ವಜ್ರ ಮಹೋತ್ಸವದ ಸಂಭ್ರಮ

ಸಮಾಜದ ಸೇವೆಯನ್ನೇ ತನ್ನ ಜೀವನದ ಧ್ಯೇಯವಾಗಿಸಿಕೊಂಡು ಬಾಳಿದ ಪರಮ ಪೂಜನೀಯ ರೆ| ಫಾ| ಮೊ| ಆ್ಯಂಟನಿ ಪತ್ರಾವೊ ಇವರ ದೂರದರ್ಶಿ ಚಿಂತನೆಯ ಫಲವಾಗಿ 1958ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಜನ್ಮತಾಳಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇಂದು ವಜ್ರಮಹೋತ್ಸವದ ಸಂಭ್ರಮವನ್ನಾಚರಿಸುತ್ತಿದೆ. ಕಳೆದ 60ವರ್ಷಗಳಲ್ಲಿ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಜೊತೆಗೆ ಕ್ರೀಡೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಗಮನಾರ್ಹ ಕೊಡುಗೆಯನ್ನು ನೀಡಿದೆ. 1958 ಜುಲೈ 1ರಂದು ರಾಷ್ಟ್ರಕವಿ ಕುವೆಂಪುರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಈ ಕಾಲೇಜು ಮುಂದಿನ ವರ್ಷಗಳಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದರ ಜೊತೆಗೆ, ಹಲವಾರು ಸಾಧಕರ ಕನಸುಗಳಿಗೆ ನೀರೆರೆದು, ಪೋಷಿಸಿ, ಹೆಮ್ಮರವಾಗಿಸಿದ ಕರ್ಮಭೂಮಿಯಾಗಿ ಗುರುತಿಸಲ್ಪಟ್ಟಿದೆ.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ವ್ಯವಹಾರ ಮುಂತಾದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ. 60 ವರ್ಷಗಳ ಸಾರ್ಥಕ ಶೈಕ್ಷಣಿಕ ಸೇವೆಯ ಸಿಂಹಾವಲೋಕನದ ಜೊತೆಗೆ, ಯಶಸ್ಸಿನ ಪ್ರತಿಯೊಂದು ಹೆಜ್ಜೆ ಗುರುತುಗಳನ್ನು ನೆನಪಿಸಿಕೊಂಡು, ವಜ್ರಮಹೋತ್ಸವದ ಸಂಭ್ರಮದ ದ್ಯೋತಕವಾಗಿ ಕಳೆದ ವರ್ಷ ಪೂರ್ತಿ ನಡೆದ ಸಡಗರದ ಆಚರಣೆಯಲ್ಲಿ ವೈವಿಧ್ಯಮಯವಾದ 60 ಕಾರ್ಯಕ್ರಮಗಳನ್ನು ಸಂಸ್ಥೆಯು ಹಮ್ಮಿಕೊಂಡಿತ್ತು. ಪ್ರಮುಖವಾಗಿ –

ಬೆಂಗಳೂರಿನ ಇಸ್ರೋ ಸಂಸ್ಥೆಯ ಖ್ಯಾತ ವಿಜ್ಞಾನಿ ಡಾ| ಬಿ. ಯಸೊಬ್ ಇವರು ‘ಬಾಹ್ಯಾಕಾಶ ನೌಕೆಗಳ ಉಡಾವಣೆ’ ಎನ್ನುವ ವಿಷಯದ ಬಗ್ಗೆ ಮಾತನಾಡಿ ಭಾರತದ ವೈಜ್ಞಾನಿಕ ಸಾಧನೆಯ ಬಗ್ಗೆ ಬೆಳಕು ಚೆಲ್ಲಿದರು. ಅಂತರಾಷ್ಟ್ರೀಯ ಖ್ಯಾತಿಯ ಶಿಕ್ಷಕ ಡಾ| ಗುರುರಾಜ ಕರ್ಜಗಿಯವರಿಂದÀ ಬೋಧನಾ ಕೌಶಲ್ಯಗಳ ಕುರಿತಾಗಿ ತರಬೇತಿ ಕಾರ್ಯಕ್ರಮವನ್ನು ಹಮ್ಕಿಕೊಳ್ಳಲಾಗಿತ್ತು. ಜೆ.ಸಿ.ಐ. ತರಬೇತುದಾರರಾದ ಹರಿದಾಸ ಬಿ.ಸಿ. ರಾವ್ ಶಿವಪುರ ಇವರಿಂದ ‘ಮಾನವೀಯ ಮೌಲ್ಯಗಳು’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಹಾಗೆಯೇ ‘ವಚನ ಸಾಹಿತ್ಯದ ಪ್ರಸ್ತುತತೆ’, ‘ವಿದ್ಯಾರ್ಥಿ-ವಿಜ್ಞಾನ-ವೈಚಾರಿಕತೆ, ‘ಆಹಾರ ಮತ್ತು ಆರೋಗ್ಯ, ‘ಸ್ವರಕ್ಷಣೆಯ ಕೌಶಲ್ಯಗಳು, ‘ಕಾನೂನು ಅರಿವು’, ‘ವ್ಯಕ್ತಿತ್ವ ವಿಕಸನ ಮತ್ತು ಮೌಲ್ಯಗಳು’, ‘ವೃತ್ತಿ ಮಾರ್ಗದರ್ಶನ ತರಬೇತೆ ಕಾರ್ಯಗಾರ’, ‘ಪರೀಕ್ಷಾ ತಯಾರಿ’, ‘ಇ-ಸಂಪನ್ಮೂಲಗಳು’, ‘ಭ್ರಷ್ಟಾಚಾರ ನಿಯಂತ್ರಣ ಕಾರ್ಯಗಾರ’ -ಹೀಗೆ ಹಲವಾರು ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ವಿಚಾರಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ವಜ್ರಮಹೋತ್ಸವದ ಸಂಭ್ರಮದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಪೂರಕವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಫ್-ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಹಾಗೂ ವಿದ್ಯಾರ್ಥಿಗಳಿಗೆ ಪರಿಸರ ಜನಜಾಗೃತಿ ಜಾಥವನ್ನು ಆಯೋಜಿಲಾಗಿತ್ತು.

