ಸಾಂಸ್ಕೃತಿಕ, ಸಾಹಿತ್ಯಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದತ್ತ ಅರಳುತ್ತಿರುವ ಬಹುಮುಖ ಪ್ರತಿಭೆ ಶ್ರೀದೇವಿ

ಪ್ರತಿಭೆಗೆ ಮನ್ನಣೆ ಸಿಗಬೇಕಾದರೆ ಸೂಕ್ತ ವೇದಿಕೆಯೂ ಸಿಗಬೇಕಾದುದು ಅತ್ಯವಶ್ಯಕ. ಆದರೆ ಕೆಲವರು ಪ್ರತಿಭೆ ಇದ್ದರೂ, ವೇದಿಕೆಯನ್ನೂ ಕೊಟ್ಟರೂ ಅದನ್ನು ತೋರ್ಪಡಿಸದೆ ಸುಖಾ ಸುಮ್ಮನೆ ಕಾಲ ಕಳೆಯುವವರೂ ನಮ್ಮಲ್ಲಿದ್ದಾರೆ. ಆದರೆ ಇಲ್ಲೊಬ್ಬಳು ಹುಡುಗಿ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿ ಎಲ್ಲರ ಪ್ರಶಂಸೆಯನ್ನು ಪಡೆದಿರುತ್ತಾರೆ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದತ್ತ ಸಾಧನೆಯನ್ನು ಮಾಡಿರುವುದು ಅಕ್ಷರಸಃ ಸತ್ಯವಾಗಿದೆ.

ಹೌದು, ಇದು ಮತ್ಯಾರೂ ಅಲ್ಲ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀದೇವಿ ಕೆ. ಎಂಬ ಅಪ್ಪಟ ಪ್ರತಿಭೆ. ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಇತಿಹಾಸದಲ್ಲಿಯೇ ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಭಾಗದ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದತ್ತ ಸಾಧನೆ ಮಾಡುತ್ತಿರುವುದು ಇದೇ ಮೊದಲ ಬಾರಿಗೆ ಎಂಬುದು ಪ್ರಶಂಸನೀಯವಾಗಿದೆ. ಫಿಲೋಮಿನಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲೂ ಶ್ರೀದೇವಿಯವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃಧ್ಧಿ ನಿಧಿ ಇದರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು 2018-19ರಲ್ಲಿ ಭಾಗವಹಿಸಿದ ಶ್ರೀದೇವಿ ಕೆ.ರವರು ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ಪ್ರಶಸ್ತಿ ಪತ್ರ ಹಾಗೂ ರೂ.12 ಸಾವಿರ ನಗದನ್ನು ಕೂಡ ಅವರು ಪಡೆದಿರುತ್ತಾರೆ. ಮಹಾವೀರ ಪದವಿ ಪೂರ್ವ ಕಾಲೇಜು ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜ್‍ನಲ್ಲಿ ನಡೆದ ಜಿಲ್ಲಾ ಮತ್ತು ಮೈಸೂರು ವಿಭಾಗ ಮಟ್ಟದ ಸ್ಪರ್ಧೆಯ ಆಶುಭಾಷಣ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಹಲವಾರು ಬಹುಮಾನಗಳನ್ನು ಶ್ರೀದೇವಿಯವರು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿ ಬಿರುದು:

ಜಿಲ್ಲೆಯ ಹಲವಾರು ಕಡೆಗಳಲ್ಲಿ ನಡೆದ ಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾಳೆ ಶ್ರೀದೇವಿಯವರು. ಮಾತ್ರವಲ್ಲದೆ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಹಾಗೂ ಪ್ರಸ್ತುತ ವರ್ಷದ ಬಹುಮುಖ ಪ್ರತಿಭಾವಂತ ವಿದ್ಯಾರ್ಥಿನಿ ಎಂಬ ಬಿರುದಿಗೂ ಪಾತ್ರರೆನಿಸಿಕೊಂಡಿದ್ದಾಳೆ. ನಗುಮುಖದ ವ್ಯಕ್ತಿತ್ವದ ಶ್ರೀದೇವಿಯವರು ಕೇವಲ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸ್ಪರ್ಧೆಗಳಲ್ಲಿ ಮಾತ್ರ ಮುಂಚೂಣಿಯಲ್ಲಿರದೆ ಓದಿನಲ್ಲಿ ಹಾಗೂ ನೃತ್ಯದಲ್ಲಿಯೂ ತನ್ನ ಪಾರಮ್ಯ ಮೆರೆದಿರುತ್ತಾರೆ.

