`ಪರಿಸರ ಹಾಗೂ ಹಾವು-ನಾವು’ ಕಾರ್ಯಕ್ರಮ

ವಿಶ್ವದಲ್ಲಿ ಮೂರನೇ ಒಂದು ಭಾಗ ಮಾತ್ರ ಭೂಮಿಯಾಗಿದ್ದು, ಇದರಲ್ಲಿ ಶೇ.22ರಷ್ಟು ಅರಣ್ಯ ಬೇಕಾಗಿದೆ. ಪರಿಸರವು ಸಮೃದ್ಧವಾಗಿ ಬೆಳೆಯಬೇಕಾದರೆ ಎಲ್ಲಾ ಜೀವಿಗಳು ಅಗತ್ಯವಾಗಿ ಬೇಕಾಗುತ್ತದೆ. ಆದ್ದರಿಂದ ಪರಿಸರವನ್ನು ಹಾಗೂ ಪ್ರಾಣಿ ಜೀವಿ ಸಂಕುಲನವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಉರಗ ತಜ್ಞ, ಮಂಗಳೂರಿನ ಝೇವಿಯರ್ ಕಿರಣ್(ಸ್ನೇಕ್ ಕಿರಣ್) ಪಿಂಟೋರವರು ಹೇಳಿದರು.

ಅವರು ಜೂ.29 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಇಕೋ ಕ್ಲಬ್‍ನ ನೇತೃತ್ವದಲ್ಲಿ `ಪರಿಸರ ಹಾಗೂ ಹಾವು-ನಾವು’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಭೂಮಿಯಲ್ಲಿ ಸುಮಾರು 84 ಲಕ್ಷ ಜೀವರಾಶಿಗಳಿವೆ. ಇವುಗಳೆಲ್ಲವನ್ನೂ ನಿಯಂತ್ರಿಸುವುದು ಹಾವುಗಳು. ಮನುಷ್ಯನ ಮಾತ್ರ ಬದುಕಬೇಕು ಎನ್ನುವುದು ಸ್ವಾರ್ಥತೆಯಾಗಿದೆ. ವಿಷದ ಹಾವು ಕಚ್ಚಿದಾಗ ಮಾನವ ಸಾಯುತ್ತಾನೆ ಎಂಬುದು ಸುಳ್ಳು. ಮಾನವ ಒಂದೋ ಹೆದರಿಕೆಯಿಂದ ಅಥವಾ ಬೇರೆ ಯಾವುದೋ ಕಾಯಿಲೆ ಇದ್ದಲ್ಲಿ ದೇಹದಲ್ಲಿ ವೈಪರೀತ್ಯ ಉಂಟಾಗಿ ಸಾವು ಸಂಭವಿಸುವುದು ಆಗಿದೆ. ಭಾರತದಲ್ಲಿ 330 ಜಾತಿಯ ಹಾವುಗಳಿದ್ದು ಇದರಲ್ಲಿ 35 ಹಾವುಗಳು ಮಾತ್ರ ವಿಷಯುಕ್ತವಾಗಿದೆ ಎಂದು ಹೇಳಿ ಹಾವುಗಳ ಪ್ರಕಾರಗಳು, ಅವುಗಳಲ್ಲಿನ ವಿಭಿನ್ನತೆಗಳು ಮುಂತಾದುವುಗಳನ್ನು ಪರದೆಯ ಮುಖಾಂತರ ಪ್ರಸ್ತುತಪಡಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಸಂಪನ್ಮೂಲ ವ್ಯಕ್ತಿಯಾಗಿರುವ ಸ್ನೇಕ್ ಕಿರಣ್ ಓರ್ವ ಪರಿಸರ ಪ್ರೇಮಿ, ಉರಗ ಪ್ರೇಮಿ. ಅವರು ಪರಿಸರ ಹಾಗೂ ಹಾವುಗಳನ್ನು ಪ್ರೀತಿಸುವುದಲ್ಲದೆ ಅವುಗಳ ಸಂರಕ್ಷಣೆಯನ್ನೂ ಕೂಡ ಮಾಡುತ್ತಾರೆ. ಮನುಷ್ಯ ಮಾತ್ರ ಈ ಭೂಮಿಯಲ್ಲಿ ಬದುಕುವುದು ಅಲ್ಲ. ಪ್ರಾಣಿಗಳಿಗೂ ಕೂಡ ಬದುಕುವ ಹಕ್ಕಿದೆ ಎಂಬುದನ್ನು ನಾವು ಅರಿಯಬೇಕಾಗಿದೆ. ಪ್ರತಿಯೋರ್ವ ಪ್ರಜ್ಞಾವಂತ ನಾಗರಿಕ ಪರಿಸರ ಹಾಗೂ ಜೀವರಾಶಿಗಳ ಸಂರಕ್ಷಣೆಯನ್ನು ಮಾಡುವಲ್ಲಿ ಪಣ ತೊಡಬೇಕಾಗಿದೆ.

ಇಕೋ ಕ್ಲಬ್ ನಿರ್ದೇಶಕಿಯರಾದ ಕವಿತ, ಶಿಲ್ಪಾ ರೊಡ್ರಿಗಸ್‍ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೈತ್ರಾ ಮತ್ತು ಬಳಗ ಪ್ರಾರ್ಥಿಸಿದರು. ಅಲೀಷಾ ಮಸ್ಕರೇನ್ಹಸ್ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಸುಧನ್ವ ಶ್ಯಾಮ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಹಾವುಗಳು ಮೃದು ಸ್ವಭಾವದ ಜೀವಿಗಳಾಗಿವೆ. ಹಾವುಗಳು ತನಗೆ ಬೇಕಾದ ಆಹಾರವನ್ನು ತಿನ್ನುವುದು, ಮಲಗುವುದು ಮತ್ತು ವೈರಿಗಳೊಂದಿಗೆ ಪ್ರತಿಭಟಿಸುವುದು ಇವೇ ಅವಕ್ಕೆ ತಿಳಿದಿರುವ ವಿಧಾನಗಳು. ನಾಗರ ಹಾವು ವಿಷಕಾರಿ ಹೌದು. ಆದರೆ ಅವುಗಳು ಬೇಕೆಂದಲೇ ಕಚ್ಚುವುದಿಲ್ಲ. ತನಗೆ ನೋವಾದಾಗ ಮಾತ್ರ ಪ್ರತಿಭಟಿಸುವಾಗ ಕಚ್ಚುತ್ತದೆಯೇ ಹೊರತು ಇಲ್ಲದಿದ್ದರೆ ಅವುಗಳು ತಮ್ಮ ಪಾಡಿಗೆ ಹೋಗುತ್ತಾ ಇರುತ್ತದೆ. ಹಾವಿನ ವಿಷವನ್ನು ಮದ್ದಿಗೆ ಬಹಳ ಉಪಯುಕ್ತವಾಗಿದೆ.
-ಝೇವಿಯರ್ ಕಿರಣ್ ಪಿಂಟೋ, ಉರಗ ತಜ್ಞ