ಫಿಲೋಮಿನಾದಲ್ಲಿ ಮೇಳೈಸಿದ `ಫಿಲೋ ಮಿಲನ್’

ಶೈಕ್ಷಣಿಕ ವಿದ್ಯಾರ್ಥಿ ಜೀವನದಲ್ಲಿ ನನಗೆ ಶಿಸ್ತು ಎಂಬುದು ಏನು ಎಂಬುದನ್ನು ಫಿಲೋಮಿನಾ ವಿದ್ಯಾಸಂಸ್ಥೆಯು ಕಲಿಸಿಕೊಟ್ಟಿದೆ. ಜೊತೆಗೆ ಶಿಸ್ತಿನ ಸಿಪಾಯಿಗಳಂತೆ ಇದ್ದಂತಹ ಅಂದಿನ ಪ್ರಾಧ್ಯಾಪಕರುಗಳು ವಿದ್ಯಾರ್ಥಿಗಳು ತಪ್ಪು ಮಾಡಿದ ಸಂದರ್ಭದಲ್ಲಿ ನೀಡಿದಂತಹ ಶಿಕ್ಷೆಯು ಇಂದಿನ ಸುಗಮಯುತ ಜೀವನದ ಪರಿವರ್ತನೆಗೆ ದಾರಿದೀಪವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 1966ರಿಂದ 1971ರ ವರೆಗೆ ವಿದ್ಯಾರ್ಥಿಯಾಗಿದ್ದ ಪ್ರಸ್ತುತ ಸುಳ್ಯ ಬಾರ್ ಎಸೋಸಿಯೇಶನ್‍ನ ಸದಸ್ಯ ಹಾಗೂ ನೋಟರಿ ವಕೀಲರಾದ ನಳಿನ್ ಕುಮಾರ್ ಕೊಡ್ತಗುಳಿರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್ ತನ್ನ ಆರಂಭದಿಂದ ಇಲ್ಲಿಯವರೆಗೆ ಕೇವಲ ಫಿಲೋಮಿನಾದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು ತೆರಳಿದ ಹಿರಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರೊಂದಿಗೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಾಲೇಜಿನ ಇಂಟರ್‍ಲಾಕ್ ಪ್ರಾಂಗಣದಲ್ಲಿ ಹಮ್ಮಿಕೊಂಡ ಅಪರೂಪದ `ಫಿಲೋ ಮಿಲನ್-2020′ ಕಾರ್ಯಕ್ರಮದಲ್ಲಿ ಓರ್ವ ಅತೀ ಹಿರಿಯ ವಿದ್ಯಾರ್ಥಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳಾಗಲಿ ಯಾರೇ ಆಗಲಿ, ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಓರ್ವ ನಿಯಮದಂತೆ ಕಡ್ಡಾಯವಾಗಿ ಹೆಲ್ಮೆಟ್‍ನ್ನು ಧರಿಸಿ, ಜೀವ ಉಳಿಸಿ. ಕೇವಲ ಪೊಲೀಸ್‍ಗೋಸ್ಕರ ಹೆಲ್ಮೆಟ್ ಧರಿಸುತ್ತೇವೆ ಎಂಬ ಊಹೆ ತಪ್ಪು. ಕಾಲೇಜ್‍ನಲ್ಲಿ ತಮ್ಮ ಸಹಪಾಠಿ ಗೆಳೆಯರನ್ನು ಆರಿಸುವ ಮೊದಲು ಮೂರು ಸಲ ಯೋಚನೆ ಮಾಡಿ. ನಿಮ್ಮ ಗೆಳೆಯರ ಬಗ್ಗೆ ತಿಳಿದುಕೊಳ್ಳುವ ಸ್ವಾಭಿಮಾನ ತಮ್ಮದಾಗಲಿ. ಜೀವನದಲ್ಲಿ ಅದೆಷ್ಟೋ ವಿಚಾರಗಳು ಬರುತ್ತವೆ ಹೋಗುತ್ತವೆ. ಆದರೆ ನಂಬಿಕೆ, ವರ್ತನೆ, ಭರವಸೆ, ವಿಶ್ವಾಸವು ನಮ್ಮ ಜೀವನದಲ್ಲಿ ಯಾವಾಗಲೂ ಕಳೆಗುಂದದಿರಲಿ ಎಂಬುದೇ ನನ್ನ ಹಾರೈಕೆಯಾಗಿದೆ ಎಂದು ಹೇಳಿ ತನ್ನ ವಿದ್ಯಾರ್ಥಿ ಜೀವನದಲ್ಲಿನ ಅನುಭವಗಳನ್ನು ಮೆಲುಕು ಹಾಕಿಕೊಂಡರು.

