ಫಿಲೋಮಿನಾ ಪಿಯು ಕಾಲೇಜಿನಲ್ಲಿ ರ್ಯಾಂಕ್, ಡಿಸ್ಟಿಂಕ್ಷನ್ ವಿಜೇತರಿಗೆ ಸನ್ಮಾನ

ಜೀವನದಲ್ಲಿ ನಮ್ರತೆ, ಸರಳತೆ ಮೈಗೂಡಿಸಿ ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಿ-ವಂ|ಲಾರೆನ್ಸ್

ಪುತ್ತೂರು: ಜೀವನದಲ್ಲಿ ವೈಫಲ್ಯ ಹೊಂದಿದಾಗ ಧೃತಿಗೆಡದೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಮುನ್ನುಗ್ಗಿದಾಗ ಯಶಸ್ಸು ಒಲಿಯುವುದು ಖಂಡಿತಾ. ವಿದ್ಯಾರ್ಥಿಗಳು ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಿದ ಸಂದರ್ಭದಲ್ಲಿ ನಮ್ರತೆ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡು ಒಳ್ಳೆಯ ವ್ಯಕ್ತಿ ಎನಿಸಿಕೊಂಡಾಗ ಸಮಾಜವೂ ಅವರನ್ನು ಗೌರವದ ಭಾವನೆಯಿಂದ ಕಾಣುತ್ತಾರೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರು ಹೇಳಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ದ.15 ರಂದು ನಡೆದ 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತರಿಗೆ ಸನ್ಮಾನ ಮತ್ತು ಡಿಸ್ಟಿಂಕ್ಷನ್ ವಿಜೇತರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಸಾಧನೆ ಮಾಡಿದಾಗ ಸಾಧನೆ ಮಾಡಿದ ವಿದ್ಯಾರ್ಥಿಗಳ ಹೆತ್ತವರಿಗೆ, ಬೋಧಿಸಿದ ಉಪನ್ಯಾಸಕರಿಗೆ ಹಾಗೂ ಸಂಸ್ಥೆಗೆ ಬಹಳ ಹೆಮ್ಮೆಯ ವಿಷಯವೆನಿಸುತ್ತದೆ. ಜೀವನದಲ್ಲಿ ಹಣ ಗಳಿಸುವುದು ಅವಿಭಾಜ್ಯ ಅಂಗವಾಗಿದ್ದರೂ, ಮೊದಲು ನಮ್ಮಲ್ಲಿನ ಒಳ್ಳೆತನ ಹಾಗೂ ಪ್ರತಿಭೆಯನ್ನು ಪರಸ್ಪರ ಹಂಚಿಕೊಳ್ಳುವ ಸ್ವಭಾವ ನಮ್ಮದಾದಾಗ ದೇವರು ಕೃಪೆಯನ್ನು ತೋರಬಲ್ಲನು ಎಂದರು.

ಭಾವನಾತ್ಮಕ ಸ್ಥಿರತೆಯೊಂದಿಗೆ ಶಕ್ತಿಯು ಹೊರಹೊಮ್ಮಲಿ-ಪ್ರೊ|ಲಿಯೋ:
ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|ಲಿಯೋ ನೊರೋನ್ಹಾರವರು ಮಾತನಾಡಿ, ಜೀವನದ ಗುರಿಯನ್ನು ತಲುಪುವಲ್ಲಿ ಸಾಕಷ್ಟು ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿನ ದೌರ್ಬಲ್ಯದಿಂದ ಹೊರಬಂದು ಭಾವನಾತ್ಮಕ ಸ್ಥಿರತೆಯನ್ನು ಗಟ್ಟಿ ಮಾಡಿಕೊಂಡಾಗ ನಮ್ಮಲ್ಲಿನ ಶಕ್ತಿಯು ಹೊರಹೊಮ್ಮಲು ಸಾಧ್ಯವಾಗುತ್ತದೆ ಮಾತ್ರವಲ್ಲದೆ ಜೀವನದಲ್ಲಿನ ಗಂಭೀರತೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಾಗಬೇಕಾದ ಗುರುತರ ಜವಾಬ್ದಾರಿಯ ಹೊಣೆಗಾರಿಕೆಯೂ ಇದೆ ಎಂದರು.

ಯಾವುದೇ ಕ್ಷೇತ್ರ ಆರಿಸಿ, ಸಾಧನೆ ಮಾಡಿ-ಮೌರಿಸ್ ಮಸ್ಕರೇನ್ಹಸ್:
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್‍ರವರು ಮಾತನಾಡಿ, ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರಿಂದ ಸ್ಥಾಪಿತವಾದ ಈ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆಗೆ 62 ವರ್ಷಗಳ ಇತಿಹಾಸವಿದೆ. ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆಗೈದ ಡಿ.ವಿ ಸದಾನಂದ ಗೌಡ, ವಿನಯಕುಮಾರ್ ಸೊರಕೆ, ಜೆ.ಆರ್ ಲೋಬೋರವರು ರಾಜಕೀಯದಲ್ಲಿ ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿಯೂ ಅನೇಕ ಪ್ರತಿಭಾವಂತರು ಮಿಂಚಿರುವುದು ಸಂಸ್ಥೆಯ ಹಿರಿಮೆಗೆ ಸಾಕ್ಷಿಯಾಗಿದೆ. ಪ್ರಸಕ್ತ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರವನ್ನು ಆರಿಸಿರಲಿ, ಆಯಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಾ ಮುಂದುವರೆಯಿರಿ ಜೊತೆಗೆ ತಾನು ಕಲಿತ ಸಂಸ್ಥೆಯನ್ನು, ಕಲಿಸಿದ ಗುರುಗಳನ್ನು ಗೌರವಿಸುವಂತಾಗಬೇಕು ಎಂದರು.

ಪ್ರತಿಭೆಯನ್ನು ಗೌರವಿಸಿ, ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸುವಂತಾಗಲಿ-ವಂ|ಆ್ಯಂಟನಿ ಪ್ರಕಾಶ್:
ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಉತ್ತಮ ಅಂಕಗಳನ್ನು, ರ್ಯಾಂಕ್‍ಗಳನ್ನು ಗಳಿಸುವುದು ವಿದ್ಯಾರ್ಥಿಗಳು ಮಾಡಿದಂತಹ ಸತತ ಪರಿಶ್ರಮದಿಂದಾಗಿದೆ. ತಾನೂ ಕೂಡ ಗುರಿಯನ್ನು ಮುಟ್ಟಬಲ್ಲೆ, ಸಫಲನಾಗಬಲ್ಲೆ ಎಂಬ ಅಚಲ ವಿಶ್ವಾಸ ಎಲ್ಲರಲ್ಲೂ ಇರಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ, ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸುವಂತಾಗಲಿ ಎಂದರು.
ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸುಮನಾ ಪ್ರಶಾಂತ್ ಪ್ರಾರ್ಥಿಸಿದರು. ರ್ಯಾಂಕ್ ವಿಜೇತರಾದ ಸುಧನ್ವ ಶ್ಯಾಂ, ಅನೂಪ್ ಸ್ವರ್ಗ, ರಿತೇಶ್ ರೈ, ಡಿಸ್ಟಿಂಕ್ಷನ್ ವಿಜೇತರಾದ ಅನುಶ್ರೀ, ತನ್ವಿ, ಸತ್ಯಾತ್ಮ ಭಟ್‍ರವರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಸ್ವಾಗತಿಸಿ, ಉಪನ್ಯಾಸಕ ರಾಹುಲ್ ವಂದಿಸಿದರು. ಉಪನ್ಯಾಸಕಿಯರಾದ ದಿವ್ಯ ಹಾಗೂ ಗೀತಾ ಕುಮಾರಿರವರು ಡಿಸ್ಟಿಂಕ್ಷನ್ ವಿಜೇತರ ಹೆಸರನ್ನು ಓದಿದರು. ಉಪನ್ಯಾಸಕಿ ಸುಮಾ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್ರ್ಯಾಂಕ್ ವಿಜೇತರಿಗೆ ಸನ್ಮಾನ…
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಈ ಬಾರಿ ರಾಜ್ಯದಲ್ಲಿ ನಾಲ್ಕು ರ್ಯಾಂಕ್‍ಗಳು ಲಭಿಸಿದ್ದು, ವಿಜ್ಞಾನ ವಿಭಾಗದಲ್ಲಿ 591 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಆರನೇ ಸ್ಥಾನ ಹಾಗೂ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಸುಧನ್ವ ಶ್ಯಾಂ, ವಾಣಿಜ್ಯ ವಿಭಾಗದಲ್ಲಿ 590 ಅಂಕ ಗಳಿಸಿ ರಾಜ್ಯದಲ್ಲಿ ಎಂಟನೇ ರ್ಯಾಂಕ್, ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ರಿತೇಶ್ ರೈ ಹಾಗೂ ಅನೂಪ್ ಸ್ವರ್ಗರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಮತ್ತೋರ್ವೆ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ಎಂಟನೇ ರ್ಯಾಂಕ್ ಗಳಿಸಿದ ಶ್ರುತಿ ಯು.ಎಸ್‍ರವರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಸನ್ಮಾನ ಸಂದರ್ಭದಲ್ಲಿ ರ್ಯಾಂಕ್ ವಿಜೇತರ ಹೆತ್ತವರು ಉಪಸ್ಥಿತರಿದ್ದರು. ಸನ್ಮಾನಿತರ ಪರಿಚಯವನ್ನು ಉಪನ್ಯಾಸಕರಾದ ಪ್ರಶಾಂತ್ ಭಟ್ ಹಾಗೂ ಸಂಜಯ್‍ರವರು ನೆರವೇರಿಸಿದರು.
ರೌಂಡ್ ಬಾಕ್ಸ್ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 4 ರ್ಯಾಂಕ್‍ಗಳೊಂದಿಗೆ ಒಟ್ಟು 125 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ 60 ಮಂದಿ, ವಾಣಿಜ್ಯ ವಿಭಾಗದಲ್ಲಿ 59 ಮಂದಿ ಹಾಗೂ ಕಲಾ ವಿಭಾಗದಲ್ಲಿ ಈರ್ವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಲೇಜಿನ ಗಣಕಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ದೆಹಲಿಯ ಉನ್ನತ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರಕಿರುವ ಹಿನ್ನೆಲೆಯಲ್ಲಿ ತೆರಳುತ್ತಿರುವ ಹರ್ಷದ್ ಇಸ್ಮಾಯಿಲ್‍ರವರಿಗೆ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರು ಸ್ಮರಣಿಕೆ ನೀಡಿ ಗೌರವಿಸಿದರು.