ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಉದ್ಘಾಟನಾ ಕಾರ್ಯಕ್ರಮ

ಮಾನವ ತನ್ನ ವಿಶಿಷ್ಟ ಆಲೋಚನೆಗಳನ್ನು ಕಾರ್ಯಗತಗೊಳಿಸಿ ಬಹಳಷ್ಟು ಸಾಧಿಸಿದ್ದಾನೆ. ಕೇವಲ ಪುಸ್ತಕಗಳನ್ನು ಓದಿದ ಮಾತ್ರಕ್ಕೆ ಏನನ್ನೂ ಸಾಧಿಸಲು ಸಾಧ್ಯವಾಗದು. ವಿಜ್ಞಾನ ಕ್ಷೇತ್ರದಲ್ಲಿನ ವೃತ್ತಿಪರ ಕೋರ್ಸ್‌ಗಳಾದ ಸಿಇಟಿ ಹಾಗೂ ನೀಟ್ ಪರೀಕ್ಷೆಗಳಲ್ಲಿ ಯಾರು ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಾರೋ ಅವರ ಭವಿಷ್ಯ ಸಾಕಾರಗೊಳ್ಳಬಲ್ಲುದು ಎಂದು ಸಂತ ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕರಾದ ವಂ|ಆಂಟನಿ ಪ್ರಕಾಶ್ ಮೊಂತೇರೋರವರು ಹೇಳಿದರು.

ಅವರು ಜೂ.23 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನಲ್ಲಿ ವೃತ್ತಿ ಮಾರ್ಗದರ್ಶನ ಘಟಕದ ವತಿಯಿಂದ ಶೈಕ್ಷಣಿಕ ವರ್ಷದ ವೃತ್ತಿಪರ ಕ್ಷೇತ್ರಗಳಾದ ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಫಿಲೋಮಿನಾ ಸಂಸ್ಥೆಯು ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿದೆ. ಧನಾತ್ಮಕ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಮೈಗೂಡಿಸಿಕೊಂಡಾಗ ನಾವು ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಎಲೆಕ್ಟ್ರೋನಿಕ್ ಮಾಧ್ಯಮಗಳಾದ ಸಿ.ಡಿ, ಡಿವಿಡಿ ಹಾಗೂ ಹಾರ್ಡ್ ಡಿಸ್ಕ್‌ಗಳು ಕೇವಲ ಮಾಹಿತಿಗಳನ್ನು ಸಂಗ್ರಹಿಸುವ ಸಾಧನಗಳಾಗಿವೆ. ಸಿಡಿ, ಡಿವಿಡಿ ಮುಂತಾದ ಸಾಧನಗಳು ಮಾನವನ ನೆರವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಎಂದ ಅವರು ಆದರೆ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಹಾಗೂ ಸ್ವ-ಪ್ರಯತ್ನದಿಂದ ಬಹಳಷ್ಟು ಅನ್ವೇಷಣೆ ಮಾಡುವ ಮೂಲಕ ವಿಶೇಷ ಶಕ್ತಿಯನ್ನು ತೋರ್ಪಡಿಸಿದ್ದಾನೆ ಮಾತ್ರವಲ್ಲದೆ ಸಿಇಟಿ ಪರೀಕ್ಷೆಯಲ್ಲಿನ ತಾರ್ಕಿಕ, ಮೆಮೋರಿ, ಕಾಮನ್‌ಸೆನ್ಸ್ ಹಾಗೂ ಪ್ರ್ಯಾಕ್ಟೀಸ್ ಬಗೆಗಿನ ಪ್ರಶ್ನಾವಳಿಗಳಿಗೆ ವಿದ್ಯಾರ್ಥಿಗಳು ತಯಾರಾಗಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರಯತ್ನ ಹಾಗೂ ಕಠಿಣ ಪರಿಶ್ರಮವಿದ್ದಾಗ ಯಾವುದೇ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ಕಳೆದ ವರ್ಷ ಶಶಾಂಕ್ ರೈರವರು ಸಿಇಟಿ ಹಾಗೂ ನೀಟ್ ಪರೀಕ್ಷೆಯಲ್ಲಿನ ಅತ್ತ್ಯುತ್ತಮ ಸಾಧನೆಯನ್ನು ಮಾಡಿರುವುದು ಆತನ ಸತತ ಪ್ರಯತ್ನದಿಂದ. ವಿದ್ಯಾರ್ಥಿಗಳು ಕಾಲೇಜ್‌ನಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿ ಸಾಧನೆಗೈಯಬೇಕು ಎಂದು ಹೇಳಿದರು.

ಸಿಇಟಿ/ನೀಟ್ ಘಟಕದ ಸಂಯೋಜಕರಾದ ಉಪನ್ಯಾಸಕ ಗೋವಿಂದ ಪ್ರಕಾಶ್‌ರವರು ಸ್ವಾಗತಿಸಿ, ಉಪನ್ಯಾಸಕ ಹರ್ಷದ್ ಇಸ್ಮಾಯಿಲ್ ವಂದಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀದೇವಿ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಡೆಲ್ಮಾ ಲೋರಾ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.