ನಮ್ಮ ಜೀವನದ ಚರಿತ್ರೆಯನ್ನು ಹೇಳುವ ಅಭ್ಯಾಸ ಬೆಳೆಸಿಕೊಳ್ಳಿ-ಪ್ರಸನ್ನ ಭಟ್
ಪುತ್ತೂರು ಶ್ರೀರಾಮ ಕನ್‍ಸ್ಟ್ರಕ್ಷನ್‍ನ ಮಾಲಕ ಪ್ರಸನ್ನ ಎನ್.ಭಟ್‍ರವರು ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಮಾನವ ತನ್ನ ಸನ್ನಡತೆ ಎಂಬ ಕೊರತೆಯೊಂದಿಗೆ ಜೀವಿಸಿರುವುದು ಇಂದಿನ ವೈಜ್ಞಾನಿಕವಾಗಿದೆ. ಕಂಪ್ಯೂಟರ್ ಬಗ್ಗೆ ಸ್ಪೆಲ್ಲಿಂಗೇ ಗೊತ್ತಿರದ ಆ ದಿನಗಳೇ ಬೇರೆ. ಅಲ್ಲದೆ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ತಿಳಿಯದವರು ಅನಕ್ಷರಸ್ಥರೇ ಸರಿ. ಪ್ರಸ್ತುತ ವಿದ್ಯಾಮಾನದಲ್ಲಿನ ಮಾಧ್ಯಮಗಳ ಭರಾಟೆಯ ನಡುವೆ ನೈತಿಕ ಗುಣಮಟ್ಟ ಏನೋ ಕುಸಿದಿದೆ ಎಂಬ ಭಾವನೆ ಬರುತ್ತಿದೆ ಎಂದ ಅವರು ವೇದಿಕೆಯಲ್ಲಿನ ಅತಿಥಿ ಗಣ್ಯರು ಯಾರ್ಯಾರದೋ ಜೀವನ ಚರಿತ್ರೆಯನ್ನು ತಮ್ಮ ಭಾಷಣದಲ್ಲಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂಬುದನ್ನು ಹೇಳುವ ಬದಲಿಗೆ ನಮ್ಮ, ನಮ್ಮ ಜೀವನದ ಏರುಗತಿಯನ್ನು ಹೇಳುವ ಧೈರ್ಯ ಯಾರಿಗಾದರೂ ಇದೆಯೇ?. ಭೃಷ್ಟಾಚಾರ, ಅನಾಚಾರ ಮತ್ತು ಮತ್ತೊಬ್ಬರನ್ನು ಹೀಯಾಳಿಸುವುದನ್ನು ಬಿಟ್ಟು ಎಲ್ಲರನ್ನು ಪ್ರೀತಿಸುವ, ಗೌರವಿಸುವ, ದ್ವೇಷಿಸದ ಜೀವನ ನಮ್ಮದಾಗಲಿ ಎಂಬುದೇ ನನ್ನ ಸಂದೇಶವಾಗಿದೆ ಎಂದು ಅವರು ಹೇಳಿದರು.

