ಭೌತಿಕ ತರಗತಿಗಳಿಗೆ ಸಂಪೂರ್ಣ ಸಿದ್ಧಗೊಂಡ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು

ಕರ್ನಾಟಕ ಸರಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶದನ್ವಯ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ 2021 ಜನವರಿ 1ರಿಂದ ಭೌತಿಕವಾಗಿ (offline) ತರಗತಿಗಳು ಆರಂಭವಾಗಲಿದ್ದು, ಸಂಸ್ಥೆಯು ಸರಕಾರ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ(SOP)ದನ್ವಯ ಸಂಪೂರ್ಣ ಸಜ್ಜಾಗಿದೆ.
ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ವಿದ್ಯಾರ್ಥಿಗಳು ಹೆತ್ತವರ ಅನುಮತಿ ಪತ್ರವನ್ನು ಕಡ್ಡಾಯವಾಗಿ ತರಬೇಕಾಗಿದ್ಧು, ಇದರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಇಲ್ಲವೆಂಬುದನ್ನು ಹೆತ್ತವರು ದೃಢೀಕರಿಸಬೇಕಾಗಿದೆ. ತರಗತಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡಿದ್ದು, ಕಾಲೇಜಿನ ಬೋಧನಾ ಕೊಠಡಿ, ಪ್ರಯೋಗಾಲಯಗಳು ಹಾಗೂ ಇನ್ನಿತರ ಸ್ಥಳಗಳನ್ನು 1% ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣದಿಂದ ಸ್ಯಾನಿಟೈಸ್ ಮಾಡಲಾಗಿದೆ.
ಕಾಲೇಜಿನ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದ್ದು, ಸೋಪ್ ಮತ್ತು ಹ್ಯಾಂಡ್ ವಾಷ್ ನ ವ್ಯವಸ್ಥೆಯನ್ನು ಮಾಡಲಾಗಿದೆ. ತರಗತಿಗಳಿಗೆ ಹಾಜರಾಗಲು ಆಗಮಿಸುವ ವಿದ್ಯಾರ್ಥಿಗಳು ಗುಂಪು ಸೇರದಂತೆ ಜಾಗರೂಕತೆ ವಹಿಸಲು ಹಾಗೂ ವಿದ್ಯಾರ್ಥಿಗಳ ಚಲನವಲನಗಳ ಮೇಲೆ ವಿಶೇಷ ನಿಗಾ ವಹಿಸಲು ಹಿರಿಯ ಉಪನ್ಯಾಸಕರನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಲಾಗಿದೆ.
ಕಾಲೇಜಿನ ಹೊರಾಂಗಣದ ನೆಲದ ಮೇಲೆ ಆರು ಅಡಿಗಳ ಅಂತರದಲ್ಲಿ ಗುರುತು ಹಾಕಿ ಎಲ್ಲಾ ವಿದ್ಯಾರ್ಥಿಗಳು ಸಾಲಿನಲ್ಲಿ ಚಲಿಸಲು ಅನುವು ಮಾಡಿಕೊಡಲಾಗುವುದು. ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಪ್ರವೇಶಿಸಲು ದ್ವಾರಗಳನ್ನು ನಿರ್ಧರಿಸಲಾಗಿದ್ದು, ಇಲ್ಲಿ hand sanitizer ಮತ್ತು Face guardನ ವ್ಯವಸ್ಥೆಯನ್ನು ಮಾಡಲಾಗಿದೆ.
ಇಲಾಖೆ ಹೊರಡಿಸಿದ ನಿಯಮದನ್ವಯ ಪ್ರತಿ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಗಮನವನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಇತರರಿಂದ ಪ್ರತ್ಯೇಕಿಸಲು ವಿಶೇಷವಾದ ಕೊಠಡಿಗಳನ್ನು ಗುರುತಿಸಲಾಗಿದ್ದು, ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯುವ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ.
ತರಗತಿಗಳು ನಡೆಯುವ ಸಮಯದಲ್ಲಿ ಉಪನ್ಯಾಸಕರು mask ಮತ್ತು face guard ಗಳನ್ನು ಬಳಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಎಲ್ಲಾ ಮುಂಜಾಗರೂಕತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ
30/12/2020 ರಂದು ಆನ್ಲೈನ್ ಮೂಲಕ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಹೆತ್ತವರ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ನೆನಪಿಸುವುದರ ಜೊತೆಗೆ ಕಾಲೇಜು ಕೈಗೊಂಡ ಪೂರ್ವತಯಾರಿಯ ಬಗ್ಗೆ ಜಾಗೃತಿ ಮೂಡಿಸಲಾಗುವುದು.

ಬಾಕ್ಸ್
ಲಾಕ್ ಡೌನ್ ಸಂದರ್ಭದಲ್ಲಿ ಆನ್ಲೈನ್ ತರಗತಿಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಸ್ಪಂಧಿಸಿದ ಕಾಲೇಜು, ಇಂದು ಭಯಮುಕ್ತ ವಾತಾವರಣದಲ್ಲಿ ಕಲಿಯಲು ಬೇಕಾದ ಎಲ್ಲಾ ಪೂರ್ವತಯಾರಿಗಳನ್ನು ಮಾಡಿಕೊಂಡಿದ್ದು, ಹೆತ್ತವರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸಜ್ಜಾಗಿದೆ.
ರೆ. ಫಾ. ವಿಜಯ್ ಲೋಬೋ
ಪ್ರಾಂಶುಪಾಲರು, ಸಂತ ಫಿಲೋಮಿನ ಪದವಿಪೂರ್ವ ಕಾಲೇಜು ಪುತ್ತೂರು