ಮಾನವೀಯ ಮೌಲ್ಯಗಳು – ಉಪನ್ಯಾಸ

ಭವ್ಯವಾದ ಭಾರತ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಮಾನವ ಸಂಪತ್ತು ಅಭಿವೃದ್ಧಿ ಹೊಂದಲು ಸಾಧ್ಯ. ಮೌಲ್ಯ ಶಿಕ್ಷಣವು ಕೇವಲ ಹಣ ಪ್ರಧಾನವಾದ ಶಿಕ್ಷಣವಾಗದೇ, ಗುಣ ಪ್ರಧಾನವಾದ ವ್ಯವಸ್ಥೆಯಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಹರಿದಾಸ ಬಿ.ಸಿ.ರಾವ್ ಶಿವಪುರ (ಹೆಬ್ರಿ) ಹೇಳಿದರು. ಅವರು ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ವಜ್ರ ಮಹೋತ್ಸವದ ಅಂಗವಾಗಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಮಾನವೀಯ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡುತ್ತಾ ಮಾತನಾಡಿದರು.

ಮಾನವ ಎಂದರೆ ತಿಳುವಳಿಕೆ ಉಳ್ಳವ. ಆತ ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಶಿಕ್ಷಣ ಎಂದರೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತರುವಂಥದ್ದು. ಶಿಕ್ಷಕರು ಶಾಲೆಗಳಲ್ಲಿ ತಮ್ಮ ಪಾಠದ ಅವಧಿಯಲ್ಲಿ ಕೆಲವು ನಿಮಿಷಗಳಾದರೂ ಕನಿಷ್ಠ ಕೆಲವು ಮೌಲ್ಯಗಳನ್ನಾದರೂ ಮಕ್ಕಳಿಗೆ ತಿಳಿಯಪಡಿಸಿದಾಗ ಖಂಡಿತ ನಮ್ಮ ಭಾರತ ದೇಶವು ಮಿನುಗಲು ಸಾಧ್ಯ. ನಾವು ಜೀವನದಲ್ಲಿ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಸಾರ್ಥಕ ಬದುಕನ್ನು ಕಾಣಲು ಸಾಧ್ಯ ಎಂದು ನುಡಿದರು.

ಆದ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ವಿಜಯ್ ಲೋಬೊರವರು ಮಾತನಾಡುತ್ತಾ ಮಾನವನ ಬಾಳಿನಲ್ಲಿ ರಕ್ಷಿಸಿಕೊಂಡು ಬರಬೇಕಾದ ಹಿರಿದಾದ ಮತ್ತು ಮಹತ್ವವಾದ ಸಂಪತ್ತು ಎಂದರೆ ಅವನ ವ್ಯಕ್ತಿತ್ವ. ಒಂದು ಹೂವಿಗೆ ಸುವಾಸನೆಯಂತೆ ಒಬ್ಬ ವ್ಯಕ್ತಿಗೆ ವ್ಯಕ್ತಿತ್ವ ಅತೀ ಮುಖ್ಯವಾದದ್ದು. ವ್ಯಕ್ತಿತ್ವದ ಕಳಸಕ್ಕೆ ಶೋಭೆಯಂತಿರುವುದು ಜೀವನದ ಮೌಲ್ಯಗಳು. ನಾವು ನಿತ್ಯವೂ ನೋಡುತ್ತಿರುವ ಸಂಗತಿಗಳು, ಅದರಲ್ಲೂ ಕೂಡ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುವಂತಹ ವಿಷಯಗಳು ನಮ್ಮಲ್ಲಿ ಮಾನವೀಯ ಮೌಲ್ಯಗಳ ಅಧಃಪತನಕ್ಕೆ ಹಿಡಿದ ಕನ್ನಡಿಯಂತಿದೆ. ಇಂದಿನ ನಮ್ಮ ಪರಿಸ್ಥಿತಿಯು ಸುಧಾರಿಸಬೇಕಾದರೆ ನೈತಿಕ ಹಾಗೂ ಮಾನವೀಯ ಮೌಲ್ಯಗಳಿಗೆ ಗೌರವವನ್ನು ಕೊಟ್ಟು ಪರಸ್ಪರರಿಗೆ ಸಹಕಾರ ನೀಡುವಂತಹ ಸಾರಯುತ ಸಮೃದ್ಧ ಸಮಾಜದ ನಿರ್ಮಾಣವಾಗಬೇಕು ಎಂದರು.

ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮನಾ ಪ್ರಶಾಂತ್, ಕನ್ನಡ ಉಪನ್ಯಾಸಕರಾದ ಶ್ರೀ ರಾಮ ನಾಯ್ಕ್, ಶ್ರೀಮತಿ ಉಷಾ ಯಶವಂತ್ ಹಾಗೂ ಕಾಲೇಜಿನ ಇತರ ಉಪನ್ಯಾಸಕ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಯಪ್ರಕಾಶ್ ಪ್ರಾರ್ಥನೆಗೈದರು, ವಿಲಿಯಂ ಸಂತೋಷ್ ಸ್ವಾಗತಿಸಿ, ಪ್ರಥಮ್ ವಂದಿಸಿದರು. ಶರಧಿ ಕಾರ್ಯಕ್ರಮ ನಿರ್ವಹಿಸಿದರು.