ಟ್ಯಾಲೆಂಟ್ಸ್ ಡೇ – ಸಾಂಸ್ಕೃತಿಕ ಸ್ಪರ್ಧೆ

ಪ್ರತಿಯೋರ್ವ ವ್ಯಕ್ತಿಗೂ ಭಗವಂತ ಪ್ರತಿಭೆಯನ್ನು ಕರುಣಿಸಿರುತ್ತಾನೆ. ಆದರೆ ಭಗವಂತ ನೀಡಿದ ಪ್ರತಿಭೆಯನ್ನು ಅನಾವರಣಗೊಳಿಸುವುದು ವ್ಯಕ್ತಿಯ ಕರ್ತವ್ಯವಾಗಿದೆ. ಆದ್ದರಿಂದ ನಮ್ಮೊಳಗಿನ ಪ್ರತಿಭೆ ಬೆಳಕಿಗೆ ಬರಬೇಕಾದರೆ ನಮ್ಮಲ್ಲಿ ಮೊದಲು ಆಸಕ್ತಿ ಮತ್ತು ಅಭಿರುಚಿಯನ್ನು ಮೈಗೂಡಿಸಿಕೊಂಡಾಗ ಯಶಸ್ವಿ ಜೊತೆಗೆ ಬದುಕು ಕೂಡ ಹಸನಾಗಬಲ್ಲುದು ಎಂದು ಜ್ಯೂನಿಯರ್ ಶಂಕರ್ ಜಾದು ಜಗತ್ತಿನ ಗಿಲಿಗಿಲಿ ಮ್ಯಾಜಿಕ್ ಖ್ಯಾತಿಯ ತೇಜಸ್ವಿಯವರು ಹೇಳಿದರು.

ಅವರು ನ.13 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ಕಾಲೇಜ್‍ನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಕಾಲೇಜ್ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಗೊಳಿಸಲು ಆಯೋಜಿಸಲಾದ `ಟ್ಯಾಲೆಂಟ್ಸ್ ಡೇ-ಸಾಂಸ್ಕೃತಿಕ ಸ್ಪರ್ಧೆ’ಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ ಕ್ರೀಡೆಯತ್ತವೂ ಸಮತೋಲನವನ್ನು ಕಾಯ್ದುಕೊಳ್ಳಬೇಕಾದುದು ಇಂದಿನ ಅಗತ್ಯತೆಯಾಗಿದೆ. ನನ್ನಲ್ಲಿ ಸಾಧನೆಯ ಹಸಿವು ಇದೆ ಎಂಬುದನ್ನು ತೋರ್ಪಡಿಸಬೇಕಾದರೆ ಮೊದಲು ನಾವು ಉದ್ಧೇಶಿಸಿರುವ ಆಲೋಚನೆಯ ಬಗ್ಗೆ ಆಸಕ್ತಿ ಮೂಡಬೇಕಾಗಿದೆ. ನಾವು ಹೊಂದಿದ ಆಸಕ್ತಿಯನ್ನು ಬಳಿಕ ಕಾರ್ಯರೂಪಕ್ಕೆ ಇಳಿಸುವಲ್ಲಿ ಸನ್ನದ್ಧರಾದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಯಶಸ್ವಿ ಜೀವನ ನಮ್ಮದಾಗಬೇಕಾದರೆ ಜೀವನದಲ್ಲಿ ದೊರೆತ ತೊಂದರೆಗಳೊಂದಿಗೆ ಸೆಣಸಾಟ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳ ಜೀವನ ಎಂಬುದು ಗೋಲ್ಡನ್ ಲೈಫ್ ಎಂದು ಉಲ್ಲೇಖಿಸುತ್ತಾರೆ ನಿಜ. ಆದರೆ ವಿದ್ಯಾರ್ಥಿಗಳ ಜೀವನ ಗೋಲ್ಡನ್ ಲೈಫ್ ಎಂದೆನಿಸಬೇಕಾದರೆ ಶಾಲಾ-ಕಾಲೇಜುಗಳಲ್ಲಿ ಸಿಕ್ಕಂತಹ ಸುಂದರ ಅವಕಾಶಗಳ ಸದ್ವಿನಿಯೋಗವಾದಾಗ ಮಾತ್ರ ಗೋಲ್ಡನ್ ಲೈಫ್‍ಗೆ ಅರ್ಥ ಬರುತ್ತದೆ. ಪ್ರತೀ ವರ್ಷದಂತೆ ಈ ವರ್ಷವೂ ಶೈಕ್ಷಣಿಕ ವಿಭಾಗದಲ್ಲಿ ಮತ್ತು ಕ್ರೀಡೆಯಲ್ಲಿ ಕಾಲೇಜ್‍ನ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಬಹಳ ಹುಮ್ಮಸ್ಸಿನಿಂದ ಪಾಲ್ಗೊಂಡಿರುವುದು ಅಭಿನಂದನೀಯವಾಗಿದೆ ಎಂದರು.

ಕಾಲೇಜ್‍ನ ಒಟ್ಟು 17 ವಿಭಾಗಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ತೀರ್ಪುಗಾರರಾಗಿ ವಿದ್ವಾನ್ ಬಾಲಕೃಷ್ಣ ಹೊಸಮನೆ, ವಿದುಷಿ ಪೂಜಾ ಪ್ರಶಾಂತ್ ಹಾಗೂ ವಿದುಷಿ ಮೇಘ ದೇವಾಡಿಗರವರು ಸಹಕರಿಸಿದರು. ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಕ್ರೀಡೆ, ಸಾಹಿತ್ಯಕ ಹಾಗೂ ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಲಲಿತಾ ಕಲಾ ಸಂಘದ ನಿರ್ದೇಶಕಿ ಡಾ|ಆಶಾ ಸಾವಿತ್ರಿ ಸ್ವಾಗತಿಸಿ, ಉಪನ್ಯಾಸಕಿ ಸುಮಾ ಡಿ ವಂದಿಸಿದರು. ಉಪನ್ಯಾಸಕಿ ಫಿಲೋಮಿನಾ ಮೊಂತೇರೋ ಕಾರ್ಯಕ್ರಮ ನಿರೂಪಿಸಿದರು.