ಸೃಜನಶೀಲ ಬರವಣಿಗೆ ಕಾರ್ಯಾಗಾರ

ಒಂದು ಬಾರಿ ಲೇಖನ ಅಥವಾ ವರದಿ ಬರೆದಾಗ ಅವರು ಪತ್ರಕರ್ತರಾಗುವುದಿಲ್ಲ. ಪತ್ರಕರ್ತನಾಗುವವರಿಗೆ ವಿಷಯದ ಕುರಿತು ವಸ್ತು ನಿಷ್ಠತೆ, ಕ್ರಿಯಾಶೀಲತೆ, ದೂರದೃಷ್ಟಿ, ತಾಳ್ಮೆ, ಶಿಸ್ತು, ಪ್ರಾಮಾಣಿಕತೆ, ಸಮಯನಿಷ್ಠೆ, ದಕ್ಷತೆ, ನಿಖರತೆ, ಚುರುಕುತನ, ಕ್ಷಿಪ್ರತೆಯಿರಬೇಕಾಗುತ್ತದೆ ನಿಜ. ಆದರೆ ಮುಖ್ಯವಾಗಿ ಬೇಕಾಗಿರುವುದು ಪತ್ರಿಕೆಯ ಓದುಗರಾಗಿ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಎಂದು ಪತ್ರಕರ್ತ, ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ದುರ್ಗಾಪ್ರಸಾದ್ ನಾಯರ್‍ಕೆರೆರವರು ಹೇಳಿದರು.

ಅವರು ಜು.5ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ `ಸೃಜನಶೀಲ ಬರವಣಿಗೆ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಉತ್ತಮ ವರದಿ ಮಾಡಬೇಕಾದರೆ ವಿಷಯವನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ವಿಷಯಗಳು ಯಾವುದೇ ನೆಲೆಯಲ್ಲಿರಲಿ, ವರದಿಗೆ ಅವುಗಳು ಪೂರಕವಾಗಿದ್ದರೆ ಅದನ್ನು ವರದಿ ಮಾಡಬಹುದು. ಪತ್ರಕರ್ತನೆನೆಸಿಕೊಳ್ಳುವವರು ಸಮಾಜದಲ್ಲಿನ ಒಳಿತು-ಕೆಡುಕನ್ನು ಸಮಗ್ರವಾಗಿ ಸಂಗ್ರಹಿಸಿ ಸಮಾಜದ ಕಣ್ಣು ತೆರೆಯಿಸುವಲ್ಲಿ ಮತ್ತು ಜನರಿಗೆ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗುವಂತಾಗಬೇಕು ಎಂದ ಅವರು ಪತ್ರಿಕೆಯು ಸಮುದಾಯದ ಒಳಿತಿಗಾಗಿ ಕೆಲಸ ಮಾಡುತ್ತದೆ. ಜ್ಞಾನ ಮತ್ತು ಶೈಕ್ಷಣಿಕ ವಿಕಸನಕ್ಕೆ ಪತ್ರಿಕೆ ಮುಖ್ಯ ಪಾತ್ರ ವಹಿಸುತ್ತದೆ. ಪತ್ರಿಕೆ ಓದುವುದರಿಂದ ಕೇವಲ ಜ್ಞಾನ ಅಲ್ಲ ಅದರಿಂದ ಶಿಕ್ಷಣವು ಸಿಗುತ್ತದೆ. ವ್ಯಕ್ತಿಯ ಭೌತಿಕ ವಿಕಸನ, ಹೊಸ ಹೊಸ ಶಬ್ದಗಳು ತಿಳುವಳಿಕೆಗೆ ಬರುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಬರವಣಿಗೆ ಎಂಬುದು ಅದು ಕಲೆ, ಪ್ರತಿಭೆಯಾಗಿದೆ. ಬರಹಗಾರರಾಗುವುದರಿಂದ ಬರವಣಿಗೆಯ ಕೌಶಲ್ಯವೂ ಹೆಚ್ಚುತ್ತದೆ. ಕಾಲೇಜ್‍ನಲ್ಲೂ ವಾಲ್ ಬೋರ್ಡ್ ಮ್ಯಾಗಜಿನ್, ಬುಲೆಟಿನ್ ಮುಂತಾದವುಗಳಲ್ಲಿ ಲೇಖನ, ಕಥೆ, ಕವಿತೆ ಮುಂತಾದುವುಗಳನ್ನು ಪ್ರಕಟಿಸಲು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಪ್ರತಿಭಾ ಪಲಾಯನಗೈಯದೆ ದಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಶಾಲಾ ದಿನಗಳಲ್ಲಿ ಅಥವಾ ರಜಾದಿನಗಳಲ್ಲಿ ಕಲಿಕೆಯೊಂದಿಗೆ ಪತ್ರಿಕೆಗಳಿಗೆ ಉತ್ತಮ ವರದಿಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದರು.

ಕನ್ನಡ ಸಂಘದ ನಿರ್ದೇಶಕರಾದ ಉಷಾ ಯಶ್ವಂತ್, ರಾಮ ನಾಯ್ಕರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತ್ವಿನ್ ಸ್ವಾಗತಿಸಿ, ಸ್ಪಂದನಾ ವಂದಿಸಿದರು. ಹರ್ಷಿತಾ ಮತ್ತು ಬಳಗ ಪ್ರಾರ್ಥಿಸಿದರು. ಅಬ್ದುಲ್ ರಹಿಮಾನ್ ಫಾಯಿಜ್‍ರವರು ಕಾರ್ಯಕ್ರಮ ನಿರೂಪಿಸಿದರು.