ಆರಂಭೋತ್ಸವದ ಪ್ರಯುಕ್ತ ದಿವ್ಯ ಬಲಿಪೂಜೆ

ದೇವರಲ್ಲಿ ನಮ್ಮ ವಿಶ್ವಾಸವನ್ನು ಇಟ್ಟು ನಮ್ಮ ಕೆಲಸವನ್ನು ಮಾಡಿದಾಗ ಸಾಮಾನ್ಯರಾದ ನಾವು ಅಸಾಮಾನ್ಯವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ವಂ|ಸುನಿಲ್ ಜಾರ್ಜ್ ಡಿ’ಸೋಜರವರು ಹೇಳಿದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಆರಂಭೋತ್ಸವದ ಪ್ರಯುಕ್ತ ಮೇ.25 ರಂದು ದಿವ್ಯ ಚೇತನಾ ಚಾಪೆಲ್‍ನಲ್ಲಿ ನಡೆದ ದಿವ್ಯ ಚೇತನಾ ಸಂಘದ ವತಿಯಿಂದ ನಡೆದ ಉದ್ಘಾಟನಾ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಮಾತನಾಡಿದರು. ದೇವರು ಮತ್ತು ಧರ್ಮದ ಆಚರಣೆಯಲ್ಲಿ ನಂಬಿಕೆಯನ್ನು ಹೊಂದಿದಾಗ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ. ನಾವು ಯೇಸುವಿನ ಅನುಯಾಯಿಯಾಗಲು ಅವರ ಮೇಲೆ ಅಚಲ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದ ಅವರು ಕಳೆದ 61 ವರ್ಷಗಳ ಇತಿಹಾಸವಿರುವ ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಾ ಬಂದಿದೆ. ಜೀವನದಲ್ಲಿ ಪ್ರಾಮಾಣಿಕತೆ, ಸಮಗ್ರತೆ, ಸಹಿಷ್ಣುತೆಗಳಂತಹ ಗುಣಗಳನ್ನು ಅಳವಡಿಸಿಕೊಂಡಾಗ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಅವರು ಹೇಳಿದರು.

ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ನಾವು ಧರ್ಮವನ್ನು ಪಾಲಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಉತ್ತಮ ಧಾರ್ಮಿಕ ಭಾವನೆಗಳಿಂದ ಸ್ನೇಹ, ಪ್ರೀತಿ, ಸಹನೆ, ಬಾಂಧವ್ಯ, ಸಹಿಷ್ಣುತೆ, ವಿಶ್ವಾಸ ಮುಂತಾದ ಮಾನವೀಯ ಗುಣಗಳನ್ನು ಪಡೆಯಬಹುದು. ದೇವರು ನಮ್ಮ ಮಾರ್ಗದರ್ಶಕ ಹಾಗೂ ರಕ್ಷಕ. ವಿದ್ಯಾರ್ಥಿಗಳು ಜೀವನದಲ್ಲಿ ಏಕಾಗ್ರತೆಯನ್ನು ಬೆಳೆಸುವುದರ ಜೊತೆಗೆ ಶಿಸ್ತು ಮತ್ತು ಪ್ರಾರ್ಥನೆಗೆ ಒತ್ತು ನೀಡುವುದನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಂಸ್ಥೆಯಲ್ಲಿನ ಸಂಪನ್ಮೂಲತೆಗಳನ್ನು ಬಳಸಿಕೊಳ್ಳುವತ್ತ ಕ್ರಿಯಾಶೀಲರಾಗಬೇಕು. ಫಿಲೋಮಿನಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗೆ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗೂ ಬಹಳ ಒತ್ತು ನೀಡುತ್ತದೆ ಎಂದರು.

ದಿವ್ಯ ಬಲಿಪೂಜೆಯಲ್ಲಿ ಸಂಸ್ಥೆಯ ಉಪನ್ಯಾಸಕರುಗಳು, ಆಡಳಿತ ಸಿಬ್ಬಂದಿ ವರ್ಗದವರು ಹಾಗೂ ಸುಮಾರು 250ಕ್ಕೂ ಮಿಕ್ಕಿ ಕ್ರೈಸ್ತ ವಿದ್ಯಾರ್ಥಿಗಳು ಪಾಲ್ಗೊಂಡರು.