“ಸಂಗೀತದಿಂದ ಮಾನಸಿಕ ಆರೋಗ್ಯ ವೃದ್ಧಿ”-ಸುಚಿತ್ರಾ ಹೊಳ್ಳ

ಮಾನವನ ದೈನಂದಿನ ಜೀವನ ಸಂಗೀತದೊಂದಿಗೆ ಸಾಗುತ್ತಿರುತ್ತದೆ. ಮಾನವನ ಪ್ರತಿಯೊಂದು ನಡೆ-ನುಡಿಗಳಲ್ಲಿ ಯಾವುದಾದರೊಂದು ಸಂಗೀತದ ನಾದವು ಗುನುಗುನಿಸುತ್ತಿರುತ್ತದೆ. ಆದ್ದರಿಂದ ಸಂಗೀತವು ಮಾನವನ ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುವಲ್ಲಿ ಸಹಕಾರಿಯಾಗಿದೆ ಎಂದು ಸಂಗೀತ ವಿಶಾರದೆ ವಿದುಷಿ ಸುಚಿತ್ರಾ ಹೊಳ್ಳರವರು ಹೇಳಿದರು.

ಅವರು ಸೆ.26 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಜ್ರ ಮಹೋತ್ಸವದ ಅಂಗವಾಗಿ ಪ್ರದರ್ಶನ ಕಲಾ ಸಂಘದ ಆಶ್ರಯದಲ್ಲಿ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ `ಫಿಲೋ ಸಿಂಚನ ಸಂಗೀತ ವೈಭವ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾಜದಲ್ಲಿ ಅತ್ಯುನ್ನತ ಹಾಗೂ ವಿಭಿನ್ನವಾದ ಸ್ಥಾನಮಾನವು ಓರ್ವ ಸಂಗೀತ ಕಲಾವಿದನಿಗೆ ಲಭಿಸುತ್ತದೆ. ಸಂಗೀತದಲ್ಲಿ ಭಾರತೀಯ, ಪಾಶ್ಚಾತ್ಯ, ಶಾಸ್ತ್ರೀಯ, ಲಘು, ಫಿಲ್ಮೀ ಮ್ಯೂಸಿಕ್ ಹೀಗೆ ನಾನಾ ವಿಭಾಗಳಿದ್ದರೂ, ಸಂಗೀತ ಕಲಾವಿದ ಹಾಡನ್ನು ಯಾವುದೇ ಸ್ತರದಲ್ಲಿ ಹಾಡಿದರೂ ಅದರ ಅರ್ಥ ಒಂದೇ ಆಗಿರುತ್ತದೆ. ಕೆಲವು ಸಂಗೀತ ಮನುಷ್ಯನನ್ನು ಉನ್ಮಾದವೇರುವಂತೆ ಮಾಡುತ್ತದೆ, ಕೆಲವು ಸಂಗೀತ ಮನುಷ್ಯನನ್ನು ಶಾಂತವಾಗಿಸುವಂತೆ ಮಾಡುತ್ತದೆ ಎಂದ ಅವರು ಶಾಸ್ತ್ರೀಯ ಸಂಗೀತದಿಂದ ವ್ಯಕ್ತಿಯ ಮನಸ್ಸು ಶಾಂತ ಸ್ವಭಾವದೆಡೆಗೆ ಸಾಗಿಸುತ್ತದೆ. ಸಂಗೀತ ಕೇಳುವುದು ಮತ್ತು ಕಲಿಯುವುದರಿಂದ ಮನಸ್ಸಿಗೆ ಹಿತವನ್ನು ಕೊಡುತ್ತದೆ. ಸಂಗೀತದಲ್ಲಿ ಶ್ರುತಿ, ತಾಳ, ಸಾಹಿತ್ಯ, ರಾಗ ಪರಿಪೂರ್ಣವಿದ್ದಾಗ ಆತ ಸಂಗೀತ ಕಲಾವಿದನಾಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನವನ ಒತ್ತಡದ ಜೀವನದಲ್ಲಿ ಮನಸ್ಸನ್ನು ಸುಪ್ತವಾಗಿಡುವಲ್ಲಿ ಸಂಗೀತವು ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿನ ರಾಜರುಗಳ ಕಾಲದಿಂದಲೂ ಕಲೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹವಿದ್ದು, ಅದುವೇ ಪ್ರೋತ್ಸಾಹ ಇಂದಿನ ಆಧುನಿಕ ಕಾಲಕ್ಕೂ ಮುಂದುವರೆದಿದೆ. ಕಿರಿಯ ವಯಸ್ಸಿನಲ್ಲಿಯೇ ಸಂಗೀತದಲ್ಲಿ ಅಪೂರ್ವ ಸಾಧನೆಗೈದ ವಿದುಷಿ ಸುಚಿತ್ರಾರವರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬಂದಂತಹ ಧನಾತ್ಮಕ ಅವಕಾಶಗಳನ್ನು ಸದುಪಯೋಗಗೊಳಿಸಿ ಕಲೆ ಮತ್ತು ಸಾಹಿತ್ಯವನ್ನು ಉತ್ತುಂಗಕ್ಕೇರಿಸುವಂತಾಗಬೇಕು ಎಂದರು.
ಪ್ರದರ್ಶನ ಸಂಘದ ಸಂಯೋಜಕಿ ಸುಮನಾ ಪ್ರಶಾಂತ್‍ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುಚಿತ್ರಾ ಪ್ರಾರ್ಥಿಸಿದರು. ಲಹರಿ ಸ್ವಾಗತಿಸಿ, ಅಂಜನ್ ಕುಮಾರ್ ವಂದಿಸಿದರು. ಪ್ರದರ್ಶನ ಸಂಘದ ನಿರ್ದೇಶಕರಾದ ಶ್ರುತಿ ಹಾಗೂ ರಶ್ಮಿರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀದೇವಿ ಕೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿಗಳಿಂದ ಗೋಷ್ಠಿ ಗಾಯನ, ಕಾಲೇಜ್‍ನ ಹಿರಿಯ ವಿದ್ಯಾರ್ಥಿ ಸಾತ್ವಿಕ್ ಬೆಡೇಕರ್ ಹಾಗೂ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಉಪನ್ಯಾಸಕಿ ಹಾಗೂ ಪ್ರದರ್ಶನ ಸಂಘದ ಸಂಯೋಜಕಿ ಸುಮನಾ ಪ್ರಶಾಂತ್‍ರವರಿಂದ ಶಾಸ್ತ್ರೀಯ ಗಾಯನ ನಡೆಯಿತು. ವಿದ್ವಾನ್ ಜಗದೀಶ್ ಕೊರೆಕ್ಕಾನರವರು ವಯಲಿನ್, ವಿದ್ವಾನ್ ಮುರಳೀಕೃಷ್ಣ ಕುಕ್ಕಿಲರವರು ಮೃದಂಗವನ್ನು ನುಡಿಸಿ ವಿದ್ಯಾರ್ಥಿಗಳನ್ನು ರಂಜಿಸಿದರು.