ಭ್ರಷ್ಟಾಚಾರ ನಿಯಂತ್ರಣ ಕಾರ್ಯಾಗಾರ

 

ಭ್ರಷ್ಟಾಚಾರ ಎಂಬುದು ಇಂದಿನ ದಿನಗಳಲ್ಲಿ ಮಹಾ ಪಿಡುಗು ಎನಿಸಿದೆ. ವಿದ್ಯಾವಂತರೇ ಈ ಭ್ರಷ್ಟಾಚಾರದಲ್ಲಿ ಭಾಗಿಗಳಾಗುತ್ತಿರುವುದು ವಿಷಾದನೀಯ ಸಂಗತಿ. ಭ್ರಷ್ಟಾಚಾರವನ್ನು ತಳಮಟ್ಟದಲ್ಲಿಯೇ ನಿಯಂತ್ರಣ ಮಾಡಬೇಕೆಂದರೆ ಪ್ರತಿಯೊಬ್ಬ ಸಹೃದಯಿ ನಾಗರಿಕರ ಸಹಕಾರ ಅಗತ್ಯ ಎಂದು ಪುತ್ತೂರು ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅಜೇಯ್ ಕುಮಾರ್‍ರವರು ಹೇಳಿದರು.

ಅವರು ನ.3 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ಪುತ್ತೂರು ನಗರ ಠಾಣೆಯ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹ ಸಪ್ತಾಹ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕುರಿತು ಮಾತನಾಡಿದರು. ಭ್ರಷ್ಟಾಚಾರವನ್ನು ಒಮ್ಮೆಗೆ ನಿಯಂತ್ರಿಸಲು ಸಾಧ್ಯವಿಲ್ಲ ನಿಜ. ಆದರೆ ವಿದ್ಯಾವಂತಾರಾಗಿರುವ ನಾವುಗಳು ಅಧಿಕಾರಿಗಳಿಗೆ ಹಣದ ಆಮಿಷ ತೋರಿಸದೆ ಕಾನೂನಾತ್ಮಕವಾಗಿ ಕೆಲಸವನ್ನು ಮಾಡುವಲ್ಲಿ ಸಹಕರಿಸುವಂತಾಗಬೇಕು. ಯಾರು ಲಂಚವನ್ನು ಸ್ವೀಕರಿಸಿ ಕೆಲಸ ಮಾಡುವವನು ಹೇಗೆ ಶಿಕ್ಷಗೆ ಅರ್ಹನೋ, ಲಂಚವನ್ನೂ ನೀಡಿ ಪ್ರೋತ್ಸಾಹಿಸುವವನೂ ಕೂಡ ಶಿಕ್ಷಗೆ ಅರ್ಹನೆನಿಸಿದ್ದಾನೆ ಎಂದ ಅವರು ಕಾನೂನಾತ್ಮಕವಾಗಿ ಕೆಲಸ ಮಾಡದೇ ಅಧಿಕಾರಿಗಳು ಯಾರಿಗಾದರೂ ಸತಾಯಿಸುತ್ತಾರೋ ಅವರಿಗೆ ಲಂಚ ತೆಗೆದುಕೊಳ್ಳುವ ಅಧಿಕಾರಿಯ ಸರಹದ್ದಿನಲ್ಲಿರುವ ಮೇಲಾಧಿಕಾರಿಗೆ ದೂರನ್ನು ನೀಡಬಹುದಾಗಿದೆ ಮಾತ್ರವಲ್ಲದೆ ದೂರನ್ನು ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಕಾಪಾಡಲಕಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಭ್ರಷ್ಟಾಚಾರ ಎಂಬುದು ಮಹಾ ಪಿಡುಗು. ಭ್ರಷ್ಟಾಚಾರವನ್ನು ತೊಲಗಿಸಲು ಪ್ರಜ್ಞಾವಂತ ನಾಗರಿಕರು ಪ್ರಯತ್ನಿಸಬೇಕಾಗಿದೆ. ಪೋಲಿಸ್ ಇಲಾಖೆಯು ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಇತ್ತೀಚೆಗಿನ ದಿನಗಳಲ್ಲಿ ಗಾಂಜಾ ಮುಂತಾದ ಮಾದಕ ದ್ರವ್ಯಗಳ ವ್ಯಸನಿಯಾಗುತ್ತಿರುವುದು ಖೇದಕರ ವಿಷಯವಾಗಿದೆ. ದೇಶದ ಪ್ರತಿಯೋರ್ವ ಪ್ರಜ್ಞಾವಂತ ನಾಗರಿಕ ಭ್ರಷ್ಟಾಚಾರ ಹಾಗೂ ಮಾದಕ ವ್ಯಸನದ ವಿರುದ್ಧ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಗಣಕ ವಿಜ್ಞಾನ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್ ಸ್ವಾಗತಿಸಿ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಸುಮನಾ ಪ್ರಶಾಂತ್, ವಾಣಿಜ್ಯ ವಿಭಾಗದ ರಾಹುಲ್, ನಗರ ಠಾಣೆಯ ಕಾನ್‍ಸ್ಟೇಬಲ್ ನಾಗೇಶ್, ಬೀಟ್ ಪೋಲೀಸ್ ಧನ್ಯರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಾಕ್ಸ್
ಸೂಕ್ಷ್ಮ ಪ್ರದೇಶ ಕಾವೇರಿಕಟ್ಟೆ….
ಪಿಯುಸಿ ಹಂತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ದ್ವಿಚಕ್ರವನ್ನು ತರುತ್ತಿದ್ದಾರೆ ಮಾತ್ರವಲ್ಲದೆ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಇಲ್ಲದೆ, ಮೂರು ಮೂರು ಮಂದಿ ಪ್ರಯಾಣಿಸುತ್ತಿದ್ದಾರೆ ಇದಕ್ಕೆ ಕಡಿವಾಣ ಬೀಳಬೇಕು. ಯಾಕೆಂದರೆ ಪಿಯುಸಿ ವಿದ್ಯಾರ್ಥಿಗಳಿಗೆ ವಯಸ್ಸು 18 ತುಂಬದಿರುವುದೇ ಕಾರಣವಾಗಿದೆ. ದರ್ಬೆ ಕಾವೇರಿಕಟ್ಟೆ ಎಂಬಲ್ಲಿನ ಕೆಲವು ಅಂಗಡಿಗಳಲ್ಲಿ ಗಾಂಜಾ ಎಂಬ ಮಾದಕ ದ್ರವ್ಯಗಳ ಮಾರಾಟ ಮಾಡುತ್ತಿರುವ ಗುಮಾನಿ ಇದೆ. ಗಾಂಜಾ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅಂಗಡಿ ಮಾಲಕರೇ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ದರ್ಬೆ ಕಾವೇರಿಕಟ್ಟೆ ಬಳಿ ಸಿಸಿ ಕ್ಯಾಮೆರಾದ ಅಳವಡಿಕೆ ಅಗತ್ಯ ಬಹಳ ಇದೆ. ಇಲ್ಲಿ ವಿದ್ಯಾರ್ಥಿಗಳು ಕ್ಲಾಸ್‍ಗೆ ಬಂಕ್ ಹೊಡೆದು ಸೂಕ್ಷ್ಮ ಪ್ರದೇಶ ಎಂದು ಕರೆದುಕೊಳ್ಳುತ್ತಿರುವ ಈ ಪ್ರದೇಶದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಇವುಗಳಿಗೆ ಕಡಿವಾಣವಾಗಬೇಕಿದೆ ಎಂದು ಸಭೆಯಲ್ಲಿ ಉಪನ್ಯಾಸಕರು ಆಗ್ರಹ ವ್ಯಕ್ತಪಡಿಸಿದ್ದಾರೆ.