ಫಿಲೋಮಿನಾ ಪಿಯು ಕಾಲೇಜಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

ಶಿಕ್ಷಣದ ಜೊತೆಗೆ ಶಿಕ್ಷಕರಲ್ಲೂ ಹೊಸತನ ಮೂಡುವಂತಾಗಲಿ-ವಂ|ಲಾರೆನ್ಸ್

ಪುತ್ತೂರು: ಶಿಕ್ಷಣದಲ್ಲಿ ಹೊಸತನವನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಕರಲ್ಲಿಯೂ ಹೊಸತನ ಮೂಡುವ ಅವಶ್ಯಕತೆ ಇದೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರು ಹೇಳಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಡಿ.17 ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗದವರಿಗೆ `ಶೈಕ್ಷಣಿಕ ಭಾವನೆಗಳು, ವರ್ತನೆಗಳು ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ’ಯ ಬಗ್ಗೆ ಏರ್ಪಡಿಸಿದ ಒಂದು ದಿನದ ಶೈಕ್ಷಣಿಕ ತರಬೇತಿ ಕಾರ್ಯಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವಾಗ, ಶಿಕ್ಷಕರು ವಿನೂತನ ಪ್ರಯೋಗಗಳನ್ನು ಮಾಡುವ ಅವಶ್ಯಕತೆ ಇದೆ. ಈ ಮೂಲಕ ವಿದ್ಯಾರ್ಥಿಗಳ ಭಾವನೆಗಳನ್ನು ಅರ್ಥೈಸಿಕೊಂಡು, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಬೇಕಿದೆ. ಈ ಕಾರ್ಯಾಗಾರವು ಎಲ್ಲಾ ಶಿಕ್ಷಕರಿಗೆ ಹೊಸತನದ ಹುರುಪನ್ನು ನೀಡಲಿ. ಎಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೆರೋರವರು ಮಾತನಾಡಿ, ಶಿಕ್ಷಕರು ತಮ್ಮ ಸಂಪೂರ್ಣವಾದ ಆಂತರಿಕ ಶಕ್ತಿಯನ್ನು ಉಪಯೋಗಿಸಬೇಕು. ಕೇವಲ ಪಠ್ಯಕ್ರಮವನ್ನು ಪಾಠ ಮಾಡುವುದಷ್ಟೇ ಶಿಕ್ಷಕನ ಜವಾಬ್ದಾರಿಯಲ್ಲ, ವಿದ್ಯಾರ್ಥಿಗಳ ಭಾವನೆಗಳನ್ನು ಅರ್ಥಮಾಡಿಕೊಂಡು, ವಿದ್ಯಾರ್ಥಿಗಳ ವರ್ತನೆಯನ್ನು ತಿದ್ದುವುದರ ಮೂಲಕ ಆದರ್ಶ ಶಿಕ್ಷಕನಾಗುವತ್ತ ಅಡಿಯಿಡಬೇಕೆಂದು ಹೇಳಿದರು.