ಸಿಎ/ಸಿಪಿಟಿ ಕಾರ್ಯಾಗಾರ

ಬಹು ಬೇಡಿಕೆಯಲ್ಲಿರುವ ವೃತ್ತಿಪರ ಕೋರ್ಸ್‌ಗಳಲ್ಲೊಂದಾದ ಸಿಎ ಹಾಗೂ ಸಿಪಿಟಿ ಕೋರ್ಸ್‌ಗಳು ಸಾಕಷ್ಟು ವೆಚ್ಚವಿಲ್ಲದ ಹಾಗೂ ಸುಲಭದಾಯಕವಾಗಿದ್ದು, ಮಾತ್ರವಲ್ಲದೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕೈಗೆಟಕುವ ಕೋರ್ಸ್ ಕೂಡ ಆಗಿರುವ ಸಿಎ/ಸಿಪಿಟಿಯು, ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಈ ಕೋರ್ಸ್‌ಗಳನ್ನು ಕಲಿಯಬೇಕಾದರೆ ನಿರ್ದಿಷ್ಟವಾದ ಯೋಜನೆ ಮೂಲಕ ನಿರಂತರ ಪರಿಶ್ರಮದಿಂದ ಕಾರ್ಯಗತಗೊಳಿಸಿದಾಗ ಮಾತ್ರ ಸಾಧಿಸಲು ಸಾಧ್ಯವಿದೆ ಎಂದು ಮಂಗಳೂರಿನಲ್ಲಿ ಚಾರ್ಟರ್ಡ್ ಎಕೌಂಟೆಂಟ್ ಆಗಿರುವ,  ಸಿಎ ಜಗನ್ನಾಥ್ ಕಾಮತ್‌ ರವರು ಹೇಳಿದರು.

ಅವರು ಜೂ.27 ರಂದು ಕಾಲೇಜ್‌ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆದ ವೃತ್ತಿಪರ ಕೋರ್ಸ್‌ಗಳಾದ ಸಿಎ ಹಾಗೂ ಸಿಪಿಟಿ ಕೋರ್ಸ್‌ಗಳ ಮಹತ್ವದ ಬಗೆಗಿನ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ವಾಸ್ತವ ಬದುಕಿಗೆ ಪೂರಕವಾಗಿರುವ ಸಂವಹನ ಕೌಶಲ ಮತ್ತು ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಶೈಕ್ಷಣಿಕ ಕಲಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಸಾಕಷ್ಟು ಸಮಯವನ್ನು ಮೀಸಲಿಟ್ಟಾಗ ಪರಿಣಾಮಕಾರಿಯಾಗಿ ಬೆಳವಣಿಗೆ ಹೊಂದಲು ಸಾಧ್ಯವಿದೆ. ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಪ್ರತಿಭೆಯನ್ನು ನೀವೇ ಕಂಡುಕೊಂಡು ಬೆಳೆಸಬೇಕು. ಶ್ರದ್ಧೆಯಿಂದ ಕೆಲಸ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದ ಅವರು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ವಿದ್ಯೆಯೇ ಪ್ರಮುಖ ಕಾರಣವಾಗುತ್ತದೆ. ವಿದ್ಯೆಯಿಂದ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸಬಲ್ಲುದು. ವಾಣಿಜ್ಯ ವಿಷಯದಲ್ಲಿ ಪ್ರಸಕ್ತ ವಿದ್ಯಾರ್ಥಿಗಳು ಸಾಕಷ್ಟು ಆಸಕ್ತಿ ಹೊಂದಿರುವುದು ಗಮನಾರ್ಹಕರವಾಗಿದೆ. ವಿದ್ಯಾರ್ಥಿಗಳಿಗೆ ಈ ಮೂಲಕ ಸಿಎ ಹಾಗೂ ಸಿಪಿಟಿ ಕೋರ್ಸ್‌ಗಳನ್ನು ಮಾಡಲು ಉಜ್ವಲ ಅವಕಾಶವನ್ನು ತೆರೆದಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಗಮನಹರಿಸಿದಾಗ ತನ್ನ ಗುರಿ ಈಡೇರುವುದಲ್ಲದೆ ಯಶಸ್ವಿ ಜೀವನವನ್ನು ನಡೆಸಲು ಸಾಧ್ಯವಿದೆ ಎಂದರು.

ವಾಣಿಜ್ಯ ಸಂಘದ ಸಂಯೋಜಕರಾದ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಹುಲ್, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಗೀತಾಕುಮಾರಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಸ್ಮತ್ ಸ್ವಾಗತಿಸಿ, ಶರಲ್ ಸೆಲ್ಮಾ ಡಿ’ಸೋಜ ವಂದಿಸಿದರು.

ಬಾಕ್ಸ್

ಯಾವುದೇ ಪೂರ್ವ ತಯಾರಿಯಿಲ್ಲದೆ ಯೋಜನೆ ಮಾಡಿದಾಗ ಅದು ತನ್ನ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಬಹುಮುಖ್ಯವೆನಿಸಿದ ಹಾಗೂ ಅಷ್ಟೇ ಪರಿಣಾಮಕಾರಿ ಎನಿಸಿದ ಇಂದಿನ ಜಿಎಸ್‌ಟಿ ಯುಗದಲ್ಲಿ ಸಿಎ ಹಾಗೂ ಸಿಪಿಟಿ ಕೋರ್ಸ್‌ಗಳಿಗೆ ಬಹುವಾದ ಬೇಡಿಕೆಯಿದೆ ಮಾತ್ರವಲ್ಲದೆ ಜೀವನವನ್ನು ನಂದನಗೊಳಿಸಲು ಉಜ್ವಲ ಅವಕಾಶವಿದೆ. ಮೌಲ್ಯಗಳಿಗೆ ಹಾಗೂ ಜೀವನ ಶಿಕ್ಷಣಕ್ಕೆ ಮಹತ್ವ ಕೊಡುತ್ತಾ, ಸಮಾಜದಲ್ಲಿ ಉತ್ತಮ ಉದ್ಯಮಿ ಅಥವಾ ಸಿಎ, ಸಿಪಿಟಿ ಕೋರ್ಸ್‌ಗಳನ್ನು ಮಾಡುತ್ತಾ ಉತ್ತಮ ವೃತ್ತಿಪರರಾಗಿ ಬೆಳೆಯಲು ಸನ್ನಧ್ಧರಾಗಿರಿ. ಸಿಎ/ಸಿಪಿಟಿ ಕೋರ್ಸ್‌ಗಳನ್ನು ಆರಿಸಿದರೆ ಜೀವನದಲ್ಲಿ ಹಲವಾರು ಅನುಕೂಲತೆಗಳನ್ನು ವಿದ್ಯಾರ್ಥಿಗಳಿಗೆ ತೆರೆದಿರಿಸಿದೆ.
-ಸಿಎ ಜಗನ್ನಾಥ್ ಕಾಮತ್, ಚಾರ್ಟರ್ಡ್ ಎಕೌಂಟೆಂಟ್