ಪ್ರತಿಭಾನ್ವಿತ, ಯುವಕವಿ ದಿವಿತ್ ರೈ ಪಿಯು ಕಾಲೇಜ್‍ಗೆ ಸೇರ್ಪಡೆ

ಶಾಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿವಾದದ ಹಿನ್ನೆಲೆಯಲ್ಲಿ ಶಾಲೆಯ ವಸ್ತುಸ್ಥಿತಿ ಬಗ್ಗೆ ವಿವರಿಸಿ ವರ್ಗಾವಣೆಯನ್ನು ರದ್ದುಗೊಳಿಸುವಂತೆ 14ರ ಹರೆಯದ ಬಾಲಕ ವಿದ್ಯಾರ್ಥಿಯೋರ್ವ ಹಿಂದಿನ ರಾಜ್ಯ ಸರಕಾರದ ಗೃಹಸಚಿವರಾಗಿದ್ದ ಡಾ.ಜಿ.ಪರಮೇಶ್ವರ್‍ಗೆ ಕರೆ ಮಾಡಿದ್ದು ಅಲ್ಲದೆ ಕರೆ ಮಾಡಿದ ವಿದ್ಯಾರ್ಥಿಗೆ ಗೃಹಸಚಿವರೇ ಖುದ್ದಾಗಿ ಮರು ಕರೆ ಮಾಡಿ ಸಮಸ್ಯೆಯನ್ನು ಪರಿಹರಿಸುವ ಮೂಲಕ ಸ್ಪಂದನೆ ನೀಡಿದ ಅಪರೂಪದ ಘಟನೆ 2017ನೇ, ಜುಲೈ ತಿಂಗಳಲ್ಲಿ ಆಗಿದ್ದು, ಇದು ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದು ನೆನಪಿದೆಯೇ?

ಖಂಡಿತಾ ನೆನಪಿರಬೇಕು. ಜಿಲ್ಲೆಯಲ್ಲಿ ಅತೀ ಹೆಚ್ಚು ಮಕ್ಕಳಿರುವ ಸರಕಾರಿ ಶಾಲೆ ಎಂದೇ ಹೆಗ್ಗಳಿಕೆ ಪಡೆದಿರುವ ಪುತ್ತೂರಿನ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ದಿವಿತ್ ರೈ ಎಂಬಾತ ಪ್ರತಿಭಾನ್ವಿತ ವಿದ್ಯಾರ್ಥಿಯೇ ಅಂದು ಸುದ್ದಿಯಾಗಿದ್ದು ಮಾತ್ರ ನಿಜ. ರಾತ್ರಿ ಒಂಭತ್ತು ಗಂಟೆಗೆ ಅಂದಿನ ಗೃಹಸಚಿವ ಡಾ.ಪರಮೇಶ್ವರ್‍ರವರು ದಿವಿತ್ ರೈಯವರಿಗೆ ಪೋನ್ ಮಾಡಿ ತನ್ನ ನೆಚ್ಚಿನ ನಾಲ್ವರು ಶಿಕ್ಷಕರ ವರ್ಗಾವಣೆಯನ್ನು ತಡೆಹಿಡಿಯಬೇಕೇನ್ನುವ ದಿವಿತ್‍ರವರ ಸಮಸ್ಯೆಯನ್ನು ಬಗೆಹರಿಸುವತ್ತ ಶೀಘ್ರ ಸ್ಪಂದನೆ ನೀಡಿದ್ದರು. ಇಂದು ಅದೇ ಪ್ರತಿಭಾನ್ವಿತ ವಿದ್ಯಾರ್ಥಿ ದಿವಿತ್ ರೈಯವರು ಪುತ್ತೂರು ತಾಲೂಕಿನ ಹಿರಿಯ ಶಿಕ್ಷಣ ಸಂಸ್ಥೆ ಎನಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ಗೆ ಪ್ರಥಮ ಪಿಯುಸಿ ವ್ಯಾಸಂಗಕ್ಕೆ ದಾಖಲಾತಿಯನ್ನು ಪಡೆದುಕೊಂಡಿದ್ದಾರೆ. ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ದಿವಿತ್ ರೈಯವರ ಪ್ರತಿಭೆಯನ್ನು ಶ್ಲಾಘಿಸಿ, ಕಾಲೇಜ್‍ಗೆ ದಾಖಲಾತಿಯನ್ನು ಮಾಡಿಕೊಂಡಿದ್ದಾರೆ ಮಾತ್ರವಲ್ಲದೆ ದಿವಿತ್‍ರವರಿಗೆ ಅಭೂತಪೂರ್ವ ಸ್ವಾಗತವನ್ನು ಕೋರಿದ್ದಾರೆ.

