ಪಿಯು ಪ್ರಥಮ ತರಗತಿ ಆರಂಭೋತ್ಸವ

ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉನ್ನತ ಸ್ಥಾನ ಸಂಪಾದಿಸುವತ್ತ ಮುಂದೆ ಬರುವುದರ ಜೊತೆಗೆ ಜೀವನದಲ್ಲಿ ಶಿಸ್ತು ಹಾಗೂ ಮೌಲ್ಯಗಳನ್ನು ಒಳಗೊಂಡ ಮಾನವೀಯ ಗುಣ ನಮ್ಮಲ್ಲಿ ಮೊದಲು ರೂಪಿತಗೊಳ್ಳಬೇಕು ಎಂದು ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಹೇಳಿದರು.

ಅವರು ಮೇ.20 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ನಿತಿನ್ ಕುಮಾರ್ ಹಾಗೂ ಅಮೃತಾ ಎಸ್.ವಿರವರೊಡಗೂಡಿ ದೀಪ ಬೆಳಗಿಸಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೋಷಕರು ತಮ್ಮ ಮಕ್ಕಳ ಆಶಯ ಏನೆಂಬುದನ್ನು ಅರಿತು ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಕೂಡ ಮತ್ತೊಬ್ಬರ ಭಾವನೆಯನ್ನು ಅರ್ಥೈಸಿಕೊಳ್ಳದಿದ್ದಲ್ಲಿ ಜೀವನ ವ್ಯರ್ಥವಾಗಲಿದೆ ಮಾತ್ರವಲ್ಲದೆ ವಿದ್ಯಾರ್ಥಿಗಳು ಗುರು-ಹಿರಿಯರಲ್ಲಿ ಗೌರವ, ತೋರಿಸುವ ಪ್ರೀತಿಯೇ ಉತ್ತಮ ನಾಗರಿಕತೆಗೆ ನಾಂದಿ ಹಾಡಲು ಸಾಧ್ಯವಾಗುತ್ತದೆ ಎಂದ ಅವರು ಕಳೆದ 60 ವರ್ಷಗಳಲ್ಲಿ ಫಿಲೋಮಿನಾ ವಿದ್ಯಾಸಂಸ್ಥೆ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂಬುದು ಸರ್ವರೂ ಬಲ್ಲ ವಿಷಯವಾಗಿದೆ. ತನ್ನ ದೂರದೃಷ್ಟಿತ್ವದ ಚಿಂತನೆಯಿಂದ ಅಂದು ಶಿಕ್ಷಣದ ಹರಿಕಾರ ಮೊ|ಪತ್ರಾವೋರವರು ಈ ಪವಿತ್ರ ಜಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಸಮಾಜದ ಬಹುತೇಕ ಮಂದಿಗೆ ಶಿಕ್ಷಣ ಸಿಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಯಿಸಿ-ವಂ|ಆ್ಯಂಟನಿ:
ಕಾಲೇಜ್‍ನ ಕ್ಯಾಂಪಸ್ ನಿರ್ದೇಶಕರಾದ ವಂ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ತನ್ನ ಮಗು ಶೇ.95 ಮೇಲ್ಪಟ್ಟು ಅಂಕಗಳನ್ನು ಗಳಿಸಿದ್ದಾನೆ(ಳೆ), ಎಷ್ಟು ಶುಲ್ಕದಲ್ಲಿ ವಿನಾಯಿತಿ ಮಾಡುತ್ತೀರಿ ಮತ್ತು ಕಾಲೇಜ್‍ನ ಅಂದ-ಚೆಂದ ನೋಡಿ ಮಕ್ಕಳನ್ನು ವಿದ್ಯಾಸಂಸ್ಥೆಗೆ ದಾಖಲು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಬದಲಾಗಿ ವಿದ್ಯಾಸಂಸ್ಥೆಯು ಯಾವ ಗುಣಮಟ್ಟದಲ್ಲಿದೆ, ಮೂಲಭೂತ ಸೌಕರ್ಯಗಳಿವೆಯೋ, ಕಲಿಕೆಗೆ ಪೂರಕ ವಾತಾವರಣವಿದೆಯೋ ಎಂಬುದನ್ನು ಮೊದಲು ಗಮನಿಸಬೇಕಾದುದು ಹೆತ್ತವರ ಕರ್ತವ್ಯ ಎಂದ ಅವರು ಮಕ್ಕಳು ಮನುಷ್ಯತ್ವವನ್ನು ಹೊಂದುವುದು, ಯಾವುದೇ ಧರ್ಮದ ಸಂಕುಚಿತ ಭಾವನೆಗೆ ಒಳಗಾಗದೆ ಬದುಕುವುದು, ವಿದ್ಯಾರ್ಥಿಗಳು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವುದು ಜೊತೆಗೆ ಮಕ್ಕಳಲ್ಲಿ ಉತ್ತಮ ಅಲೋಚನೆಗಳನ್ನು ಭಿತ್ತುವುದು, ಅವರಲ್ಲಿ ರಚನಾತ್ಮಕ ಕೌಶಲ್ಯಗಳನ್ನು ಬೆಳೆಸುವುದು ಇವೇ ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ಮೂಲ ಧ್ಯೇಯವಾಗಿದೆ. ಫಿಲೋಮಿನಾ ವಿದ್ಯಾಸಂಸ್ಥೆಯ ಆರು ಎಕರೆಯಲ್ಲಿರುವ ಕ್ರೀಡಾಂಗಣವನ್ನು ವ್ಯಾಪಾರೀಕರಣಕ್ಕೆ ಬಳಸದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂದಿಗೂ ಹಾಗೆಯೇ ಬಿಡಲಾಗಿದೆ ಎಂದು ಅವರು ಹೇಳಿದರು.

ಶೈಕ್ಷಣಿಕ ಪ್ರಗತಿಯೊಂದಿಗೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ-ವಂ|ವಿಜಯ್:
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು, ಕಳೆದ 60 ವರುಷಗಳ ಸಾಧನೆ ಮತ್ತು ಸಂಸ್ಥೆಯ ಸರ್ವರ ಸಂಘಟಿತ ಪ್ರಯತ್ನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದೆ. ದೂರದೃಷ್ಟಿತ್ವವುಳ್ಳ ಶಿಕ್ಷಣದ ಹರಿಕಾರ ಮೊ|ಪತ್ರಾವೋರವರಿಂದ ಸ್ಥಾಪಿಸಲ್ಪಟ್ಟ ಈ ಪದವಿ ಪೂರ್ವ ವಿದ್ಯಾಸಂಸ್ಥೆ ಪ್ರಸಕ್ತ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್‍ನ ಸಹಿತ ಒಟ್ಟು ಮೂರು ರ್ಯಾಂಕ್‍ಗಳು ಲಭಿಸಿ ರಾಜ್ಯದಲ್ಲಿಯೇ ವಿಶಿಷ್ಟವಾದ ಛಾಪನ್ನು ಒತ್ತಿದೆ ಎಂದರೆ ಸುಳ್ಳಲ್ಲ ಎಂದ ಅವರು ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ಕಲಿಕೆಗೆ ಪೂರಕವಾದ ವಾತಾವರಣವಿರುವುದು, ಶೈಕ್ಷಣಿಕ ಪ್ರಗತಿಯ ಜೊತೆಗೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡುತ್ತಿರುವುದು ಹೆಗ್ಗಳಿಕೆ ಎನಿಸಿದೆ. ಶೈಕ್ಷಣಿಕ ಉನ್ನತಿ ಸಾಧಿಸಬೇಕಾದರೆ ವಿದ್ಯಾರ್ಥಿಗಳಲ್ಲಿ ಶಿಸ್ತು ಅಗತ್ಯ ಬೇಕಾಗಿದೆ. ಸಂಘಟಿತ ಪ್ರಯತ್ನ ವಿದ್ಯಾರ್ಥಿಗಳಿಗೆ ನಿಜವಾಗಿಯೂ ದಾರಿದೀಪ ಎನಿಸಲಿದೆ ಎಂದು ಅವರು ಹೇಳಿದರು.

ಗೌರವದಿಂದ ಕಾಣುವುದು, ಆತ್ಮೀಯತೆಯಿಂದ ಸ್ವಾಗತಿಸುವುದು ವಿದ್ಯಾಸಂಸ್ಥೆಯ ಮಹತ್ತರ ಗುಣ-ದುರ್ಗಾಪ್ರಸಾದ್ ರೈ:
ಕಾಲೇಜ್‍ನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈರವರು ಮಾತನಾಡಿ, ಯಾರು ನಿಜ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಾರೋ ಅವರು ಸಮಾಜದಲ್ಲಿ ಪ್ರಬುದ್ಧರಾಗಿ ಬೆಳೆಯುತ್ತಾರೆ. ಪ್ರಸಕ್ತ ಸಮಾಜದ ದೇಶದ ಮೂಲೆ-ಮೂಲೆಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಫಿಲೋಮಿನಾ ವಿದ್ಯಾಸಂಸ್ಥೆಯ ಪ್ರಾಡಕ್ಟ್‍ಗಳು ಆಗಿರುವುದು ಪ್ರಶಂಸಾದಾಯಕ. ಫಿಲೋಮಿನಾ ವಿದ್ಯಾಸಂಸ್ಥೆಯು ವಾಣಿಜ್ಯ ಉದ್ದೇಶಕ್ಕೆ ಜಾಗವನ್ನು ಬಳಸಿಕೊಳ್ಳದೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಅಂದು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದಾಗಿದೆ. ಅಂದಿನಿಂದ ಇಂದಿನವರೆಗೆ ಎಲ್ಲರನ್ನು ಗೌರವದಿಂದ ಕಾಣುತ್ತಾ, ಆತ್ಮೀಯತೆಯಿಂದ ಸ್ವಾಗತಿಸುವುದು ಈ ವಿದ್ಯಾಸಂಸ್ಥೆಯ ಮಹತ್ತರ ಗುಣವಾಗಿದೆ ಎಂದರು.

ಸಂಸ್ಥೆಯ ಮೂರು ವಸತಿನಿಲಯಗಳಾದ ಪುರುಷರ ವಸತಿನಿಲಯದ ವಾರ್ಡನ್ ವಂ|ರಿತೇಶ್ ರೊಡ್ರಿಗಸ್, ಬಾಲಕರ ವಸತಿನಿಲಯದ ವಾರ್ಡನ್ ವಂ|ಸುನಿಲ್ ಜಾರ್ಜ್ ಡಿ’ಸೋಜ, ಮಹಿಳೆಯರ ವಸತಿನಿಯದ ಸಹ-ವಾರ್ಡನ್ ಸಿಸ್ಟರ್ ಜುಲಿಯಾನಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸುಮನಾ ಪ್ರಶಾಂತ್‍ರವರ ನೇತೃತ್ವದ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಶಾಂತ್ ಭಟ್ ಸ್ವಾಗತಿಸಿ, ರಕ್ಷಕ-ಶಿಕ್ಷಕ ಸಂಘದ ಕೋಶಾಧಿಕಾರಿ ಹಾಗೂ ಕಾಲೇಜ್‍ನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅನಿಲ್ ಕುಮಾರ್ ವಂದಿಸಿದರು. ಉಪನ್ಯಾಸಕಿ ಲವೀನಾ ಸಾಂತ್‍ಮಾಯೆರ್ ಸನ್ಮಾನಿತರ ಸಾಧನೆಯ ವಿವರವನ್ನು ಪ್ರಸ್ತುತಪಡಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಭರತ್ ಕುಮಾರ್ ಎ.ಕಾರ್ಯಕ್ರಮ ನಿರೂಪಿಸಿದರು.

ಐವರು ಸಾಧಕರಿಗೆ ಸನ್ಮಾನ..
2018-19ನೇ ಸಾಲಿನ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿಯೇ ತೃತೀಯ ರ್ಯಾಂಕ್ ಗಳಿಸಿದ ಸ್ವಸ್ತಿಕ್ ಪಿ., ಸ್ವಸ್ತಿಕ್‍ರವರ ಅವಳಿ ಸಹೋದರಿ, ಎಂಟನೇ ರ್ಯಾಂಕ್ ಗಳಿಸಿದ ಸಾತ್ವಿಕಾ ಪಿ, ಒಂಭತ್ತನೇ ರ್ಯಾಂಕ್ ಗಳಿಸಿದ ಫಾತಿಮತ್ ಸಾನಿದಾ, ಪೋಲ್‍ವಾಲ್ಟ್‍ನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ ವಿದ್ಯಾರ್ಥಿ ಭವಿತ್ ಪೂಜಾರಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‍ನ 13ನೇ ರಾಷ್ಟ್ರೀಯ ಒಕ್ಕೂಟದಲ್ಲಿ ಉತ್ತಮ ಸಾಧನೆಗೈದು `ಯೂತ್ ಅವಾರ್ಡ್’ ಗಳಿಸಿದ ಕಾಲೇಜ್‍ನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್‍ರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಫಿಲೋಮಿನಾ ಕಾಲೇಜ್‍ಗೆ ಸೇರ್ಪಡೆಗೊಂಡ ನಿತಿನ್ ಕುಮಾರ್(97.76%), ಅಮೃತಾ ಎಸ್‍ವಿ(98.72)ರವರನ್ನು ಹೂಗುಚ್ಛ ನೀಡುವ ಮೂಲಕ ಅಭಿನಂದಿಸಲಾಯಿತು. ಕಾಲೇಜ್‍ನ ರೀತಿ-ನಿಯಮಗಳ ಬಗ್ಗೆ ಓರಿಯೆಂಟೇಶನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಗಳ ಹೆತ್ತವರಿಗೆ ಕಾಲೇಜ್‍ನ ಬಗ್ಗೆ ವಿವರಣೆಯನ್ನು ಪ್ರಾಜೆಕ್ಟರ್ ಮೂಲಕ ರಸಾಯನ ಶಾಸ್ತ್ರ ಉಪನ್ಯಾಸಕ ಪ್ರಶಾಂತ್ ಭಟ್‍ರವರು ನಡೆಸಿಕೊಟ್ಟರು.