ವಾರ್ಷಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ

 

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೋವರ‍್ಸ್ ಮತ್ತು ರೇಂಜರ‍್ಸ್‌ನ ವಾರ್ಷಿಕ ಶಿಬಿರವು ದಿನಾಂಕ 5-1-2018ರಂದು ಕಾಲೇಜಿನ ಪ್ರಾಂಶುಪಾಲರಾದ ವಂ| ವಿಜಯ್ ಲೋಬೊರವರರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದ ಸಂಯೋಜಕರಾದ ಶ್ರೀ ಹರ್ಷದ್ ಇಸ್ಮಾಯಿಲ್‌ರವರು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ರೋವರ‍್ಸ್ ಮತ್ತು ರೇಂಜರ‍್ಸ್ ಕ್ಷೇತ್ರದಲ್ಲಿ ಇರುವ ಅವಕಾಶಗಳು ಹಾಗೂ ಸವಲತ್ತುಗಳ ಬಗ್ಗೆ ವಿವರಿಸುವುದರ ಜೊತೆಗೆ ತಮಗೆ ದೊರೆತ ಅವಕಾಶಗಳನ್ನು ಸೂಕ್ತರೀತಿಯಲ್ಲಿ ವಿನಿಯೋಗಿಸಲು ಕರೆನೀಡಿದರು ಮಾತ್ರವಲ್ಲ, ಸಂತ ಫಿಲೋಮಿನಾ ಕಾಲೇಜಿನ ರೋವರ‍್ಸ್-ರೇಂಜರ‍್ಸ್ ವಿಭಾಗದ ಅವಕಾಶಗಳನ್ನು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ನಂತರವೂ ಸದುಪಯೋಗಪಡಿಸಿಕೊಳ್ಳಬಹುದು ಎಂಬ ಆಶ್ವಾಸನೆಯನ್ನು ನೀಡಿದರು. ನಂತರ ವಿದ್ಯಾರ್ಥಿಗಳು ವರ್ಷದಲ್ಲಿ ವಿವಿಧ ಕ್ಷೇತ್ರದಲ್ಲಿ ತಾವು ನೀಡಿದ ಸೇವೆ ಹಾಗೂ ತಾಲೂಕು ಮತ್ತು ರಾಷ್ಟ್ರಮಟ್ಟದಲ್ಲಿ ಜರಗಿದ ಶಿಬಿರಗಳ ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ರೋವರ‍್ಸ್-ರೇಂಜರ‍್ಸ್ ವಿಭಾಗದಲ್ಲಿ ಸಾಧನೆಗೈದ ಉದಯೋನ್ಮುಕ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. ಎರಡು ವರ್ಷದಲ್ಲಿ ಅಪೂರ್ವ ಸಾಧನೆಗೈದ ಚಂದ್ರಾಕ್ಷರವರಿಗೆ ಉತ್ತಮ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ವಂ| ವಿಜಯ್‌ಲೋಬೊರವರು ಕಾಲೇಜಿನ ವಿವಿಧ ಕಾರ್ಯಕ್ರಮಗಳಲ್ಲಿ ರೋವರ‍್ಸ್-ರೇಂಜರ‍್ಸ್ ವಿದ್ಯಾರ್ಥಿಗಳ ಸೇವೆಯನ್ನು ಸ್ಮರಿಸಿದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಸಂಯೋಜಕರನ್ನು ಅಭಿನಂದಿಸಿದರು. ಈ ವಿಭಾಗವು ವಿದ್ಯಾರ್ಥಿಗಳಿಗೆ ಧೈರ್ಯ, ಮಾತನಾಡುವ ಕೌಶಲ್ಯವನ್ನು ಕಲಿಸಿಕೊಟ್ಟಿದೆ. ಈ ಸಂಸ್ಥೆಯಲ್ಲಿ ಶಿಕ್ಷಣವನ್ನು ಮುಗಿಸಿದ ನಂತರವೂ ಈ ವಿಭಾಗದಲ್ಲಿ ನಿಮ್ಮನ್ನು ನೀವು ಸಕ್ರೀಯವಾಗಿ ತೊಡಗಿಸಿಕೊಳ್ಳಿ ಮಾತ್ರವಲ್ಲ ನಿಮ್ಮ ನಂತರದ ವಿದ್ಯಾರ್ಥಿಗಳಿಗೆ ನಿಮ್ಮ ಸಾಧನೆಗಳು ಸ್ಫೂರ್ತಿಯಾಗಲಿ, ಮತ್ತಷ್ಟು ವಿದ್ಯಾರ್ಥಿಗಳು ಈ ವಿಭಾಗವನ್ನು ಸೇರಿ ಇವರ ಸದುಪಯೋಗವನ್ನು ಪಡೆಯುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಶ್ರೀ ಸಂದೇಶ್ ಲೋಬೊ ಹಾಗೂ ಶ್ರೀಮತಿ ಸೌಮಲ್ಯತಾರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕು| ಸಿಂಚನಾ ಗೌಡ ನಿರೂಪಿಸಿ ಚಂದ್ರಾಕ್ಷ ಸ್ವಾಗತಿಸಿದರು. ಆಶಿಕ್ ವಂದಿಸಿದರು.