ವೃತ್ತಿ ಮಾರ್ಗದರ್ಶನ ಶಿಬಿರ

ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಅದು ಒಮ್ಮಿಂದೊಮ್ಮೆಲೇ ಸಾಧ್ಯವಿಲ್ಲ. ಕಠಿಣ ಪರಿಶ್ರಮ, ಏಕಾಗ್ರತೆ, ಪ್ರಾಮಾಣಿಕತೆ ಮತ್ತು ತಾಳ್ಮೆ ಇದ್ದಾಗ ನಮ್ಮಲ್ಲಿನ ಗುರಿ ಸಾಧನೆ ಸಾಧ್ಯ. ಆದ್ದರಿಂದ ನಮ್ಮಲ್ಲಿರುವ ಕೌಶಲ್ಯಯುಕ್ತ ಶಕ್ತಿಯನ್ನು ನಾವು ಮೊದಲು ಅರಿಯುವಂತಾಗಬೇಕಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕೌನ್ಸಿಲರ್ ಕುಶಲತಾರವರು ಹೇಳಿದರು.

ಅವರು ಸೆ.3 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವ್ಯಕ್ತಿತ್ವ ವಿಕಸನ ಸಂಘದ ವತಿಯಿಂದ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ `ವೃತ್ತಿ ಮಾರ್ಗದರ್ಶನ ಕಾರ್ಯಾಗಾರ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ದ್ವಿತೀಯ ಪಿಯುಸಿ ಹಂತ ಎಂಬುದು ವಿದ್ಯಾರ್ಥಿಗಳಿಗೆ ಜೀವನದ ನಿರ್ಣಾಯಕ ಘಟ್ಟವಾಗಿದೆ. ಈ ನಿರ್ಣಾಯಕ ಘಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ. ಆದರೆ ಪ್ರಸಕ್ತ ವಿದ್ಯಾಮಾನದಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದುದರಿಂದ ಅವರ ಉತ್ತಮ ಭವಿಷ್ಯಕ್ಕೆ ಹಿನ್ನೆಡೆಯಾಗಿದೆ. ಭವಿಷ್ಯದ ಬಗೆಗಿನ ಆಯ್ಕೆ ಸರಿಯಾದ ತಿಳುವಳಿಕೆಯಿಂದ ಕೂಡಿರಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ.ಡಿರವರು ಮಾತನಾಡಿ, ಪಿಯುಸಿ ನಂತರ ಮತ್ತೇನು ಎಂಬುದನ್ನು ವಿದ್ಯಾರ್ಥಿಗಳು ಸರಿಯಾಗಿ ನಿರ್ಧರಿಸದೆ ಒತ್ತಡಗೊಳಗಾಗುವುದು ಸಹಜವಾಗಿದೆ. ಪ್ರಸಕ್ತ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿಸುವ ನಿಟ್ಟಿನಲ್ಲಿ ಅನೇಕ ಕ್ಷೇತ್ರಗಳಿವೆ. ಆದರೆ ಆಯ್ಕೆ ಎಂಬುದು ಮಾತ್ರ ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು. ನನ್ನಿಂದ ಯಾವುದೂ ಸಾಧ್ಯವಿಲ್ಲ ಎಂಬುದನ್ನು ನಾವೂ ಯಾವತ್ತೂ ತಿಳಿದುಕೊಳ್ಳಬಾರದು ಬದಲಾಗಿ ನಾನು ಇದಕ್ಕೆ ಅರ್ಹನಾಗಿದ್ದೇನೆ ಎಂಬ ಭಾವನೆ ಗಟ್ಟಿಯಾಗಿ ನೆಲೆಯೂರಬೇಕು ಎಂದು ಹೇಳಿದರು.

ವ್ಯಕ್ತಿತ್ವ ವಿಕಸನ ಸಂಘದ ನಿರ್ದೇಶಕರಾದ ಗೋವಿಂದ ಪ್ರಕಾಶ್‍ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಞಾನವನ್ನು ಸಂಪಾದಿಸಿಕೊಳ್ಳುವುದು ಮತ್ತು ಅವನ್ನು ಹೇಗೆ ಬಳಸಿಕೊಳ್ಳುವುದು ಎಂಬುದು ವಿದ್ಯಾರ್ಥಿಯ ಗುಣಮಟ್ಟವನ್ನು ತೋರಿಸುತ್ತದೆ ಮಾತ್ರವಲ್ಲದೆ ಸಮಾಜದ ಓವ ಜವಾಬ್ದಾರಿಯುತ ನಾಗರಿಕನೆನೆಸಿಕೊಳ್ಳಲು ಪೂರಕವಾಗಿರುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ಬೆರಳಿನ ತುದಿಯಲ್ಲಿಯೇ ಸಾಕಷ್ಟು ಮಾಹಿತಿಗಳನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ದೊರೆತಲ್ಲಿ ವಿದ್ಯಾರ್ಥಿಯಲ್ಲಿ ಸರ್ವಾಂಗೀಣ ಬೆಳವಣಿಗೆಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

ರೇಚಲ್ ಮತ್ತು ಬಳಗ ಪ್ರಾರ್ಥಿಸಿದರು. ವ್ಯಕ್ತಿತ್ವ ವಿಕಸನ ಸಂಘದ ಸಹ ನಿರ್ದೇಶಕ ಹರ್ಷದ್ ಇಸ್ಮಾಯಿಲ್ ಸ್ವಾಗತಿಸಿ, ಕ್ಯಾಲಿನ್ ಡಿ’ಸೋಜ ವಂದಿಸಿದರು. ಅಲ್ವಿರಾ ಅನ್ಸಿಟ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.