ಬಹುಮುಖ ಪ್ರತಿಭೆಯ ದಿವಿತ್ ರೈ:

ದಿವಿತ್ ರೈಯರವರು ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿ ಮತ್ತು ಯುವಕವಿಯಾಗಿದ್ದು, ತನ್ನ ಕೈಚಳಕದಲ್ಲಿ ಡ್ಯೂ ಡ್ರಾಪ್ಸ್ ಹಾಗೂ ಸಿಂಪಲ್ ಲೈಫ್ ಇಂಗ್ಲೀಷ್ ಎಂಬ ಎರಡು ಕವನ ಸಂಕಲನಗಳನ್ನು ರಚಿಸಿ ಈಗಾಗಲೇ ಲೋಕಾರ್ಪಣೆಗೊಂಡಿದೆ. ಖುದ್ದು ಗೃಹಸಚಿವ ಡಾ.ಪರಮೇಶ್ವರ್‍ರವರೇ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ, ತನ್ನ ನಿಧಿಯಿಂದ ಶಾಲೆಗೆ ಅನುದಾನ ನೀಡಿದ್ದರು ಅಲ್ಲದೆ ದಿವಿತ್‍ರವರ ಕವನಸಂಕಲನಗಳನ್ನು ಬಿಡುಗಡೆಗೊಳಿಸಿದ್ದರು. ದಿವಿತ್‍ರವರ ನೂತನ ಎರಡು ಕವನಸಂಕಲನಗಳನ್ನು ಪ್ರಾಂಶುಪಾಲ ವಂ|ವಿಜಯ್ ಲೋಬೋರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದ್ದರು ಕೂಡ. ಅಲ್ಲದೆ ದಿವಿತ್‍ರವರು ಹಲವು ಕವಿಗೋಷ್ಠಿ ಹಾಗೂ ಕಥಾಗೋಷ್ಠಿಗಳಲ್ಲಿ ಭಾಗವಹಿಸಿ ಗಮನ ಸೆಳೆದಿರುತ್ತಾರೆ. ದಿವಿತ್‍ರವರ ಮೂರನೇ ಕವನ ಸಂಕಲನ ಈಗಾಗಲೇ ಸಂಪೂರ್ಣಗೊಂಡಿದ್ದು, ಪ್ರಕಟಣೆಗೆ ದಿನಗಣನೆ ಎನಿಸುತ್ತಿದೆ. ಶಿವರಾಮ ಕಾರಂತ ಸಾಹಿತ್ಯ ವೇದಿಕೆಯಿಂದ ನಡೆದ ಮೂರನೇ ವರ್ಷದ ಮಕ್ಕಳ ಸಾಹಿತ್ಯ ಸಂಭ್ರಮ ಹಾಗೂ ನಾಲ್ಕನೇ ವರ್ಷದ ವಾರ್ಷಿಕ ಸಂಚಿಕೆ ಹಾರ ಲೋಕಾರ್ಪಣೆ ಕಾರ್ಯಕ್ರಮದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ದಿವಿತ್‍ರವರು ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಹೊಯ್ಸಳ ಪ್ರಶಸ್ತಿ ಪುರಸ್ಕøತ:

ಶಿಕ್ಷಕರ ವರ್ಗಾವಣೆ ತಡೆಯುವ ನಿಟ್ಟಿನಲ್ಲಿ ವಿಶಿಷ್ಟ ಹೋರಾಟದ ಮೂಲಕ ಯಶಸ್ಸು ಕಂಡ ಹಾರಾಡಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದ ದಿವಿತ್‍ರವರ ಕಾರ್ಯವೈಖರಿಯನ್ನು ಮನಗಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು 2016-17ನೇ ಸಾಲಿನಲ್ಲಿ ದಿವಿತ್ ರೈಯವರಿಗೆ ಜಿಲ್ಲಾ ಮಟ್ಟದ ಹೊಯ್ಸಳ ಪ್ರಶಸ್ತಿಯನ್ನು ನೀಡಿ ಪುರಸ್ಕøತಗೊಳಿಸಿದೆ. ಬನ್ನೂರು ನಿವಾಸಿ ಉದಯ ಕುಮಾರ್ ರೈ ಹಾಗೂ ಪ್ರತಿಮಾ ರೈ ದಂಪತಿ ಪುತ್ರನಾದ ದಿವಿತ್ ರೈಯವರು ಶಾಲೆಯ ನಾಲ್ವರು ಶಿಕ್ಷಕರನ್ನು ವರ್ಗಾವಣೆ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆದೇಶ ಬಂದಾಗ ಅದರ ವಿರುದ್ಧ ದಿವಿತ್‍ರವರು ಪ್ರತಿರೋಧ ತೋರಿದ್ದರು. ದಿವಿತ್‍ರವರ ದಾಖಲಾತಿ ಸಂದರ್ಭದಲ್ಲಿ ದಿವಿತ್‍ರವರ ತಾಯಿ ಪ್ರತಿಮಾ ರೈ, ಮಾವ ರವಿಪ್ರಸಾದ್ ಶೆಟ್ಟಿ ಬನ್ನೂರು, ದಿವಿತ್‍ರವರ ತಮ್ಮ ಉಪಸ್ಥಿತರಿದ್ದರು.

ಬಾಕ್ಸ್

ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಿಂದಿನಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಬಹಳ ಹೆಸರುವಾಸಿಯಾಗಿದೆ. ನಂಬಿಕೆ ಮತ್ತು ಸೇವೆ ಎಂಬ ಧ್ಯೇಯವಾಕ್ಯದಡಿ ಫಿಲೋಮಿನಾ ವಿದ್ಯಾಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ ವಿದ್ಯಾಸಂಸ್ಥೆ ಶೈಕ್ಷಣಿಕ ರಂಗದಲ್ಲಿ, ಕ್ರೀಡೆಯಲ್ಲಿ ಹಾಗೂ ಸಾಹಿತ್ಯತ/ಸಾಂಸ್ಕøತಿಕ ರಂಗದಲ್ಲಿ ಅದ್ವಿತೀಯ ಸಾಧನೆಗೈದಿದೆ. ಪ್ರಸ್ತುತ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಸ್ವಸ್ತಿಕ್ ಪಿ.ರವರು ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿಯೇ ಮೂರನೇ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಇದೀಗ ಪ್ರತಿಭಾನ್ವಿತ ವಿದ್ಯಾರ್ಥಿ ದಿವಿತ್‍ರವರು ನಮ್ಮ ವಿದ್ಯಾಸಂಸ್ಥೆಗೆ ದಾಖಲಾತಿ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಕಾಲೇಜು ದಿವಿತ್‍ರವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವತ್ತ ಪ್ರೋತ್ಸಾಹ ನೀಡುವೆವು.

-ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಫಿಲೋಮಿನಾ ಪಿಯು ಕಾಲೇಜು.

ರೌಂಡ್ ಬಾಕ್ಸ್

ದಿವಿತ್‍ರವರ ಧೈರ್ಯವನ್ನು ಮೆಚ್ಚಿದ ಅಂದಿನ ಗೃಹಮಂತ್ರಿ ಡಾ.ಪರಮೇಶ್ವರ್‍ರವರು ದಿವಿತ್‍ರವರ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಘೋಷಿಸಿ ಅದೇ ರೀತಿ ನಡೆದುಕೊಂಡು ಬಂದಿದ್ದರು ಮಾತ್ರವಲ್ಲದೆ ಜಪಾನ್‍ನಲ್ಲಿ ನಡೆದಿರುವ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಾಂಬೂರಿ ಜಪಾನ್ ಪ್ರವಾಸದ ಸಂಪೂರ್ಣ ವೆಚ್ಚವನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‍ರವರೇ ಬರಿಸಲು ಮುಂದಾಗಿದ್ದರು ಎಂದು ದಿವಿತ್‍ರವರ ಕುಟುಂಬ ಸದಸ್ಯರು ಅಂದು ಮತ್ತು ಇಂದು ಕೂಡ ಸಂತಸ ವ್ಯಕ್ತಪಡಿಸಿದ್ದರು.