ವಾರ್ಷಿಕ ಕ್ರೀಡಾಕೂಟ

ಗ್ರಾಮೀಣ ಪ್ರದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಫಿಲೋಮಿನಾ ಸಂಸ್ಥೆಗೆ ದಾಖಲಾಗುತ್ತಿದ್ದರೂ, ಕ್ರೀಡೆಯಲ್ಲಿ ಭಾಗವಹಿಸುವುದು ಇತ್ತೀಚೆಗಿನ ವರ್ಷಗಳಲ್ಲಿ ಬಹಳ ಅಪರೂಪವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಸಂಸ್ಥೆಯ ಕೀರ್ತಿಪತಾಕೆ ಹಾರಿಸುವಂತಾಗಬೇಕು ಎಂದು ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯಪ್ರಶಸ್ತಿ ಪುರಸ್ಕತ ಶಿಕ್ಷಕ ದಯಾನಂದ ರೈ ಕೋರ್ಮಂಡರವರು ಹೇಳಿದರು.

ಅವರು ನ.26 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜ್‍ನ ಕ್ರೀಡಾಂಗಣದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾರ್ಷಿಕ ಕ್ರೀಡಾಕೂಟದಲ್ಲಿ ಬಲೂನ್‍ನ ಗೊಂಚಲನ್ನು ಆಕಾಶಕ್ಕೆ ತೇಲಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಫಿಲೋಮಿನಾ ವಿದ್ಯಾಸಂಸ್ಥೆಯ ಕ್ರೀಡಾಂಗಣವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಕ್ರೀಡಾಂಗಣದಲ್ಲಿ ಅವಿರತ ಅಭ್ಯಾಸ ಮಾಡುತ್ತಾ ಹಲವಾರು ವಿದ್ಯಾರ್ಥಿಗಳು ಇಂದು ರಾಷ್ಟ್ರ-ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿದ್ದಾರೆ. ಮೇಜರ್ ವೆಂಕಟ್ರಾಮಯ್ಯರವರ ಗರಡಿಯಲ್ಲಿ ಅಂದು ಸುನಿಲ್ ಕುಮಾರ್ ಶೆಟ್ಟಿ, ಪುಷ್ಪರಾಜ್ ಹೆಗ್ಡೆ, ಬ್ಯಾಪ್ಟಿಸ್ಟ್ ಲೋಬೋ, ಸಂಜೀವ ಪುತ್ತೂರುರಂತೆ ಅನೇಕ ಕ್ರೀಡಾಪಟುಗಳು ಅಲ್ಲದೆ ಇಂದು ಸದ್ದು ಮಾಡುತ್ತಿರುವ ಪ್ರೊ ಕಬಡ್ಡಿ ಪ್ರತಿಭೆ ಪ್ರಶಾಂತ್ ರೈಯವರು ಇದೇ ಫಿಲೋಮಿನಾ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಾ ಸಾಧನೆಯನ್ನು ಮಾಡಿ ಮೆರೆದವರಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾೈದೆ ದೇವುಸ್ ಸಮೂಹ ಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಪ್ರತೀ ವರ್ಷ ಈ ಕ್ರೀಡಾಂಗಣದಲ್ಲಿ ನಡೆಯುವ ವಾರ್ಷಿಕ ಕ್ರೀಡಾಕೂಟದ ವಿದ್ಯಾರ್ಥಿಗಳ ಶಿಸ್ತುಬದ್ಧವಾದ ಆಕರ್ಷಕ ಪಥಸಂಚಲನ ಕಣ್ಣಿಗೆ ಹಬ್ಬದಂತಿದೆ. ದೇವರು ಪ್ರತಿಯೋರ್ವರಿಗೂ ಒಂದಲ್ಲ ಒಂದು ಪ್ರತಿಭೆಯನ್ನು ಕರುಣಿಸಿದ್ದಾರೆ. ದೇವರು ಕೊಟ್ಟ ಪ್ರತಿಭೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವಂತಾಗಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗೆ ಸಂತ ಫಿಲೋಮಿನಾ ಕಾಲೇಜ್‍ನ ಪ್ರಾಂಶುಪಾಲರಾದ ಪ್ರೊ|ಲಿಯೋ ನೊರೋನ್ಹಾರವರು ಮಾತನಾಡಿ, ರಾಷ್ಟ್ರ-ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದಂತಹ ಕ್ರೀಡಾಪಟುಗಳನ್ನು ಉದ್ಭವಗೊಳಿಸಿದ ಕೀರ್ತಿ ಈ ಐತಿಹಾಸಿಕ ಕ್ರೀಡಾಂಗಣಕ್ಕೆ ಸಲ್ಲುತ್ತದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿಗಳೂ ಕೂಡ ಹಿರಿಯ ವಿದ್ಯಾರ್ಥಿ ಸಾಧಕರಂತೆ ಕಠಿಣ ಪರಿಶ್ರಮಪಟ್ಟು ಹೆಸರನ್ನು ಉಜ್ವಲಗೊಳಿಸುವಂತಾಗಬೇಕು ಎಂದು ಅವರು ಹೇಳಿದರು.

ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ|ರಿತೇಶ್ ರೊಡ್ರಿಗಸ್, ವಂ|ಸುನಿಲ್ ಜಾರ್ಜ್ ಡಿ’ಸೋಜ, ಕಾಲೇಜ್‍ನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಥಸಂಚಲನದ ನಿರ್ಣಾಯಕರಾಗಿ ಫಿಲೋಮಿನಾ ಕಾಲೇಜ್‍ನ ಪದವಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಹರ್ಷಿತ್ ಆರ್, ತೇಜಸ್ವಿ ಭಟ್ ಸಹಕರಿಸಿದ್ದರು. ಪ್ರದರ್ಶನ ಕಲಾ ವಿಭಾಗದ ನಿರ್ದೇಶಕಿ ಸುಮನಾ ಪ್ರಶಾಂತ್‍ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಂಶುಪಾಲ ವಂ|ವಿಜಯ್ ಲೋಬೊ ಸ್ವಾಗತಿಸಿ, ಹಿಂದಿ ವಿಭಾಗದ ಉಪನ್ಯಾಸಕಿ ಡಾ|ಆಶಾ ಸಾವಿತ್ರಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಸಂತೋಷ್ ಕ್ಲಾರೆನ್ಸ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾೈಸ್, ಬ್ರದರ್ ರಾಬಿನ್, ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ನರೇಶ್ ಲೋಬೋ, ಐವಿ ಗ್ರೆಟ್ಟಾ ಪಾೈಸ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಲೂವಿಸ್ ಮಸ್ಕರೇನ್ಹಸ್, ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಗುರುಮೂರ್ತಿ ಕೆ, ಹುಸೈನ್‍ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.