ಸಿ.ಎ ತರಬೇತಿ ಕಾರ್ಯಾಗಾರ

ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವ ಪ್ರಕ್ರಿಯೆಯಾಗದೆ ವಿದ್ಯಾರ್ಥಿಯ ವ್ಯಕ್ತಿತ್ವ ನಿರ್ಮಾಣ ಮಾಡುವ ಕ್ರಿಯೆಯಾಗಬೇಕು. ಜೀವನದಲ್ಲಿ ಹಲವಾರು ಆಯ್ಕೆಗಳು ನಮಗೆ ಸಿಗಲಿದ್ದು, ಭವಿಷ್ಯವನ್ನು ಉತ್ತಮವಾಗಿಸುವ ಆಯ್ಕೆಯನ್ನು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳು ಹೊಂದಿರಬೇಕಾಗುತ್ತದೆ ಎಂದು ಮಂಗಳೂರಿನ ತ್ರಿಶಾ ಕೋಚಿಂಗ್ ಸೆಂಟರ್‍ನ ಪ್ರಾಂಶುಪಾಲರಾದ ಸಿಎ ಗೋಪಾಲಕೃಷ್ಣ ಭಟ್ ಎನ್.ಎಸ್‍ರವರು ಹೇಳಿದರು.

ಅವರು ಜೂ.8 ರಂದು ಫಿಲೋಮಿನಾ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾಣಿಜ್ಯ ಸಂಘದ ಆಶ್ರಯದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ `ಚಾರ್ಟರ್ಡ್ ಎಕೌಂಟೆಂಟ್(ಸಿಎ)’ ವೃತ್ತಿ ಹಾಗೂ ಸಿಎ ವ್ಯಾಸಂಗದ ವಿವಿಧ ಹಂತಗಳ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಉತ್ತಮವಾದ ಚಿಂತನೆ ಪ್ರತಿಯೋರ್ವ ವ್ಯಕ್ತಿಯ ಯಶಸ್ಸಿಗೆ ಮೂಲ ಕಾರಣ. ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಹೆಚ್ಚು ಪ್ರಯತ್ನಗಳನ್ನು ಮಾಡುವುದರ ಜೊತೆಗೆ ನಾವು ಕೈಗೊಳ್ಳುವ ಪ್ರತಿಯೊಂದು ಕಾರ್ಯದಲ್ಲಿ ನಂಬಿಕೆ ಇರಬೇಕಾಗಿರುವುದು ಬಹಳ ಮುಖ್ಯ. ಪ್ರಸ್ತುತ ದಿನಗಳಲ್ಲಿ ವಾಣಿಜ್ಯ ವಿಭಾಗದಲ್ಲಿ ಸಾಕಷ್ಟು ಅವಕಾಶಗಳಿದ್ದು ಇದರಲ್ಲಿ ಸಿಎ ಕೋರ್ಸ್ ಕೂಡ ಉತ್ತಮ ಆಯ್ಕೆ ಎನಿಸಬಲ್ಲುದು ಎಂದು ಸಿಎ ಕಲಿಕೆಯ ವಿವಿಧ ಮಜಲುಗಳ ಬಗ್ಗೆ ವಿವರ ನೀಡಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ಹೊಂದಿರಬೇಕಾಗುತ್ತದೆ. ಪಿಯುಸಿ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಕಾಲಘಟ್ಟವಾಗಿದೆ. ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಗುರಿಯನ್ನು ಸಾಧಿಸುವಂತಾಗಬೇಕು. ವಾಣಿಜ್ಯ ವಿಭಾಗದಲ್ಲಿ ಇಂದು ವಿಫುಲವಾದ ಅವಕಾಶಗಳಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತಾಗಬೇಕು ಎಂದರು.

ವಾಣಿಜ್ಯ ಸಂಘದ ನಿರ್ದೇಶಕ ಉಪನ್ಯಾಸಕರಾದ ರಾಹುಲ್ ಕೆ, ಗೀತಾ ಕುಮಾರಿ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರುಗಳಾದ ಸಂಜಯ್, ಫಿಲೋಮಿನಾ ಮೊಂತೇರೋ, ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ, ಅನಿಲ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಧೀಮಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿಮಾಶ್ರೀ ವಂದಿಸಿದರು.