ನಿರರ್ಗಳವಾಗಿ ಮಾತಾನಾಡುವ ಕಲೆ:

ಶ್ರೀದೇವಿಯವರು ಹಲವಾರು ಕಡೆ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿರುವುದು ನಿಜ. ಆದರೆ ಯಾವುದೇ ಪೂರ್ವಾಭ್ಯಾಸ ಮಾಡದೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಾತನಾಡುವುದು ಒಂದು ಕಲೆಯೇ ಆಗಿದೆ. ಇತ್ತೀಚೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಾರಿತ ಸಂದೇಶ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀದೇವಿಯವರು ನಾರಾಯಣ ಗುರುಗಳ ಬಗ್ಗೆ ಅಚ್ಚ ಕನ್ನಡದ ಜೊತೆಗೆ ಸ್ಪಷ್ಟ ಉಚ್ಚಾರದೊಂದಿಗೆ ಎಲ್ಲರಿಗೂ ಅರ್ಥವಾಗುವ ಹಾಗೆ ನಿರರ್ಗಳವಾಗಿ ವಿಷಯವನ್ನು ಮಂಡಿಸುವುದರ ಜೊತೆಗೆ ಮಾತನ್ನು ಹಾವಭಾವದೊಂದಿಗೆ ಪ್ರದರ್ಶನ ನೀಡಿದ್ದು ಕೂಡ ಅಲ್ಲಿ ನೆರೆದಿದ್ದವರಿಗೆ ರೋಮಾಂಚನ ಉಂಟು ಮಾಡಿತ್ತು ಮಾತ್ರವಲ್ಲದೆ ಆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದರೂ ಕೂಡ.

ಅಮ್ಮನ ಪ್ರೋತ್ಸಾಹ:

ಕಲ್ಲಾರೆ ನಿವಾಸಿ ಮಹಾಬಲ ಭಟ್ ಹಾಗೂ ಸಂತ ಫಿಲೋಮಿನಾ ಕಾಲೇಜ್‍ನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಪ್ರೇಮಲತಾರವರ ಸುಪುತ್ರಿಯಾಗಿರುವ ಶ್ರೀದೇವಿಗೆ ತನ್ನ ಪ್ರತಿಭೆಯ ಹಿಂದೆ ತನ್ನ ಅಮ್ಮನ ಪ್ರೋತ್ಸಾಹ ಖಂಡಿತಾ ಇದೆ ಎನ್ನುತ್ತಾರೆ. ತನ್ನ ಪ್ರತಿಯೊಂದು ಚಟುವಟಿಕೆಗಳಲ್ಲೂ ಬೆಂಗವಲಾಗಿ ನಿಂತು, ಪ್ರೋತ್ಸಾಹದಾಯಕ ಮಾತುಗಳೊಂದಿಗೆ ನನಗೆ ನಿರಂತರ ಪ್ರೋತ್ಸಾಹಿಸುತ್ತಿದ್ದಾರೆ ಜೊತೆಗೆ ಫಿಲೋಮಿನಾ ಕಾಲೇಜ್‍ನ ಪ್ರಾಂಶುಪಾಲರಾಗಲಿ, ಉಪನ್ಯಾಸಕ ವೃಂದವಾಗಲಿ ತನ್ನ ಪ್ರತಿಭೆಗೆ ಮನ್ನಣೆ ಸಿಗುವಂತೆ ಸೂಕ್ತ ವೇದಿಕೆಯನ್ನು ಕೂಡ ನಿರ್ಮಿಸಿ ಕೊಟ್ಟಿದ್ದಾರೆ ಎಂದು ಲವಲವಿಕೆಯಿಂದ ಹೇಳುತ್ತಾರೆ ಶ್ರೀದೇವಿಯವರು.

ಬಾಕ್ಸ್

ಶ್ರೀದೇವಿಯವರು ಅಪ್ಪಟ ಪ್ರತಿಭೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ವಿಷಯವಾಗಲಿ ತನ್ನಿಂದಾಗದು ಎನ್ನುವ ಕೊರಗನ್ನು ಹೊಂದದೆ ತಾನು ಸಾಧಿಸಿ ತೋರಿಸುತ್ತೇನೆ ಎಂಬ ಹಠವಾದಿ ಸ್ವಭಾವದ ವ್ಯಕ್ತಿತ್ವ ಅವಳದು. ಮಾತ್ರವಲ್ಲದೆ ಯಾವುದೇ ಅಳುಕು-ಅಂಜಿಕೆಯಿಲ್ಲದೆ ಬಹಳ ಲವಲವಿಕೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಶ್ರೀದೇವಿಯವರು ಅಪ್ಪಟ ಪ್ರತಿಭೆ ಎನ್ನುವುದಕ್ಕೆ ಸಾಕ್ಷ್ಯ ಎಂಬಂತೆ ಸ್ಪರ್ಧೆ ಯಾವುದೇ ಇರಲಿ, ಸ್ಪರ್ಧಾ ಟೈಟಲ್ ಕೊಟ್ಟರೆ ಸಾಕು. ಕೂಡಲೇ ಸಜ್ಜಾಗಿ ಕೊಟ್ಟ ವಿಷಯಕ್ಕೆ ಸಂಬಂಧಪಟ್ಟಂತೆ ನಿರರ್ಗಳವಾಗಿ ಮಾತನಾಡುವುದೇ ಇನ್ನೂ ಅಭಿಮಾನದ ಸಂಗತಿಯಾಗಿದೆ. ಶ್ರೀದೇವಿಯಂತವರು ನಿಜಕ್ಕೂ ಕಾಲೇಜ್‍ಗೆ ಹಿರಿಮೆಯನ್ನು ತಂದು ಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ.