`ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆಯ ಪ್ರಾಮುಖ್ಯತೆ’ ಎಂಬ ಜಾಗೃತಿ ಕಾರ್ಯಕ್ರಮ

ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶ್ರೀಮಂತ, ಬಡವ ಎಂಬ ಯಾವುದೇ ತಾರತಮ್ಯವಿಲ್ಲ. ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ನಮ್ಮ ಪ್ರಜಾಪ್ರಭುತ್ವ ಕಲ್ಪಿಸಿದೆ. ಪವರ್ ಹಾಗೂ ಬೆಲೆ ಬಾಳುವ ನಮ್ಮ ಮತದಿಂದ ಭ್ರಷ್ಟ ಸರಕಾರವನ್ನೇ ಬದಲಿಸುವ ತಾಕತ್ತು ಹೊಂದಿದೆ. ಮತದಾನ ಮಾಡದೇ ಇದ್ದಾಗ ಇಲ್ಲದಿದ್ದರೆ ಗೆಲ್ಲುವವನು ಸೋಲುತ್ತಾನೆ, ಸೋಲುವವ ಗೆಲ್ಲುತ್ತಾನೆ ಎಂದು ಕೆಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ ವಿಭಾಗದ ಉಪನ್ಯಾಸಕ ಇಸ್ಮಾಯಿಲ್‌ರವರು ಹೇಳಿದರು.
ಅವರು ಅ.28 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಚುನಾವಣಾ ಸಾಕ್ಷರತಾ ಸಂಘದ ನೇತೃತ್ವದಲ್ಲಿ `ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆಯ ಪ್ರಾಮುಖ್ಯತೆ’ ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಮತದಾನ ಪದ್ಧತಿ ಎಂಬುದು ಇರಲಿಲ್ಲ. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಬಂದ ಮೇಲೆ ಚುನಾವಣೆಯ ಮೂಲಕ ಆಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಪ್ರಜೆಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಕಲ್ಪಿಸಿಕೊಡಲಾಗಿತ್ತು. ಚುನಾವಣೆ ಇಲ್ಲದ ಪ್ರಜಾಪ್ರಭುತ್ವವನ್ನು ಊಹಿಸಲು ಸಾಧ್ಯವಿಲ್ಲ. ಹೆಚ್ಚು ಜನಸಂಖ್ಯೆ ಇರುವ ದೇಶವಾದ ಚೀನಾ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ವಿಶ್ವದಲ್ಲಿ ಹಲವು ಪ್ರಜಾಪ್ರಭುತ್ವ ರಾಷ್ಟಗಳಿದ್ದರೂ, ಭಾರತ ದೇಶವೇ ಪ್ರಜಾಪ್ರಭುತ್ವ ಹೊಂದಿದ ದೊಡ್ಡ ರಾಷ್ಟವಾಗಿ ಹೊರಹೊಮ್ಮಿದೆ. ಮತದಾನದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಎಂಬ ಎರಡು ವಿಧದ ಪ್ರಕ್ರಿಯೆಗಳಿವೆ. ಒಂದು ಜನರೇ ಮತಗಟ್ಟೆಗೆ ಆಗಮಿಸಿ ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಶಾಸಕಾಂಗ ಸ್ಥಾನಕ್ಕೆ ಆರಿಸುವುದು, ಮತ್ತೊಂದು ಜನರಿಂದ ಆರಿಸಿ ಬಂದ ಚುನಾಯಿತ ಪ್ರತಿನಿಧಿಗಳೇ ರಾಷ್ಟçಪತಿ, ಉಪ ರಾಷ್ಟಪತಿ ಸ್ಥಾನಕ್ಕೆ ಅರ್ಹ ಪ್ರತಿನಿಧಿಗಳನ್ನು ಆರಿಸುವುದಾಗಿದೆ ಎಂದರು.
ಕಾಲೇಜಿನ ಚುನಾವಣಾ ಸಾಕ್ಷರತಾ ಸಂಘದ ನಿರ್ದೇಶಕ ಹಾಗೂ ರಾಜ್ಯಶಾಸ್ತ ವಿಭಾಗದ ಉಪನ್ಯಾಸಕ ಭರತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸತ್ಯಾತ್ಮ ಭಟ್ ಸ್ವಾಗತಿಸಿ, ಡಿವೈನಾ ಡಿ’ಸೋಜ ವಂದಿಸಿದರು. ಕ್ಯಾಥರಿನಾ ಪಿ.ಎಕ್ಸ್ ಕಾರ್ಯಕ್ರಮ ನಿರೂಪಿಸಿದರು. ಕಲಾ ವಿಭಾಗದ ಉಪನ್ಯಾಸಕರಾದ ಜ್ಯೋತಿ, ಶರತ್ ಆಳ್ವ ಚನಿಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬ್ಯಾಲೆಟ್ ಈಸ್ ಸ್ಟ್ರೋ೦ಗರ್ ದ್ಯಾನ್ ಬುಲೆಟ್…
ವಯಸ್ಸು 18 ವರ್ಷ ತುಂಬಿದ ಪ್ರತಿಯೋರ್ವ ಭಾರತದ ಪ್ರಜ್ಞಾವಂತ ನಾಗರಿಕನಿಗೆ ಮತದಾನ ಮಾಡುವ ಭಾಗ್ಯವಿದೆ. ಮತದಾನದ ಪ್ರಾಮುಖ್ಯತೆ ಬಗ್ಗೆ ಆಯಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸಂಪೂರ್ಣ ಸಾಕ್ಷರರನ್ನಾಗಿಸುವುದಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಭಾರತದ ನಾಗರಿಕನೆನೆಸಿಕೊಳ್ಳುವವರು ಅದು ಲೋಕಸಭೆ, ವಿಧಾನಸಭೆ, ಜಿ. ಪಂಚಾಯತ್, ಗ್ರಾ.ಪಂಚಾಯತ್, ಪುರಸಭೆ/ನಗರಸಭೆ/ಮಹಾನಗರಪಾಲಿಕೆ ಚುನಾವಣೆಯಾಗಲಿ ಹೀಗೆ ಪ್ರತೀ ವರ್ಷ ಮತದಾನ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಬುಲೆಟ್ ಗುಂಡುಗಳ ರಕ್ತ ಕ್ರಾಂತಿಯ ಮೂಲಕ ರಾಜರುಗಳು ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದರು. ಇಂದು ಬ್ಯಾಲೆಟ್ ಪೇಪರ್ ಮೂಲಕ ಅಧಿಕಾರವನ್ನು ಪಡೆಯಲಾಗುತ್ತದೆ. ಆದ್ದರಿಂದ ಬ್ಯಾಲೆಟ್ ಈಸ್ ಸ್ಟ್ರೋ೦ಗರ್ ದ್ಯಾನ್ ಬುಲೆಟ್ ಆಗಿದೆ. – ಇಸ್ಮಾಯಿಲ್, ಉಪನ್ಯಾಸಕರು, ಕೆಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜು