ದ್ವಿತೀಯ ಪಿಯುಸಿ ಪರೀಕ್ಷೆ:ಫಿಲೋಮಿನಾದಲ್ಲಿ ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರ

ಪುತ್ತೂರು: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಎ.22 ರಿಂದ ಆರಂಭಗೊಳ್ಳಲಿದ್ದು ಪರೀಕ್ಷೆಗಳು ಮೇ.18ರ ತನಕ ನಡೆಯಲಿದೆ. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಪರೀಕ್ಷೆ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ತರಬೇತಿ ಕಾರ್ಯಾಗಾರವು ಎ.20 ರಂದು ನಡೆಯಿತು.
ಫಿಲೋಮಿನಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಲಿರುವ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಪರೀಕ್ಷೆಯ ನಿಯಮಾವಳಿಗಳ ಬಗ್ಗೆ ಮಾತನಾಡಿದರು. ಕಛೇರಿ ಅಧೀಕ್ಷಕರಾಗಿ ಉಪನ್ಯಾಸಕಿ ಶ್ರೀಮತಿ ವತ್ಸಲಾ ಪಿ, ಉತ್ತರ ಪತ್ರಿಕಾ ಪಾಲಕರಾಗಿ ಉಪನ್ಯಾಸಕ ಸುಕುಮಾರ್ ಎಸ್.ಕೆ, ಸಹಾಯಕರಾಗಿ ಉಪನ್ಯಾಸಕರಾದ ಸುಮ ಡಿ, ಸುಮ ಪಿ.ಆರ್‍ರವರು ಪರೀಕ್ಷಾ ಸಂದರ್ಭದಲ್ಲಿ ಸಹಕರಿಸಲಿದ್ದಾರೆ. ಅಂಬಿಕಾ ಪಿಯು ಕಾಲೇಜು ಹಾಗೂ ಫಿಲೋಮಿನಾ ಪಿಯು ಕಾಲೇಜಿನ ಉಪನ್ಯಾಸಕರು ಕೊಠಡಿ ಮೇಲ್ವಿಚಾರಕಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಫಿಲೋಮಿನಾ ಪಿಯು ಕಾಲೇಜಿನ ಡೀನ್‍ಗಳಾದ ಯಶ್ವಂತ್ ಎಂ.ಡಿ, ಭರತ್ ಕುಮಾರ್, ಗೋವಿಂದ ಪ್ರಕಾಶ್ ಸೇರಿದಂತೆ ಫಿಲೋಮಿನಾ ಪಿಯು ಕಾಲೇಜಿನ ಹಾಗೂ ಅಂಬಿಕಾ ಪಿಯು ಕಾಲೇಜಿನ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು ಉಪಸ್ಥಿತರಿದ್ದರು.
ಫಿಲೋಮಿನಾ ಪಿಯು ಕಾಲೇಜ್‍ನಲ್ಲಿ ಪಿಯು ಕಾಲೇಜುಗಳಾದ ವಿವೇಕಾನಂದ ಪಿಯು ಕಾಲೇಜು, ಬೆಟ್ಟಂಪಾಡಿ ಸರಕಾರಿ ಪಿಯು ಕಾಲೇಜು, ಮುಕ್ರಂಪಾಡಿ ಮಹಿಳಾ ಪದವಿ ಪೂರ್ವ ಕಾಲೇಜ್‍ನಿಂದ ಒಟ್ಟು 834 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಪರೀಕ್ಷೆಯು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30ವರೆಗೆ ನಡೆಯಲಿದೆ ಎಂದು ವಿದ್ಯಾರ್ಥಿಗಳು ಗಮನಿಸಬೇಕಾಗಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
ಬಾಕ್ಸ್
ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಿ…
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ವಿದ್ಯಾರ್ಥಿಗಳಿಗೆ ಉತ್ತರಿಸಲು ಹೆಚ್ಚಿನ ಆಯ್ಕೆಯನ್ನು ಒದಗಿಸಿಕೊಟ್ಟಿದೆ ಮಾತ್ರವಲ್ಲದೆ ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಗಳಿಸಲು ಪೂರಕವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ತಯಾರಿಯೊಂದಿಗೆ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ಫಿಲೋಮಿನಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿದೆ. ಪ್ರಸ್ತುತ ವರ್ಷ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವು ಹೊಸತಾಗಿದ್ದು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಉಪನ್ಯಾಸಕರು, ಆಡಳಿತ ಸಿಬ್ಬಂದಿ ವಿದ್ಯಾರ್ಥಿ ಸ್ನೇಹಿಯಾಗಿ ಕಾಳಜಿ ವಹಿಸಬೇಕು.
-ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಫಿಲೋಮಿನಾ ಪಿಯು ಕಾಲೇಜು