ಕಾಲೇಜಿನ ರೋವರ್ಸ್ ರೇಂಜರ್ಸ್ ಘಟಕವು ಹಲವಾರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯು ಜಾಗೃತಗೊಳ್ಳುವಲ್ಲಿ ಸಹಕಾರಿಯಾಯಿತು.

ವಿದ್ಯಾರ್ಥಿಗಳಲ್ಲಿ ಸಾಹಿತಿಕ ಮತ್ತು ಸಾಂಸ್ಕøತಿಕ ಅಭಿರುಚಿ ಮೂಡುವ ದೃಷ್ಠಿಯಿಂದ ಫಿಲೋ ಸಿಂಚನ ಸಂಗೀತ ವೈಭವ, ಪ್ರತಿಭಾ ದಿನ ಹಾಗೂ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಹಲವಾರು ವರ್ಷಗಳಿಂದ ಗಮನಾರ್ಹ ಸಾಧನೆಯನ್ನು ದಾಖಲಿಸುತ್ತ ಬಂದಿರುವ ಕಾಲೇಜಿನ ಎನ್‍ಸಿಸಿ ಘಟಕವು ಕಳೆದ 4 ವರ್ಷಗಳಿಂದ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್.ಸಿ.ಸಿ. ಕೆಡೆಟ್‍ಗಳ ಭಾಗವಹಿಸುವಿಕೆಯನ್ನು ಖಾತರಿಪಡಿಸುತ್ತಿರುವುದರ ಮೂಲಕ ಕಾಲೇಜಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.

ವಜ್ರಮಹೋತ್ಸವದ ಅಂಗವಾಗಿ ನಡೆದ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಇದೇ ಬರುವ ಡಿಸೆಂಬರ್ 18, ಮಂಗಳವಾರ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಮಂಗಳೂರು ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಕಥೊಲಿಕ್ ಬೋರ್ಡ್ ಆಫ್ ಎಜ್ಯುಕೇಶನಿನ ಅಧ್ಯಕ್ಷರೂ ಆಗಿರುವ ಅತೀ ವಂ| ಡಾ| ಪೀಟರ್ ಪೌಲ್ ಸಲ್ಡಾನ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರಿನ ಸೈಂಟ್ ಆ್ಯಗ್ನೇಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ| ದೇವಿ ಪ್ರಭಾ ಆಳ್ವಾ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಥೊಲಿಕ್ ಬೋರ್ಡ್ ಆಫ್ ಎಜ್ಯುಕೇಶನಿನ ಕಾರ್ಯದರ್ಶಿ ವಂ| ಫಾ| ಆ್ಯಂಟನಿ ಎಂ. ಶೆರಾ, ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಲೆ| ಲಿಯೋ ನೊರೊನ್ಹಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಕಾಲೇಜಿನ ಸಂಚಾಲಕರಾಗಿರುವ ಅತಿ ವಂ| ಫಾ| ಆಲ್ಫ್ರೆಡ್ ಜೆ. ಪಿಂಟೊ, ಕ್ಯಾಂಪಸ್ ನಿರ್ದೇಶಕರಾದ ರೆ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಅವರ ಮಾರ್ಗದರ್ಶನ ಹಾಗೂ ಪ್ರಾಂಶುಪಾಲರಾದ ವಂ| ವಿಜಯ್ ಲೋಬೊ ಇವರ ನೇತೃತ್ವವು ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕ ವೃಂದದವರನ್ನು ಹುರಿದುಂಬಿಸಿತು.

(ಬಾಕ್ಸ್ )
ಶೈಕ್ಷಣಿಕ ಸಾಧನೆಯ ಜೊತೆಗೆ ಸಂಸ್ಥೆಯ ಕ್ರೀಡಾ ಕ್ಷೇತ್ರದಲ್ಲೂ ಕೂಡ ಉತ್ಕಷ್ಟವಾದ ಸಾಧನೆಯನ್ನು ದಾಖಲಿಸಿಕೊಂಡು ಬಂದಿದೆ. ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳಾದ ತ್ರಿಶೂಲ್ ಇವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಂತರಾಷ್ಟೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿರುತ್ತಾರೆ. ಸಿಂಚನಾ ಡಿ. ಗೌಡ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದ ಹೆಮ್ಮೆಯ ವಿದ್ಯಾರ್ಥಿನಿ. ಭವಿತ್ ಕುಮಾರ್ ಪೋಲ್ ವಾಲ್ಟ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ , ಪ್ರೀತಂ ರೈ ರಾಷ್ಟ್ರವಟ್ಟದಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಿದರೆ, ರಕ್ಷಾ ಅಂಚನ್ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 3ಕಿ.ಮೀ ನಡಿಗೆಯಲ್ಲಿ ಕಂಚಿನ ಪದಕ, ಟೆನ್ನಿ ಕೊಯಿಟ್‍ನಲ್ಲಿ ವೀರೇಶ್ ಎನ್. ವಿ., ಹಾಕಿಯಲ್ಲಿ ವಿಭಾ ಬಿದ್ದಪ್ಪ, ಹರ್ಷಿತ, ಜೇನ್, ನಿಶಾ ಕುಟಿನ್ಹಾ, ಕಿಶೋರ್, ಸಿಂಚನ ಗೌಡ, ತೃಪ್ತಿ ಈಜು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು.