಇಇ ಕೋರ್ಸ್‌ಗಳ ಕೋಚಿಂಗ್ ಕ್ಲಾಸ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಸೀಟ್ ಸಿಗಬೇಕೆನ್ನುವ ಆಶಯದಿಂದ ಕೇವಲ ಅಂಕಗಳತ್ತ ಗಮನ ಕೊಟ್ಟರೆ ಸಾಲದು. ಅಲ್ಲದೆ ಅಧ್ಯಯನ ಸಂದರ್ಭದಲ್ಲಿ ವಿಷಯವನ್ನು ಕೇವಲ ಕಂಠಪಾಠ ಮಾಡಿದರೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಬದಲಾಗಿ ವಿಷಯಗಳ ಬಗ್ಗೆ ಅರ್ಥೈಸಿಕೊಂಡು ಅದರ ಸೂಕ್ಷ್ಮತೆಯನ್ನು ಅರಿಯುವವರಾಗಬೇಕು ಮಾತ್ರವಲ್ಲದೆ ನಿರಂತರ ಓದುವ ಪ್ರಕ್ರಿಯೆಯನ್ನು ಬೆಳೆಸಿಕೊಂಡಾಗ ಎಂದಿಗೂ ಸೋಲಾಗಲು ಸಾಧ್ಯವಿಲ್ಲ ಎಂದ ಅವರು ಹೊಸ ಹೊಸ ವಿಷಯಗಳನ್ನು ಕಲಿತುಕೊಂಡು ಆ ಮೂಲಕ ಅಲೋಚನೆಗಳ ಅವಿಷ್ಕಾರಗಳಾಗಬೇಕು. ಇವೆಲ್ಲವನ್ನು ಸಾಧಿಸಬೇಕಾದರೆ ಕಠಿಣ ಪರಿಶ್ರಮ, ಶಿಸ್ತು ಮತ್ತು ಆಸಕ್ತಿ ಇರಬೇಕಾಗುತ್ತದೆ ಎಂದರು. ಮಾನವೀಯ ಮೌಲ್ಯದೊಂದಿಗೆ ಧನಾತ್ಮಕ ಚಿಂತನೆಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸುವಂತಾಗಬೇಕು ಎಂದು ಅವರು ಹೇಳಿದರು.

ಪ್ರಥಮ ಸಿಇಟಿ ಪರೀಕ್ಷಾ ಕೇಂದ್ರವೆಂಬ ಹೆಗ್ಗಳಿಕೆ-ವಂ|ವಿಜಯ್:
ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆತಂಕದ ಕ್ಷಣಗಳೊಂದಿಗೆ ಅನೇಕ ಕಠಿಣ ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ. ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕಾದರೆ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಕಠಿಣ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಸಿ.ಇ.ಟಿ ಪರೀಕ್ಷೆ ಆರಂಭವಾದಾಗಿನಿಂದ ಪುತ್ತೂರು ತಾಲೂಕಿನಲ್ಲಿ ಅಂದಿನ ದಿನಗಳಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಹಾಗೂ ಕೋಚಿಂಗ್ ಪಡೆಯಲು ಫಿಲೋಮಿನಾ ಕಾಲೇಜ್‌ನಲ್ಲಿ ಅವಕಾಶ ಮಾಡಲಾಗಿದ್ದು ಪ್ರಥಮ ಸಿಇಟಿ ಪರೀಕ್ಷಾ ಕೇಂದ್ರವೆಂಬ ಹೆಗ್ಗಳಿಕೆಯನ್ನು ಫಿಲೋಮಿನಾ ಸಂಸ್ಥೆಯು ಪಡೆದಿದೆ ಎಂದು ಅವರು ಹೇಳಿದರು.

ವೃತ್ತಿಪರ ಕೋರ್ಸ್‌ಗಳ ನಿರ್ದೇಶಕ ಉಪನ್ಯಾಸಕರಾದ ಗೋವಿಂದ ಪ್ರಕಾಶ್ ಹಾಗೂ ರವಿಪ್ರಸಾದ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಿಯೋನಾ ಮೊಂತೇರೋ ಮತ್ತು ಬಳಗ ಪ್ರಾರ್ಥಿಸಿದರು. ವಂದನಾ ಗೋವಿಯಸ್ ಸ್ವಾಗತಿಸಿ, ಅವನಿ ವಂದಿಸಿದರು. ಜ್ಯೋಸ್ನಾ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಯಶಸ್ಸು ಎನ್ನುವುದು ಕೂಡಲೇ ದೊರೆಯುವ ವಸ್ತುವಲ್ಲ. ಅದಕ್ಕೆ ನಿರಂತರವಾದ ಪರಿಶ್ರಮ ಬೇಕಾಗುತ್ತದೆ. ಉದಾಹರಣೆಯಾಗಿ ಬಲ್ಬ್‌ನ್ನು ಕಂಡುಹಿಡಿದ ಥಾಮಸ್ ಆಳ್ವ ಎಡಿಸನ್ ಎಂಬವರು ಒಮ್ಮೆಲೇ ಬಲ್ಬ್‌ನ್ನು ಕಂಡುಹಿಡಿದವರಲ್ಲ. ಬಲ್ಬ್‌ನ್ನು ಹೇಗಾದರೂ ಕಂಡುಹಿಡಿಯಲೇ ಬೇಕೆನ್ನುವ ಛಲದಿಂದ ಅದರ ಸೂಕ್ಷ್ಮತೆಗಳನ್ನು ಮೊದಲು ಅರಿತು ಸಾವಿರಾರು ಸಲ ಫೈಲಾಗಿ ಕೊನೆಗೆ ಯಶಸ್ಸನ್ನು ಪಡೆದವರು. ಅದರಂತೆಯೇ ವಿದ್ಯಾರ್ಥಿಗಳು ಕೂಡ ಅವರಂತೆ ವಿಶ್ವಾಸ ಮತ್ತು ಛಲವನ್ನು ಮೈಗೂಡಿಸಿಕೊಂಡಾಗ ಯಶಸ್ಸು ಖಂಡಿತಾ ಸಿಗಲಿದೆ.
-ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಕ್ಯಾಂಪಸ್ ನಿರ್ದೇಶಕರು

ರೌಂಡ್ ಬಾಕ್ಸ್
175 ಮಂದಿ ನೋಂದಣಿ
ಈಗಾಗಲೇ 175 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಮೂರು ಬ್ಯಾಚ್‌ಗಳಲ್ಲಿ ಸಿಇಟಿ, ನೀಟ್ ಮತ್ತು ಜೆಇಇ ಕೋರ್ಸ್‌ಗಳ ಬಗ್ಗೆ ಕೋಚಿಂಗ್ ನೀಡಲಾಗುತ್ತದೆ. ಜುಲೈ 2ರಿಂದ ಕೋಚಿಂಗ್ ಕ್ಲಾಸ್ ಆರಂಭಗೊಳ್ಳಲಿದೆ ಎಂದು ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಹೇಳಿದ್ದಾರೆ.
ಕ್ಯಾರಪ್-ಮೊರಾಸ್