ಸುಂದರ ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ಮುಂದುವರೆಯಿರಿ-ಡಾ.ಸತ್ಯವತಿ ಆಳ್ವ:
ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಪೆಥಾಲಜಿ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥೆಯಾಗಿರುವ ಡಾ.ಸತ್ಯವತಿ ಆರ್.ಆಳ್ವರವರು ಮಾತನಾಡಿ, ಶಿಕ್ಷಣದ ಲೆಜೆಂಡ್ ಎನಿಸಿರುವ ಮೊ|ಪತ್ರಾವೋರವರ ದೂರದೃಷ್ಟಿತ್ವದ ಕನಸುಳ್ಳ ಚಿಂತನೆಯ ಮೂಲಕ ಪುತ್ತೂರಿನಲ್ಲಿ ಫಿಲೋಮಿನಾ ವಿದ್ಯಾಸಂಸ್ಥೆಯು ನಿರ್ಮಾಣಗೊಂಡು ಹಲವರ ಬಾಳಿಗೆ ವರದಾನವಾಗಿ ಪರಿಣಮಿಸಿದ್ದು ಸುಳ್ಳಲ್ಲ. ಮಾತ್ರವಲ್ಲದೆ ಇಲ್ಲಿನ ಪ್ರತಿಯೋರ್ವ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಬೆಳೆಸಿರುವುದು ಹೆಮ್ಮೆಯೇ ಸರಿ. ಜೀವನದಲ್ಲಿ ಲಕ್ಕಿ ಇದೆ ಎಂದು ಸುಮ್ಮನೆ ಕುಳಿತರೆ ಸಾಲದು, ಬದಲಿಗೆ ಕಠಿಣ ಪರಿಶ್ರಮಪಟ್ಟಾಗ ಜೀವನದ ಗುರಿಯು ಈಡೇರಬಲ್ಲುದು ಎಂದ ಅವರು ಪ್ರಸ್ತುತ ವಿದ್ಯಾರ್ಥಿಗಳೂ ಕೂಡ ತಮ್ಮ ಸುಂದರ ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ಮುಂದುವರೆಯಿರಿ. ಪ್ರಸಕ್ತ ವಿದ್ಯಾಮಾನದಲ್ಲಿನ ಸವಾಲುಗಳ ಬಗ್ಗೆ ಅರಿಯಿರಿ. ತನಗೆ ಅಂದು ಈ ವಿದ್ಯಾಸಂಸ್ಥೆಯಲ್ಲಿ ಕಲಿತ ಶಿಸ್ತು ಇಂದು ನನ್ನ ಉದ್ಯೋಗದಲ್ಲೂ ಅದು ಮೇಳೈಸಿದೆ ಎಂದು ಹೇಳಲು ಶಿಶಿಯಾಗುತ್ತದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಗಳ ರಾಯಭಾರಿಗಳು-ವಂ|ಆಲ್ಫ್ರೆಡ್:
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಅಂದಿನ ಹಿರಿಯ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಇಂದಿನ ವಿದ್ಯಾರ್ಥಿಗಳಂತೆ ಸುಲಭದಾಯಕವಾಗಿರಲಿಲ್ಲ. ಆದರೆ ಹಿರಿಯ ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟಿದ್ದಿರಿಂದಲೇ ಇಂದು ಅವರ ಬದುಕು ಸುಖಕರವಾಗಿದೆ. ಫಿಲೋಮಿನಾ ವಿದ್ಯಾಸಂಸ್ಥೆಯು ಅಂದಿನಿಂದ ಇಂದಿನವರೆಗೆ ಯಾವುದೇ ಜಾತಿ-ಮತ, ಶ್ರೀಮಂತ-ಬಡವ ಎಂಬ ಬೇಧಭಾವವಿಲ್ಲದೆ ಎಲ್ಲರಿಗೂ ಸಮನಾಗಿ ಶಿಕ್ಷಣ ನೀಡುತ್ತಾ ಬಂದಿದೆ ಎಂದ ಅವರು ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳಾಗಿ ಸಂಸ್ಥೆಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬೇಕು. ಯಾವುದೇ ಮತ್ಸರ, ದ್ವೇಷ, ಅಸೂಯೆಗಳನ್ನು ಹೋಗಲಾಡಿಸಿ, ಹೃದಯಾಂತರಾಳದಿಂದ ಬರುವ ಆತ್ಮವಿಶ್ವಾಸದ ಮಾತುಗಳು ನಿಜಕ್ಕೂ ಆತ್ಮಸಾಕ್ಷಿಯಾಗಬಲ್ಲವು. ದೇವರ ಮಕ್ಕಳಾದ ನಾವೆಲ್ಲರೂ ಹಿರಿಯ-ಕಿರಿಯರಿಗೆ ವಿಧೇಯರಾಗುವ ಮೂಲಕ ಭಾರತದ ಪ್ರಜ್ಞಾವಂತ ನಾಗರಿಕರಾಗೋಣ ಎಂದು ಅವರು ಹೇಳಿದರು.

ಉತ್ತಮ ವರ್ತನೆ, ಕೃತಜ್ಞತಾಭಾವ, ಸರಳತೆ ಮೈಗೂಡಿಸಿಕೊಳ್ಳಿ-ವಂ|ಡಾ|ಆ್ಯಂಟನಿ:
ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ಎಲ್ಲಿ ಹೋದರೂ ತಾವು ಕಲಿತ ಶಿಕ್ಷಣ ಸಂಸ್ಥೆ ಹಾಗೂ ಕಲಿಸಿದ ಗುರುಗಳಿಗೆ ಎಂದಿಗೂ ಗೌರವ ಕೊಡುವುದನ್ನು ಮರೆಯಬಾರದು. ಜೀವನದಲ್ಲಿ ನಾವು ಯಾರನ್ನು ದೂಷಿಸುತ್ತೇವೆಯೋ ಅವರೇ ನಮಗೆ ನಮ್ಮ ಮುಂದಿನ ಜೀವನಕ್ಕೆ ಮಾದರಿಯಾಗಬಲ್ಲರು. ಪ್ರತಿಯೋರ್ವರಲ್ಲಿ ವರ್ತನೆ, ಕೃತಜ್ಞತಾಭಾವ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡಾಗ ಜೀವನವು ಪರಿಪೂರ್ಣವಾಗುತ್ತದೆ ಎಂದ ಅವರು ಸಂಸ್ಥೆಯಲ್ಲಿ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂಬುದರ ಬಗ್ಗೆ ದೂಷಿಸುವ ಬದಲು ಅವುಗಳ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು ಎಂದು ಅವರು ಹೇಳಿದರು.

ಹಿರಿಯ ವಿದ್ಯಾರ್ಥಿ ಸಾತ್ವಿಕ್ ಬೆಡೇಕರ್ ಮತ್ತು ಬಳಗ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಯೋಜಕಿ ದಿವ್ಯ ಕೆ. ಸ್ವಾಗತಿಸಿ, ಉಪನ್ಯಾಸಕಿ ಫಿಲೋಮಿನಾ ಮೊಂತೇರೋ ವಂದಿಸಿದರು. ಉಪನ್ಯಾಸಕರಾದ ಅಶ್ವಿನಿ ಕೆ, ಉಷಾ ಯಶ್ವಂತ್, ಸುಮ ಡಿ, ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ, ಆಡಳಿತ ಸಿಬ್ಬಂದಿ ದೀಪಿಕಾ ರೋಚ್‍ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಶರ್ಮನ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಬೋರ್ಡ್‍ನಲ್ಲಿರಿಸಲಾದ ಪೇಪರ್‍ವೊಂದಕ್ಕೆ ಬ್ರಶ್‍ನಿಂದ ಪೇಂಯ್ಟಿಂಗ್ ಹಚ್ಚುವ ಮೂಲಕ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆಗೊಳಿಸಲಾಯಿತು

ಫಿಲೋಮಿನಾ ವಿದ್ಯಾಸಂಸ್ಥೆಯು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಬಹಳ ಹೆಸರುವಾಸಿ. ಫಿಲೋಮಿನಾ ಕಾಲೇಜು ಕ್ರೀಡಾ ಕ್ಷೇತ್ರವಾಗಲಿ, ಕಲಿಕಾ ಕ್ಷೇತ್ರವಾಗಲಿ, ಇತರ ಯಾವುದೇ ಕ್ಷೇತ್ರವಾಗಲಿ ಸರ್ವಾಂಗೀಣ ಬೆಳವಣಿಗೆಯೊಂದಿಗೆ ಮಹತ್ತರ ಮೈಲಿಗಲ್ಲನ್ನು ಸಾಧಿಸಿದೆ ಮಾತ್ರವಲ್ಲದೆ ಅನೇಕ ಪ್ರತಿಭಾವಂತರನ್ನು ಸಮಾಜಕ್ಕೆ ನೀಡಿದೆ ಎಂಬುದು ಸುಳ್ಳಲ್ಲ. ಫಿಲೋಮಿನಾ ಪದವಿ ಪೂರ್ವ ವಿದ್ಯಾಸಂಸ್ಥೆಯು ಪ್ರತ್ಯೇಕ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸುವ ಉದ್ಧೇಶ ಹೊಂದಿಲ್ಲ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘವು ಈಗಾಗಲೇ ಚಾಲ್ತಿಯಲ್ಲಿದೆ. ಪಿಯುಸಿ ಕಾಲೇಜಿನಿಂದ ವಿದ್ಯಾರ್ಜನೆಗೈದು ತೆರಳಿದ ಹಿರಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದೇ ನಮ್ಮ ಉದ್ಧೇಶವಾಗಿತ್ತು.